ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ ಗ್ಯಾಂಗ್‌ಗಳಿಗೆ ಪಿಸ್ತೂಲ್ ಮಾರಾಟ

Last Updated 12 ಜೂನ್ 2021, 21:40 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಅಪರಾಧ ಕೃತ್ಯ ಎಸಗುವ ರೌಡಿಗಳು ಹಾಗೂ ಅಪರಾಧ ಹಿನ್ನೆಲೆಯುಳ್ಳವರಿಗೆ ಕಲಬುರ್ಗಿಯಿಂದ ನಾಡ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಸಂಗತಿ ಸಿಸಿಬಿ ತನಿಖೆಯಿಂದ ಹೊರಬಿದ್ದಿದೆ.

ಕಾಡುಬೀಸನಹಳ್ಳಿ ಸೋಮ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ರೌಡಿ ರೋಹಿತ್‌ ಹಾಗೂ ಸಹಚರರನ್ನು ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ಬಂಧಿಸಿದ್ದರು. ಕೃತ್ಯ ಎಸಗಲು ರೌಡಿ ಲೋಹಿತ್‌ಗೆ ಪಿಸ್ತೂಲ್ ಮಾರಿದ್ದ ಆರೋಪದಡಿ ಕಲಬುರ್ಗಿ ರೌಡಿ ಸುಂಕರಿ ಅಲಿಯಾಸ್ ಮಾರ್ಕೇಟ್‌ ಸತೀಶ್‌ನನ್ನೂ ಸೆರೆ ಹಿಡಿದಿದ್ದಾರೆ.

‘ಹತ್ಯೆ ಸಂಚು ಪ್ರಕರಣದ ತನಿಖೆಯಲ್ಲಿ ಮಹತ್ವದ ಮಾಹಿತಿಗಳು ಸಿಕ್ಕಿವೆ. ರೌಡಿ ಸತೀಶ್, ಅಕ್ರಮವಾಗಿ ರಾಜ್ಯದಲ್ಲಿ ನಾಡ ಪಿಸ್ತೂಲ್ ಮಾರುತ್ತಿದ್ದ ಸಂಗತಿಯೂ ಬಯಲಾಗಿದೆ. ಆತನ ಜೊತೆಯಲ್ಲಿ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಅವರಿಂದ 3 ನಾಡ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘4 ಕೊಲೆ ಪ್ರಕರಣಗಳು, ಕೊಲೆ ಯತ್ನ, ಅಪಹರಣ, ಜೀವ ಬೆದರಿಕೆ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣದಲ್ಲಿ ಸತೀಶ್ ಭಾಗಿ
ಯಾಗಿದ್ದ. ಇತ್ತೀಚೆಗೆ ಅಪರಾಧ ಕೃತ್ಯಗಳಿಂದ ದೂರವಾಗಿದ್ದ. ಅದರ ಬದಲು, ಶಸ್ತ್ರಾಸ್ತ್ರ ಮಾರಾಟ ದಂಧೆಗೆ ಇಳಿದಿದ್ದ.’

‘ಮಧ್ಯಪ್ರದೇಶದ ಶಸ್ತ್ರಾಸ್ತ್ರ ತಯಾರಿಸುವವರ ಜೊತೆ ನಂಟು ಹೊಂದಿ, ಅವರಿಂದ ಪಿಸ್ತೂಲ್ ಖರೀದಿಸುತ್ತಿದ್ದ. ಅದನ್ನೇ ರಾಜ್ಯದ ರೌಡಿಗಳು ಹಾಗೂ ಅವರ ಗ್ಯಾಂಗ್‌ಗಳಿಗೆ ಮಾರಾಟ ಮಾಡುತ್ತಿದ್ದ. ಅದೇ ಪಿಸ್ತೂಲ್ ಇಟ್ಟುಕೊಂಡು ರೌಡಿ ಗ್ಯಾಂಗ್‌ಗಳು ಸಾರ್ವಜನಿಕರನ್ನು ಬೆದರಿಸುತ್ತಿದ್ದವು’ ಎಂದೂ ತಿಳಿಸಿದರು.

‘ಶಸ್ತ್ರಾಸ್ತ್ರ ಮಾರಾಟ ದಂಧೆಯಿಂದಲೇ ಆರೋಪಿ, ಲಕ್ಷಾಂತರ ರೂಪಾಯಿ ಹಣ ಸಂಪಾದಿಸಿದ್ದಾನೆ. ಬೇನಾಮಿ ಹೆಸರಿನಲ್ಲಿ ಐಷಾರಾಮಿ ಮನೆ ನಿರ್ಮಿಸಿಕೊಂಡಿರುವ ಮಾಹಿತಿ ಇದೆ’ ಎಂದೂ ಹೇಳಿದರು.

ಜೈಲಿನಲ್ಲಿ ಪರಿಚಯ: ‘ಅಪರಾಧ ಕೃತ್ಯದಲ್ಲಿ ಬಂಧಿತರಾಗಿದ್ದ ರೌಡಿ ಲೋಹಿತ್ ಹಾಗೂ ಸತೀಶ್, ಜೈಲಿನಲ್ಲಿಯೇ ಭೇಟಿಯಾಗಿದ್ದರು. ತಾನು ಪಿಸ್ತೂಲ್ ಮಾರಾಟ ಮಾಡುತ್ತಿರುವುದಾಗಿ ಸತೀಶ್ ಹೇಳಿಕೊಂಡಿದ್ದ. ಜಾಮೀನು ಮೇಲೆ ಇಬ್ಬರೂ ಹೊರಗೆ ಬಂದಿದ್ದರು’ ಎಂದೂ ಹೇಳಿದರು.

‘ಸೋಮನನ್ನು ಹತ್ಯೆ ಮಾಡಲು ಮುಂದಾಗಿದ್ದ ರೋಹಿತ್, ಸತೀಶ್‌ಗೆ ₹ 2 ಲಕ್ಷ ಕೊಟ್ಟು ಪಿಸ್ತೂಲ್ ಪಡೆದುಕೊಂಡಿದ್ದ’ ಎಂದೂ ತಿಳಿಸಿದರು.

ತರಕಾರಿ ವಾಹನದಲ್ಲಿ ಮದ್ಯ ಸಾಗಣೆ

ಬೆಂಗಳೂರು: ತರಕಾರಿ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೆ.‍ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

‘ರಾಮಕೃಷ್ಣ ಹೆಗಡೆ ನಗರದ ವೇಲು ಐಯ್ಯನಾರ್ (36) ಹಾಗೂ ಸಂತೋಷ್ (20) ಬಂಧಿತರು. ಅವರಿಂದ 276 ಲೀಟರ್‌ ಮದ್ಯವಿದ್ದ ಬಾಟಲಿಗಳ ಬಾಕ್ಸ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ತರಕಾರಿ ತುಂಬುವ ಬಕೆಟ್‌ಗಳಲ್ಲಿ ಮದ್ಯದ ಬಾಟಲಿ ಬಾಕ್ಸ್‌ಗಳನ್ನು ಇರಿಸಲಾಗಿತ್ತು. ನಗರದಿಂದ ತಮಿಳುನಾಡಿಗೆ ಮಹೀಂದ್ರಾ ವಾಹನದಲ್ಲಿ ಮದ್ಯವನ್ನು ಸಾಗಿಸಲಾಗುತ್ತಿತ್ತು.’

‘ಮಾಹಿತಿ ಬರುತ್ತಿದ್ದಂತೆ ವಾಹನವನ್ನು ತಡೆದು ತಪಾಸಣೆ ನಡೆಸಲಾಯಿತು. ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT