ಬುಧವಾರ, ಆಗಸ್ಟ್ 4, 2021
21 °C

ಐವರು ರೌಡಿ ಶೀಟರ್‌ಗಳ ಬಂಧನ: ಮಾರಕಾಸ್ತ್ರ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾರಕಾಸ್ತ್ರ ಹಿಡಿದು ಡಕಾಯಿತಿಗೆ ಹೊಂಚು ಹಾಕುತ್ತಿದ್ದ ಐವರು ರೌಡಿ ಶೀಟರ್‌ಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸಂಘಟಿತ ಅಪರಾಧ ತಡೆ ವಿಭಾಗದ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಆರೋಪಿಗಳಿಂದ ಕಬ್ಬಿಣದ ರಾಡು, ಚಾಕು, ದೊಣ್ಣೆ ಹಾಗೂ ಖಾರದಪುಡಿ ಪೊಟ್ಟಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ದಾರಿಹೋಕರನ್ನು ಅಡ್ಡಹಾಕಿ, ನಗದು– ನಾಣ್ಯ ದೋಚಲು ಕಾದಿದ್ದಾಗ ಬಂಧಿಸಲಾಗಿದೆ.

ಸಾರಾಯಿಪಾಳ್ಯದ ಸಾದಿಕ್‌ ಅಲಿಯಾಸ್‌ ಸುಗ್ಗು (30), ಮಹಮ್ಮದ್‌ ಇಮ್ರಾನ್‌ ಅಲಿಯಾಸ್‌ ಲಾರಿ ಇಮ್ರಾನ್‌ (28), ಮುಬಾರಕ್‌ ಅಲಿಯಾಸ್‌ ಬಾಲಿ (35), ಎಚ್‌‌ಬಿಆರ್‌ ಬಡಾವಣೆಯ ಸೈಯದ್‌ ಹನೀಫ್‌ ಅಲಿಯಾಸ್‌ ಡಾನ್‌ (25) ಹಾಗೂ ಅಕ್ರಮ್‌ ಪಾಷಾ (29) ಬಂಧಿತರು.

ಸಾದಿಕ್‌, ಮುಬಾರಕ್‌, ಸೈಯದ್‌‌ ಹನೀಫ್‌ ಸಂಪಿಗೆಹಳ್ಳಿ ಠಾಣೆ ರೌಡಿಶೀಟರ್‌ ಆಗಿದ್ದು,‌ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ 20 ಪ್ರಕರಣಗಳಿವೆ. ಹನೀಫ್‌ ವಿರುದ್ಧವೂ ಕೊಲೆ ಯತ್ನ, ಹಲ್ಲೆ ಆರೋಪಗಳಿವೆ.

ಇಮ್ರಾನ್‌ ನೆಲಮಂಗಲ ಠಾಣೆಯಲ್ಲಿ ದಾಖಲಾದ ಕೊಲೆ ಪ್ರಕರಣವೊಂದರ ಆರೋಪಿ. ಅಕ್ರಮ್‌ ಪಾಷಾ ವಿರುದ್ಧವೂ ಸಂಪಿಗೆಹಳ್ಳಿ ಠಾಣೆಯಲ್ಲಿ ದರೋಡೆ ಯತ್ನದ ಪ್ರಕರಣ ಇದೆ. ಆರೋಪಿಗಳ ಬಂಧನದಿಂದ ಎಚ್‌ಎಎಲ್‌ ಠಾಣೆ ವ್ಯಾಪ್ತಿಯ ದರೋಡೆ ಪ್ರಕರಣ ಮತ್ತು ಬಾಣಸವಾಡಿ ಠಾಣೆ ವ್ಯಾಪ್ತಿಯ ಬೈಕ್‌ ಕಳವು ಪ್ರಕರಣ ಪತ್ತೆಯಾದಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು