ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಆರ್‌.ನಗರ ಉಪಚುನಾವಣೆ: ಕೊರೊನಾ ಹೆಚ್ಚಳದ ಕರಿನೆರಳು

ಮಾಸ್ಕ್‌ ಧಾರಣೆ, ಅಂತರ ಕಾಪಾಡುವಿಕೆ ಕಟ್ಟು ನಿಟ್ಟು ಜಾರಿ– 50 ಹೆಚ್ಚುವರಿ ಮಾರ್ಷಲ್‌ಗಳ ಬಳಕೆ
Last Updated 19 ಅಕ್ಟೋಬರ್ 2020, 16:55 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿನಗರ ವಲಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದು ಆರ್‌.ಆರ್‌.ನಗರ ಕ್ಷೇತ್ರದ ಉಪಚುನಾವಣೆಯ ಕರ್ತವ್ಯ ನಡೆಸುತ್ತಿರುವ ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. ಈ ಕ್ಷೇತ್ರದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ.

‘ಈ ಕ್ಷೇತ್ರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಚುನಾವಣೆ ಸಂದರ್ಭದಲ್ಲಿ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಈ ಕ್ಷೇತ್ರದಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಸಾರ್ವಜನಿಕ ಸ್ಥಳಗಳಲ್ಲಿ ಜನ ಮಾಸ್ಕ್‌ ಧರಿಸದೇ ಅಡ್ಡಾಡುವ ಬಗ್ಗೆ ಹಾಗೂ ಅಂತರ ಕಾಪಾಡುವ ಬಗ್ಗೆ ನಿಗಾ ಇಡಲು ಈ ಕ್ಷೇತ್ರಕ್ಕೆ 50 ಮಾರ್ಷಲ್‌ಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ನಗರದ ಕೇಂದ್ರ ಪ್ರದೇಶಕ್ಕಿಂತ ಹೊರ ಪ್ರದೇಶದ ವಲಯಗಳಲ್ಲಿ ಅದರಲ್ಲೂ, ಆರ್‌.ಆರ್‌.ನಗರ ವಲಯದಲ್ಲಿ ಕೊರೊನಾ ಸೋಂಕು ಪತ್ತೆ ಪ್ರಮಾಣ ಹೆಚ್ಚುತ್ತಿದೆ’ ಎಂದು ಅವರು ತಿಳಿಸಿದರು.

ಅ.6ರಿಂದ ಅ.12ರವರೆಗೆ ನಗರದ ವಲಯವಾರು ಸೋಂಕು ಪತ್ತೆ ದರವನ್ನು ಹೋಲಿಸಿ ನೋಡಿದರೆ ಆರ್‌.ಆರ್‌.ನಗರ ವಲಯ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಶೇ 11.60ರಷ್ಟು ಮಂದಿಯಲ್ಲಿಸೋಂಕು ಕಾಣಿಸಿಕೊಂಡಿದೆ. ಅತಿ ಹೆಚ್ಚು ಸೋಂಕು ಪತ್ತೆ ದರ ಇರುವುದು ಪೂರ್ವ ವಲಯದಲ್ಲಿ (12.40).

ಆರ್‌.ಆರ್‌.ನಗರ ವಲಯದಲ್ಲಿ ಅ.6ರಿಂದ ಅ.12ರವರೆಗೆ ಒಟ್ಟು 30,670 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ 3,284 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ವಲಯದಲ್ಲಿ ಕೋವಿಡ್‌ ಸೋಂಕಿತರ ಮರಣ ದರ ಶೇ 1ರಷ್ಟಿದೆ.

ಚುನಾವಣೆ ಸಂದರ್ಭದಲ್ಲೂ ಕೋವಿಡ್‌ ಸೋಂಕು ಹರಡದಂತೆ ನೋಡಿಕೊಳ್ಳಲು ಬಿಬಿಎಂಪಿ ಕಟ್ಟುನಿಟ್ಟಾದ ಕ್ರಮ ಕೈಗೊಂಡಿದೆ. ಚುನಾವಣೆ ಸಂದರ್ಭದಲ್ಲಿ ಕೋವಿಡ್‌ ಮುಂಜಾಗ್ರತಾ ಕ್ರಮಗಳ ಬಗ್ಗೆ ನಿಗಾ ವಹಿಸಲೆಂದೇ ಆರೋಗ್ಯ ವೈದ್ಯಾಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಿದೆ.

‘ಮತ ಚಲಾಯಿಸಲು ಮತಗಟ್ಟೆಗೆ ಬರುವ ಮತದಾರರ ದೇಹದ ಉಷ್ಣಾಂಶ ತಪಾಸಣೆ ಕಡ್ಡಾಯ. ಈ ವೇಳೆ ದೇಹದ ಉಷ್ಣಾಂಶ ಸಾಮನ್ಯ ಮಟ್ಟಕ್ಕಿಂತ ಹೆಚ್ಚು ಇದ್ದರೆ, ಅವರಿಗೂ ಬಿಲ್ಲೆಯನ್ನು ನೀಡಿ ಹಿಂದಕ್ಕೆ ಕಳುಹಿಸುತ್ತೇವೆ. ಸರದಿಯಲ್ಲಿ ನಿಲ್ಲಲು ಇಷ್ಟಪಡದ ಮತದಾರರಿಗೂ ಬಿಲ್ಲೆಯನ್ನು ನೀಡುತ್ತೇವೆ. ಅವರು ಸಂಜೆ ವೇಳೆ ( ಕೊನೇಯ ಒಂದು ತಾಸು) ಮತಗಟ್ಟೆಗೆ ಬಂದು ಮತ ಚಲಾಯಿಸಬಹುದು’ ಎಂದು ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಮತದಾರರು ತಮ್ಮ ಹಕ್ಕು ಚಲಯಿಸುವುದಕ್ಕೆ ಮುನ್ನ ಸೋಂಕು ನಿವಾರಕದಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಮತಗಟ್ಟೆಗಳ ಬಳಿ ಪುರುಷರಿಗೆ, ಮಹಿಳೆಯರಿಗೆ ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಸಾಲುಗಳನ್ನು ರಚಿಸಲಾಗುತ್ತದೆ. ಸರದಿಯಲ್ಲಿ ನಿಲ್ಲುವಾಗ ಕನಿಷ್ಟ ಆರು ಅಡಿ ಅಂತರ ಕಾಪಾಡಲು ಸ್ಥಳ ಗುರುತು ಮಾಡುತ್ತೇವೆ’ ಎಂದು ಮಾಹಿತಿ ನೀಡಿದರು.

‘ಮತದಾನದ ಮುನ್ನಾದಿನ ಮತಗಟ್ಟೆಗೆ ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛಗೊಳಿಸಲಿದ್ದೇವೆ. ಚುನಾವಣಾ ಸಿಬ್ಬಂದಿಯೂ ಮುಖಗವಸು, ಕೈಗವಸು ಹಾಗೂ ಮುಖ ಕವಚ ಧರಿಸಲಿದ್ದಾರೆ’ ಎಂದು ತಿಳಿಸಿದರು.

ಅಂಕಿ ಅಂಶ

* ಆರ್‌.ಆರ್‌.ನಗರ ವಲಯದ ಕೋವಿಡ್‌ ಪ್ರಮಾಣ (ಅ.12ರವರೆಗೆ):24,275

* ಒಟ್ಟು ಕೋವಿಡ್‌ ಪ್ರಕರಣಗಳು:7,702

ಕೋವಿಡ್‌ ಸೋಂಕು ಪತ್ತೆ ದರ (ಅ.6ರಿಂದ ಅ.12ರ ನಡುವೆ)

ವಲಯ; ದರ (ಶೇ)

ಬೊಮ್ಮನಹಳ್ಳಿ; 10.40

ದಾಸರಹಳ್ಳ್ಳಿ; 10.10

ಮಹದೇವಪುರ; 9.00

ಆರ್‌.ಆರ್‌.ನಗರ; 11.60

ಯಲಹಂಕ; 11.40

ದಕ್ಷಿಣ; 11.30

ಪಶ್ಚಿಮ; 11.40

ಪೂರ್ವ; 12.40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT