ಸೋಮವಾರ, ಜುಲೈ 4, 2022
22 °C
ಭಾರಿ ಮಳೆ: ಹಾನಿಗೊಳಗಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಭೇಟಿ

ಸಂತ್ರಸ್ತ ಕುಟುಂಬಗಳಿಗೆ ತಲಾ ₹ 25 ಸಾವಿರ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದ ಮನೆಗೆ ನೀರು ಮನೆಗೆ ನುಗ್ಗಿ, ಬಟ್ಟೆ, ಧವಸ ಧಾನ್ಯ, ನೀರಲ್ಲಿ ತೊಯ್ದುಹೋಗಿದ್ದರೆ, ಅಂತಹ ಕುಟುಂಬಗಳನ್ನು ಗುರುತಿಸಿ ಶನಿವಾರ ಸಂಜೆ ಒಳಗೆ ತಲಾ ₹ 25 ಸಾವಿರ ಪರಿಹಾರದ ಚೆಕ್ ವಿತರಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರವಾಹ ಉಂಟಾದ ಹೊಸಕೆರೆಹಳ್ಳಿ ವಾರ್ಡ್‌ನ ದತ್ತಾತ್ರೇಯ ನಗರ ವ್ಯಾಪ್ತಿಯ ಪ್ರದೇಶಗಳಿಗೆ ಮುಖ್ಯಮಂತ್ರಿಯವರು ಶನಿವಾರ ಭೇಟಿ ನೀಡಿ ಸಂತ್ರಸ್ತರ ಅಹವಾಲುಗಳನ್ನು ಆಲಿಸಿದರು. ಪಾಲಿಕೆ ಅಧಿಕಾರಿಗಳ ಜೊತೆ ಸುಧೀರ್ಘ ಚರ್ಚೆ ನಡೆಸಿದ ಅವರು ಸ್ವಚ್ಛತಾ ಕಾರ್ಯ ಹಾಗೂ ಪರಿಹಾರ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು. 

‘ಈ ಪ್ರದೇಶದಲ್ಲಿ ಸುಮಾರು 650 ರಿಂದ 700 ಮನೆಗಳಿದ್ದು ಹಾನಿಗೊಳಗಾದ ಎಲ್ಲಾ ಮನೆಗಳಿಗೂ ಪರಿಹಾರ ನೀಡಲಾಗುತ್ತದೆ. ರಾಜಕಾಲುವೆಗೆ ಶಾಶ್ವತ ತಡೆಗೋಡೆಯನ್ನು ನಿರ್ಮಿಸಿ ಜಲಾವೃತ ಆಗದ ರೀತಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತದೆ. ಎಲ್ಲಾ ಕಡೆ ಕಟ್ಟೆಚ್ಚರ ವಹಿಸಿ ಯಾವುದೇ ರೀತಿಯ ಅನಾಹುತಗಳಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರೆ ಯಾವುದೇ ಮುಲಾಜಿಲ್ಲದೆ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ‌. ತೆರವು ಕಾರ್ಯಾಚರಣೆ ಪ್ರಕ್ರಿಯೆ ಶೀಘ್ರ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.


ಕಂದಾಯ ಸಚಿವ ಆರ್‌.ಅಶೋಕ ಅವರು ಮಳೆಯಿಂದ ಹಾನಿಗೊಳಗಾದ ಹೊಸಕೆರೆಹಳ್ಳೀ ವಾರ್ಡ್‌ನ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿದರು.

ಮನೆ ಮನೆ ಸಮೀಕ್ಷೆ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ನಷ್ಟ ಉಂಟಾಗಿರುವ ಬಗ್ಗೆ ಮನೆ-ಮನೆ ಸಮೀಕ್ಷೆ ಮಾಡಿ ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಂತ್ರಸ್ತರಿಗೆ ಬೇರೆ ಕಡೆ ಆಶ್ರಯ ಕಲ್ಪಿಸಲು ಕೂಡಾ ವ್ಯವಸ್ಥೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಮಳೆಯಿಂದಾಗಿ ಹಾನಿಗೊಳಗಾದ ಹೊಸಕೆರೆಹಳ್ಳಿ ವಾರ್ಡ್‌ನ ದತ್ತಾತ್ರೇಯ ನಗರದ ವ್ಯಾಪ್ತಿಯ ಪ್ರದೇಶಗಳಿಗೆ ಸಚಿವರು ಶನಿವಾರ ಭೇಟಿ ನೀಡಿದರು.

ಮಳೆಗಾಲದಲ್ಲಿ ಅನಾಹುತ ತಡೆಯಲು ಪಾಲಿಕೆ ಸಕಲ ಮುಂಜಾಗ್ರತಾ ವಹಿಸುವಂತೆ, ರಾಜಕಾಲುವೆಗಳ ಬಲಪಡಿಸಲು ಹಾಗೂ ಅಗಲ ಕಿರಿದಗಿ ನೀರಿನ ಹರಿವಿಗೆ ಸಮಸ್ಯೆ ಆಗುವ ಪ್ರದೇಶಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಶೋಕ ಸೂಚಿಸಿದರು.  ರಾಜಕಾಲುವೆಯನ್ನು ಹಾಗೂ ಅದರ ಮೀಸಲು ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿದರು.

ಮೂರು ಮಂದಿ ರಕ್ಷಣೆ: ‘ನಿನ್ನೆ ಧಾರಾಕಾರ ಮಳೆಯ ವೇಳೆ ಅಪಾಯದಲ್ಲಿ ಸಿಲುಕಿದ್ದ ಮೂವರನ್ನು  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಆಫ್)  ತಂಡ ರಕ್ಷಣೆ ಮಾಡಿದೆ. ಮಳೆಯಿಂದ ಸಮಸ್ಯೆ ಎದುರಿಸುತ್ತಿದ್ದವರಿಗೆ ಎನ್‌ಡಿಆರ್‌ಎಫ್‌ ಸಿಬ್ಬಂದಿ ನೆರವಾಗಿದ್ದಾರೆ’ ಎಂದರು.

‘ನಗರದ ದಕ್ಷಿಣ ಭಾಗದ ವ್ಯಾಪ್ತಿಯ ಬಹುತೇಕ ಮಳೆ ನೀರು ಇದೇ ರಾಜಕಾಲುವೆ ಮೂಲಕ ಹರಿದು ಹೋಗುತ್ತದೆ. ಮಳೆಯಿಂದಾಗಿ ರಾಜಕಾಲುವೆಯ ತಡೆಗೋಡೆ ಬಿದ್ದುದ್ದು, ಅದನ್ನು ದುರಸ್ತಿಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ತಡೆಗೋಡೆಗೆ ಅಳವಡಿಸಿರುವ ಹಳೆಯ ಕಲ್ಲುಗಳನ್ನು ಸಂಪೂರ್ಣ ತೆರವುಗೊಳಿಸಿ ಅಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗುತ್ತದೆ’ ಎಂದರು.

ಹೊಸಕೆರೆಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಳೆಗಾಲದಲ್ಲಿ ಸಮಸ್ಯೆ ಹೆಚ್ಚುತ್ತಿದೆ. ನಾಯಂಡಹಳ್ಳಿ ರಾಜಕಾಲುವೆಗೆ ಇಲ್ಲಿನ ರಾಜಕಾಲುವೆಯ ನೀರು ಸೇರಿಕೊಳ್ಳುತ್ತದೆ. ಕೆಲವೇ ತಾಸುಗಳಲ್ಲಿ ಭಾರಿ ಮಳೆಯಾದ ಪರಿಣಾಮ ಹೆಚ್ಚು ಸಮಸ್ಯೆ ಆಗಿದೆ. 3 ಕಿ.ಮೀ ವ್ಯಾಪ್ತಿಯ ರಾಜಕಾಲುವೆ ಕಾಮಗಾರಿ ಪ್ರಾರಂಭವಾಗಿ 6 ತಿಂಗಳಾಗಿವೆ. ‘ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ’ ಎಂದು ಸಚಿವರ ಅಶೋಕ ಸೂಚಿಸಿದರು.

ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಎದುರಿಸಿದ ಕುಟುಂಬಗಳಿಗೆ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕೆಲವು ಸ್ಥಳೀಯರು ಮನೆ ತೊರೆಯಲು ನಿರಾಕರಿಸಿದ್ದಾರೆ. ‘ಇಲ್ಲೇ ಇರುತ್ತೇವೆ ಮನೆ ಸ್ವಚ್ಛಮಾಡಿಕೊಡಿ’ ಎಂದು ಸಚಿವರಲ್ಲಿ ಕೋರಿದರು.

ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಹೆಚ್ಚು ಸಮಸ್ಯೆ ಎದುರಾದ ಪ್ರದೇಶಗಳಿಗೆ ಪಾಲಿಕೆ ಹಾಗೂ ಎನ್‌ಡಿಆರ್‌ಎಫ್ ತಂಡದ ಸಿಬ್ಬಂದಿ ರಾತ್ರಿಯೇ ಭೇಟಿ ನೀಡಿ‌ ಸಮಸ್ಯೆ ಬಗೆಹರಿಸಿದ್ದಾರೆ. ಸ್ಥಳೀಯರಿಗೆ ರಾತ್ರಿ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಇನ್ನೆರಡು ದಿನ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಪೌರಕಾರ್ಮಿಕರು, ಗ್ಯಾಂಗ್‌ಮನ್‌ಗಳು ರಸ್ತೆಯಲ್ಲಿ ತುಂಬಿರುವ ಹೂಳನ್ನು ತೆರವು ಮಾಡಿ ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಹಾಗೂ ಸೋಂಕುನಿವಾರಕ ಸಿಂಪಡಣೆ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಸ್ಥಳೀಯರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ತಡೆಯಲು ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರವಾಹ ಎದುರಾದರೆ ನೆರವಿಗೆ ಧಾವಿಸಲು ಎಲ್ಲಾ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ’ ಎಂದರು.

‘ಇಲ್ಲಿರುವ ರಾಜಕಾಲುವೆಗಳು 20 ವರ್ಷಗಳಷ್ಟು ಹಳೆಯವರು. ಅವುಗಳನ್ನು ಬಲಪಡಿಸಲು ಕಾಂಕ್ರಿಟ್ ತಡೆಗೋಡೆ ನಿರ್ಮಿಸಲಾಗುತ್ತಿದೆ. ಸುತ್ತಲೂ ಇಳಿಜಾರು ಪ್ರದೇಶಗಳಿರುವುದರಿಂದ ಆಸುಪಾಸಿನ ಮಳೆ ನೀರೆಲ್ಲ ಇದೇ ಕಾಲುವೆಗೆ ಹರಿದು ಬರುತ್ತದೆ. ನಿನ್ನೆ ಎರಡು ಮೂರು ತಾಸುಗಳಲ್ಲಿ 120 ರಿಂದ 125 ಮಿ.ಮೀ ಮಳೆಯಾಗಿದೆ. ಹಾಗಾಗಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿ ರಾಜಕಾಲುವೆ ಉಕ್ಕಿಹರಿದಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು