ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು| ₹ 4.51 ಕೋಟಿ ವಂಚನೆ: ಕಂಪನಿ ಮಾಲೀಕ ಬಂಧನ

Last Updated 25 ಮಾರ್ಚ್ 2023, 4:53 IST
ಅಕ್ಷರ ಗಾತ್ರ

ಬೆಂಗಳೂರು: ಸೋಲಾರ್ ಘಟಕ ಅಳವಡಿಸುವ ನೆಪದಲ್ಲಿ ಉದ್ಯಮಿಯೊಬ್ಬರಿಂದ ₹ 4.51 ಕೋಟಿ ಪಡೆದು ವಂಚಿಸಿದ್ದ ಆರೋಪದಡಿ ಪ್ರಮೋದ್ ಪ್ರಕಾಶ್ ರಾವ್ ಎಂಬುವವರನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸಮೃದ್ಧಿ ರಿನಿವೆಬಲ್ ಸೆಲ್ಯೂಷನ್ ಕಂಪನಿ ಮಾಲೀಕ ಪ್ರಮೋದ್ ಪ್ರಕಾಶ್ ರಾವ್, ಎಂಜಿನಿಯರಿಂಗ್ ಪದವೀಧರ. ಗೊರಗುಂಟೆಪಾಳ್ಯದಲ್ಲಿರುವ ಜೆಮಿನಿ ಡೈಯಿಂಗ್ ಆ್ಯಂಡ್ ಪ್ರೀಂಟಿಂಗ್ ಮಿಲ್ಸ್ ಕಂಪನಿ ಮಾಲೀಕ ಗುಲ್ಲು ಜಿ. ತಲರೇಜ್ ನೀಡಿದ್ದ ದೂರಿನಡಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಸಂಜಯನಗರ ಪೊಲೀಸರು ಹೇಳಿದರು.

‘ಬನಶಂಕರಿ ಠಾಣೆಯಲ್ಲೂ ಆರೋಪಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಅಲ್ಲಿಯ ಪೊಲೀಸರು ಬಾಡಿ ವಾರೆಂಟ್ ಮೇಲೆ ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ’ ಎಂದು ತಿಳಿಸಿದರು.

ದಂಪತಿಯೇ ನಿರ್ದೇಶಕರು: ‘ಆರೋಪಿ ಪ್ರಮೋದ್ ಪ್ರಕಾಶ್ ಹಾಗೂ ಈತನ ಪತ್ನಿಯೇ ಕಂಪನಿ ನಿರ್ದೇಶಕರಾಗಿದ್ದರು. ಕಂಪನಿ ಮಾಲೀಕನೆಂದು ಹೇಳಿಕೊಂಡು ಹಲವರನ್ನು ಸಂಪರ್ಕಿಸುತ್ತಿದ್ದ ಆರೋಪಿ, ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಮಾಡುವುದಾಗಿ ಹೇಳಿ ಹಣ ಪಡೆದು ವಂಚಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಕಂಪನಿ ಅಸಲಿಯೋ ಅಥವಾ ನಕಲಿಯೋ ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.

ನಕಲಿ ದಾಖಲೆ ತೋರಿಸಿ ವಂಚನೆ: ‘ದೂರುದಾರ ತಲರೇಜ್, ತಮ್ಮ ಕಂಪನಿ ಕಟ್ಟಡದಲ್ಲಿ ಸೋಲಾರ್ ಘಟಕ ಅಳವಡಿಸಲು ಯೋಚಿಸಿದ್ದರು. ಘಟಕ ಅಳವಡಿಕೆ ಹಾಗೂ ನಿರ್ವಹಣೆ ಮಾಡುವವರಿಗಾಗಿ ಹುಡುಕಾಟ ಆರಂಭಿಸಿದ್ದರು. ಅವರನ್ನು ಸಂಪರ್ಕಿಸಿದ್ದ ಆರೋಪಿ ಪ್ರಮೋದ್ ಪ್ರಕಾಶ್, ಸೋಲಾರ್ ಘಟಕ ಅಳವಡಿಸಿಕೊಡುವುದಾಗಿ ಹೇಳಿದ್ದ’ ಎಂದು ಪೊಲೀಸರು ತಿಳಿಸಿದರು.

‘ಹಲವು ಕಂಪನಿಗಳಲ್ಲಿ ಘಟಕ ಅಳವಡಿಸಿರುವ ಬಗ್ಗೆ ನಕಲಿ ದಾಖಲೆ ಹಾಗೂ ಫೋಟೊಗಳನ್ನು ದೂರುದಾರರಿಗೆ ತೋರಿಸಿದ್ದ. ಅದನ್ನು ನಂಬಿದ್ದ ದೂರುದಾರ, ಹಂತ ಹಂತವಾಗಿ ₹ 4.11 ಕೋಟಿ ಪಾವತಿಸಿದ್ದರು. ಹಣ ಪಡೆದು ಹಲವು ತಿಂಗಳಾದರೂ ಆರೋಪಿ ಘಟಕ ಅಳವಡಿಸಿರಲಿಲ್ಲ. ಅದನ್ನು ಪ್ರಶ್ನಿಸಿದ್ದಕ್ಕೆ ದೂರುದಾರರಿಗೆ ಜೀವ ಬೆದರಿಕೆಯೊಡ್ಡಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT