ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸುರಕ್ಷತೆಗೆ ಬಹೂಪಯೋಗಿ ‘ನೆರವು’

‘ಸುರಕ್ಷಿತ ನಗರ’ ಯೋಜನೆ ಅಡಿ 60 ಕೇಂದ್ರಗಳ ಸ್ಥಾಪನೆ* ಸಂಕಷ್ಟಕ್ಕೆ ಸ್ಪಂದಿಸಲಿರುವ ಪೊಲೀಸರು
Published 3 ಮೇ 2024, 0:05 IST
Last Updated 3 ಮೇ 2024, 0:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಪೊಲೀಸ್ ಇಲಾಖೆ, ವಿವಿಧ ಕಡೆಗಳಲ್ಲಿ ‘ನೆರವು’ ಬಹೂಪಯೋಗಿ ಸಹಾಯ ಕೇಂದ್ರವನ್ನು ತೆರೆದಿದೆ.

‘ಸುರಕ್ಷಿತ ನಗರ’ ಯೋಜನೆ ಅಡಿ ನೆರವು ಕೇಂದ್ರ ತೆರೆಯಲಾಗಿದ್ದು, ಮಹಿಳೆಯರಿಗೆ ನೆರವಾಗಲು ಪ್ರತ್ಯೇಕ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

ನಗರದ ಕಮಿಷನರೇಟ್‌ ವ್ಯಾಪ್ತಿಯಲ್ಲಿ 60 ಸ್ಥಳಗಳಲ್ಲಿ ಪೊಲೀಸ್‌ ‘ನೆರವು’ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ಸೇರಿದಂತೆ ಯಾವುದೇ ರೀತಿಯ ತೊಂದರೆಯಾದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸುವ ಉದ್ದೇಶದಿಂದ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೊದಲ ಹಂತದಲ್ಲಿ ಮಹಿಳೆಯರು ಹೆಚ್ಚಾಗಿ ಸಂಚರಿಸುವ, ಸಾಫ್ಟ್‌ವೇರ್ ಕಂಪನಿಗಳಿರುವ ಹಾಗೂ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾದ ಸ್ಥಳಗಳಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

‘ನಗರದ ಮೆಜೆಸ್ಟಿಕ್‌, ಕಾರ್ಪೊರೇಷನ್ ವೃತ್ತ, ಸ್ವಾತಂತ್ರ್ಯ ಉದ್ಯಾನ, ರೇಸ್‌ಕೋರ್ಸ್‌ ರಸ್ತೆ, ಮಲ್ಲೇಶ್ವರ, ಮೌರ್ಯ ವೃತ್ತ, ಪುರಭವನ, ಶಾಂತಿನಗರ ಬಸ್‌ ನಿಲ್ದಾಣ ಸೇರಿದಂತೆ ನಗರದ 60 ಪ್ರದೇಶಗಳಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತಲಾ ₹5 ಲಕ್ಷ ವೆಚ್ಚದಲ್ಲಿ 20 ಅಡಿ ಉದ್ದ, 10 ಅಡಿ ಅಗಲದ ವಿಸ್ತೀರ್ಣದಲ್ಲಿ ಈ ಕೇಂದ್ರಗಳನ್ನು ನಿರ್ಮಿಸಲಾಗಿದ್ದು, ಅಗತ್ಯ ಸೌಲಭ್ಯಗಳನ್ನು ಒಳಗೊಂಡಿವೆ. ಈ ಕೇಂದ್ರದಲ್ಲಿ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ’ ಎಂದು ಪೊಲೀಸರು ತಿಳಿಸಿದರು.

‘ನಗರದಲ್ಲಿ ಮಹಿಳೆಯರ ಓಡಾಟ ಹೆಚ್ಚಿರುವ ಪ್ರದೇಶಗಳಲ್ಲಿ ಇವುಗಳನ್ನು ಸ್ಥಾಪಿಸಲಾಗಿದೆ. ದೇಶದ ಬೇರೆ ಬೇರೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಮಹಿಳೆಯರ ಓಡಾಟ ಹೆಚ್ಚಿರುತ್ತದೆ. ಬಸ್‌ಗಳಿಗಾಗಿ ಕಾಯುವವರು, ಬಸ್‌ಗಳನ್ನು ತಪ್ಪಿಸಿಕೊಳ್ಳುವ ಮಹಿಳೆಯರು ಈ ಕೇಂದ್ರಗಳಿಗೆ ಭೇಟಿ ನೀಡಿ ವಿಶ್ರಾಂತಿ ಪಡೆದುಕೊಳ್ಳಬಹುದು. ನಗರಕ್ಕೆ ಹೊಸದಾಗಿ ಬಂದವರು, ಕಾಣೆಯಾದವರ ಬಗ್ಗೆ ಹೆಚ್ಚು ದೂರುಗಳು ಬರುತ್ತವೆ. ಅಂತಹ ದೂರುಗಳನ್ನು ಸ್ವೀಕರಿಸಿ, ಅವರಿಗೆ ಸಹಾಯ ಮಾಡುತ್ತೇವೆ. ಲೈಂಗಿಕ ದೌರ್ಜನ್ಯ, ಅಪಹರಣ ಸೇರಿದಂತೆ ಗಂಭೀರ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದರು.

ಮಹಿಳೆಯರು ಸಂಕಷ್ಟದಲ್ಲಿರುವ ಸಂದರ್ಭ ಹಾಗೂ ತುರ್ತು ಪರಿಸ್ಥಿತಿಯಲ್ಲಿ ರಕ್ಷಣೆ ನೀಡಲು ನೆರವು ಕೇಂದ್ರ ಆರಂಭಿಸಲಾಗಿದೆ
ಬಿ. ದಯಾನಂದ್ ಬೆಂಗಳೂರು ಪೊಲೀಸ್ ಕಮೀಷನರ್‌

‘ನೆರವು’ ಕೇಂದ್ರದ ವಿಶೇಷ

ನೆರವು ಕೇಂದ್ರದಲ್ಲಿ ನಾಲ್ಕು ಬೆಡ್‌ಗಳು ಶೌಚಾಲಯ ಎಲ್‌ಇಡಿ ದೀಪಗಳು ಎರಡು ಸೀಲಿಂಗ್‌ ಫ್ಯಾನ್ 300 ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್ ಹಾಗೂ ತುರ್ತು ಚಿಕಿತ್ಸಾ ಪೆಟ್ಟಿಗೆ ಇವೆ ಎಂದು ಪೊಲೀಸರು ತಿಳಿಸಿದರು.  ‘ನಗರದಲ್ಲಿ ಮಳೆಯಾದ ಸಂದರ್ಭದಲ್ಲಿ ಮಹಿಳೆಯರು ಈ ಕೇಂದ್ರದಲ್ಲಿ ನೆರವು ಪಡೆದುಕೊಳ್ಳಬಹುದು. ರಾತ್ರಿ ಸಮಯದಲ್ಲಿ ಬೇರೆ ಪ್ರದೇಶಗಳಿಂದ ಬೆಂಗಳೂರಿಗೆ ಬರುವ ಮಹಿಳೆಯರು ಈ ಕೇಂದ್ರದಲ್ಲಿ ಆಶ್ರಯ ಪಡೆಯಬಹುದು. ಸಾರ್ವಜನಿಕರಿಗೆ ತೊಂದರೆಯಾದ ಸಂದರ್ಭದಲ್ಲಿ ಈ ಕೇಂದ್ರದ ಮೂಲಕ ಪೊಲೀಸರನ್ನು ಸಂಪರ್ಕಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT