ಗುರುವಾರ , ಅಕ್ಟೋಬರ್ 1, 2020
21 °C
ಸಿಬ್ಬಂದಿ ವಿರುದ್ಧದ ಮೊಕದ್ದಮೆ ಮುಂದುವರಿಸದಂತೆ ಕೋರಿದ ಸಕ್ರಾ ಆಸ್ಪತ್ರೆ

ಮೊಕದ್ದಮೆ ದಾಖಲಾದ ಬಳಿಕ ಹಾಸಿಗೆ ವಿವರ ಹಂಚಿಕೊಂಡ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್‌ ಸೋಂಕು ನಿಯಂತ್ರಣ ಸಂಬಂಧ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ. ನಮ್ಮ ಸಿಬ್ಬಂದಿ ವಿರುದ್ಧ ದಾಖಲಿಸಿರುವ ಮೊಕದ್ದಮೆ ಮುಂದುವರಿಸಬೇಡಿ’ ಎಂದು ಸಕ್ರಾ ವರ್ಲ್ಡ್‌ ಆಸ್ಪತ್ರೆ ಬೆಂಗಳೂರು ನಗರ ಜಿಲ್ಲಾಧಿಕಾರಿಯವರನ್ನು ಕೋರಿದೆ.

‘ಸರ್ಕಾರ ಕೇಳಿದ ಮಾಹಿತಿಯನ್ನು ಸಕಾಲದಲ್ಲಿ ಹಾಗೂ ನಿಗದಿತ ನಮೂನೆಯಲ್ಲಿ ಅಧಿಕಾರಿಗಳಿಗೆ ತಲುಪಿಸಲು ಸಾಧ್ಯವಾಗಿರಲಿಲ್ಲ. ನಮ್ಮಲ್ಲಿ ಎಷ್ಟು ಹಾಸಿಗೆಗಳು ಲಭ್ಯ ಇವೆ. ಜೂನ್‌ 23ರಿಂದ ಜುಲೈ 29ರವರೆಗಿನ ಬಿಲ್ಲಿಂಗ್ ದಾಖಲೆಗಳನ್ನು ಹಾಗೂ ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿಯಿಂದ ಕಳುಹಿಸುವ ಕೋವಿಡ್ ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳು ಲಭ್ಯ ಎಂಬ ಮಾಹಿತಿಯನ್ನು ನಾವು ಅದೇ ದಿನ ಮಾರತ್ತಹಳ್ಳಿ ಪೊಲೀಸ್ ಠಾಣೆಗೆ ತಲುಪಿಸಿದ್ದೇವೆ’ ಎಂದು ಆಸ್ಪತ್ರೆ ತಿಳಿಸಿದೆ.

‘ಆಮ್ಲಜನಕ ಪೂರೈಕೆ ಸೌಲಭ್ಯ ಇರುವ 91ಹಾಸಿಗೆಗಳು ಹಾಗೂ ತುರ್ತು ನಿಗಾ ಘಟಕದ 14 ಹಾಸಿಗೆಗಳು ಸೇರಿದಂತೆ ಒಟ್ಟು 117 ಹಾಸಿಗೆಗಳನ್ನು ಹಾಗೂ 12 ವೆಂಟಿಲೇಟರ್‌ ಸಲಕರಣೆಗಳನ್ನು ಸರ್ಕಾರ ಸೂಚಿಸುವವರ ಚಿಕಿತ್ಸೆಗೆ ಕಾಯ್ದಿರಿಸಿದ್ದೇವೆ. ಇದು ನಮ್ಮ ಆಸ್ಪತ್ರೆಯಲ್ಲಿರುವ ಒಟ್ಟು ಹಾಸಿಗೆಗಳ (234) ಶೇ 50ರಷ್ಟಾಗುತ್ತದೆ’ ಎಂದೂ ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ, ‘ಆಸ್ಪತ್ರೆಯವರು ಬರೆದಿರುವ ಪತ್ರ ಇನ್ನೂ ಕೈಸೇರಿಲ್ಲ. ನಾವು ಈಗಾಗಲೇ ಮೊಕದ್ದಮೆ ದಾಖಲಿಸಿದ್ದೇವೆ. ಪೊಲೀಸರು ತನಿಖೆ ನಡೆಸಿ ಏನು ಕ್ರಮ ಕೈಗೊಳ್ಳುತ್ತಾರೋ ನೋಡೋಣ. ಅವರು ಶೇ 50ರಷ್ಟು ಹಾಸಿಗೆಗಳನ್ನು ಸರ್ಕಾರ ಸೂಚಿಸಿದ ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಮೀಸಲಿಟ್ಟರೆ ಒಳ್ಳೆಯದು’ ಎಂದರು. 

‘ಈಗಲೂ ಕೆಲವು ಆಸ್ಪತ್ರೆಗಳು ವೆಬ್‌ಸೈಟ್‌ನಲ್ಲಿ ನಮೂದಿಸಿರುವಷ್ಟು ಪ್ರಮಾಣದ ಹಾಸಿಗೆಗಳನ್ನು ಸರ್ಕಾರ ಸೂಚಿಸಿದ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಕಾಯ್ದಿರಿಸಿಲ್ಲ ಎಂಬ ದೂರುಗಳಿವೆ. ಆಸ್ಪತ್ರೆಗಳು ತಪ್ಪು ಮಾಹಿತಿ ನೀಡುತ್ತಿದ್ದರೆ ಅವುಗಳ ವಿರುದ್ಧವೂ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು