ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇಶ್ವರದಲ್ಲಿ ಕಾಮಗಾರಿ ವಿಳಂಬ: ಪ್ರತಿಭಟನೆ

Last Updated 1 ಮೇ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ವಿಳಂಬವಾಗುತ್ತಿದ್ದು, ಇದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಭಾನುವಾರ ಪ್ರತಿಭಟನೆ ನಡೆಸಿದರು.

‘ಸ್ಯಾಂಕಿ ಕೆರೆ ಉಳಿಸಿ’, ‘ಗುಂಡಿಗಳ ನಗರ ಮಲ್ಲೇಶ್ವರ’, ‘ಕಳಪೆ ಕಾಮಗಾರಿ ನಿಲ್ಲಿಸಿ’ ಎಂಬ ಭಿತ್ತಿಪತ್ರಗಳನ್ನು ಹಿಡಿದು ಸದಾಶಿವನಗರದ ಶಿವಾಜಿ ಪ್ರತಿಮೆಯಿಂದ ಸ್ಯಾಂಕಿ ಕೆರೆವರೆಗೂ ರ‍್ಯಾಲಿ ನಡೆಸಿದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು.

‘ಈಗ ನಡೆಸುತ್ತಿರುವ ಕಾಮಗಾರಿ ಕಳಪೆಯಾಗಿದೆ. ಟೆಂಡರ್‌ನಲ್ಲಿ ಅವ್ಯವಹಾರ ನಡೆದಿರುವ ಅನುಮಾನವಿದೆ. ಕಾಮಗಾರಿ ಮಂದಗತಿ ಪಡೆದಿರುವುದರಿಂದ ಸ್ಥಳೀಯರು ಹಾಗೂ ವ್ಯಾಪಾರಿಗಳು ಸಂಕಷ್ಟ ಎದುರಿಸುವಂತಾಗಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ಸ್ಯಾಂಕಿ ಕೆರೆ ಅಭಿವೃದ್ಧಿ ನೆಪದಲ್ಲಿ 12 ವರ್ಷಗಳಿಂದ ವಿವಿಧ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಅವು ಇನ್ನೂ ಪೂರ್ಣಗೊಂಡಿಲ್ಲ. ನಾಲ್ಕು ತಿಂಗಳಲ್ಲಿ ಎರಡು ಬಾರಿ ಪಾದಚಾರಿ ಮಾರ್ಗದ ಕಾಮಗಾರಿ ನಡೆಸಲಾಗಿದೆ’ ಎಂದು ಆರೋಪಿಸಿದರು.

‘ಒಬ್ಬನೇ ಗುತ್ತಿಗೆದಾರನಿಗೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಕಾಮಗಾರಿಗಳ ಟೆಂಡರ್‌ ನೀಡಲಾಗಿದೆ. ಹೀಗಾಗಿ ಇವು ನಿಧಾನಗತಿಯಲ್ಲಿ ಸಾಗುತ್ತಿವೆ. ಮಲ್ಲೇಶ್ವರ ಮುಖ್ಯರಸ್ತೆ ಹಾಗೂ ಪ್ಯಾಲೇಸ್‌ ಗುಟ್ಟಹಳ್ಳಿ ರಾಜಕಾಲುವೆ ಕಾಮಗಾರಿಯೂ ಮಂದಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಗಳ ಕುರಿತ ಮಾಹಿತಿ ಕೇಳಲು ಹೋದರೆ ಅಧಿಕಾರಿಗಳು ದಬಾಯಿಸುತ್ತಾರೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿಅನೂಪ್ ಅಯ್ಯಂಗಾರ್ ದೂರಿದರು.

‘ಮಲ್ಲೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳ ಮಾಹಿತಿ ಸಾರ್ವಜನಿಕರಿಗೆ ಸಿಗುವಂತಾಗಬೇಕು. ಮೂರು ತಿಂಗಳ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT