ಶುಕ್ರವಾರ, ಸೆಪ್ಟೆಂಬರ್ 17, 2021
28 °C

‘ಬೇಗೂರು ಕೆರೆ ಉಳಿಸಿ’ ಆನ್ ಲೈನ್ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೊಮ್ಮನಹಳ್ಳಿ: ಬೇಗೂರು ಕೆರೆಯಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ಕೃತಕ ದ್ವೀಪದಿಂದಾಗಿ ಉತ್ಪಾದಕ ಪರಿಸರ ವ್ಯವಸ್ಥೆಗೆ ಧಕ್ಕೆಯಾಗಲಿದ್ದು, ಜೀವಜಾಲಕ್ಕೆ ಕೊಡುಗೆ ನೀಡುತ್ತಿರುವ ಕೆರೆಯ ನೈಜತೆಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿ ‘ಬೇಗೂರು ಕೆರೆ ಉಳಿಸಿ’ ಎಂಬ ಆನ್ ಲೈನ್ ಅಭಿಯಾನ ನಡೆದಿದೆ.

ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರು, ವಕೀಲರು ಹಾಗೂ ವಿಜ್ಞಾನಿಗಳು ಈ ಅಭಿಯಾನ ಕೈಗೊಂಡಿದ್ದಾರೆ.

ಅಭಿಯಾನದ ಭಾಗವಾಗಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರದಲ್ಲಿ, ‘ಕೆರೆಯ ಮಧ್ಯೆ ಮೂರ್ತಿ ಸ್ಥಾಪನೆಯ ಅಕ್ರಮ ನಿರ್ಣಯವನ್ನು ಅಂಗೀಕರಿಸಿದ ಬಿಬಿಎಂಪಿ ಕೌನ್ಸಿಲ್‌ನ ನಿರ್ಧಾರವನ್ನು ತಿರಸ್ಕರಿಸಬೇಕು. ಹಾಗೆಯೇ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವು ಈ ಅಕ್ರಮ ನಿರ್ಣಯಕ್ಕೆ ಮಾನ್ಯತೆ ನೀಡಿರುವುದನ್ನೂ ರದ್ದು ಮಾಡಿ, ಈ ವಿಚಾರ ಕುರಿತಂತೆ ಕ್ರಮ ಕೈಗೊಂಡು ನ್ಯಾಯಾಲಯದ ಗಮನಕ್ಕೆ ತರಬೇಕು’ ಎಂದು ಒತ್ತಾಯಿಸಲಾಗಿದೆ.

ಬೇಗೂರು ಕೆರೆಯ ಪ್ರಾಮುಖ್ಯತೆಯನ್ನು ಅದು ನೀರಿನ ಮಟ್ಟ ಮತ್ತು ಅದರ ಸುತ್ತಮುತ್ತಲಿನ ಕೊಳವೆ ಬಾವಿಗಳ ಮೇಲೆ ಮಾಡುವ ಪ್ರಭಾವದ ಆಧಾರದಿಂದ ಗುರುತಿಸಬಹುದಾಗಿದೆ. ‘ಕೆಲವು ವರ್ಷಗಳ ಹಿಂದೆ ಅದರ ಮಧ್ಯೆ ಅಕ್ರಮ ಕಿರು ದ್ವೀಪದ ನಿರ್ಮಾಣಕ್ಕಾಗಿ ಕೆರೆಯನ್ನು ಖಾಲಿ ಮಾಡಿದ್ದರಿಂದ ಸುತ್ತ ಮುತ್ತಲಿನ ಕೊಳವೆ ಬಾವಿಗಳೆಲ್ಲಾ ಬತ್ತಿ ಹೋದವು’ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ.

ಕೆರೆ ಸಂರಕ್ಷಣೆ ಕುರಿತಂತೆ ಸರ್ಕಾರದ ಸಂಸ್ಥೆಗಳು ಮತ್ತು ನೀತಿ ನಿಯಮಾವಳಿಗಳನ್ನು ಮೀರುವಂತೆ ಪ್ರಭಾವ ಬೀರುವ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಇವೆಲ್ಲವೂ ಕಾನೂನು, ಆಡಳಿತ, ಜನರ ಸೌಖ್ಯ, ಪರಿಸರ ಸುಸ್ಥಿರತೆ ಮತ್ತು ಈ ಪ್ರದೇಶದ ಜಲ ಭದ್ರತೆಗೆ ಅಪಾಯಕಾರಿಯಾಗಿದೆ’ ಎಂದು ಅಭಿಯಾನದ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯ ಆದೇಶವನ್ನು ಉಲ್ಲಂಘಿಸಿ, ಘಟನೆಯನ್ನು ಕೋಮು ಪ್ರಚೋದನೆಗೆ ಬಳಸಿಕೊಂಡವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ ನಂತರವೂ ಇನ್ನು ಕೆಲ ದುಷ್ಕರ್ಮಿಗಳು, ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷದ ಸಂದೇಶಗಳನ್ನು ಸಾರುತ್ತಿರುವುದರ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು