ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಡಕು: ಮಹಾಬಲೇಶ್ವರ ರಾವ್‌

Last Updated 4 ಜುಲೈ 2021, 21:26 IST
ಅಕ್ಷರ ಗಾತ್ರ

ಬೆಂಗಳೂರು: ‘ನೂತನ ಶಿಕ್ಷಣ ನೀತಿ ಅನ್ವಯ ಪದವಿ ಕಲಿಕೆಯನ್ನು ನಾಲ್ಕು ವರ್ಷಕ್ಕೆ ಹೆಚ್ಚಿಸಲಾಗಿದೆ. ಇದು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಕನಸಿಗೆ ಕೊಡಲಿ ಏಟು ನೀಡುವ ಪ್ರಯತ್ನ. ಹಳ್ಳಿಗಾಡು, ಬುಡಕಟ್ಟು ಜನಾಂಗ ಹಾಗೂ ಆದಿವಾಸಿಗಳ ಮಕ್ಕಳು ಒಮ್ಮೆ ಶಿಕ್ಷಣ ತೊರೆದರೆ ಮತ್ತೆ ವಿದ್ಯಾಭ್ಯಾಸ ಮುಂದುವರಿಸುವುದು ಕಷ್ಟ. ನಾಲ್ಕು ವರ್ಷಗಳ ಪದವಿ ಕಲಿಕೆ ಪದ್ಧತಿಯಿಂದ ಶಿಕ್ಷಣದಿಂದ ವಿಮುಖವಾಗುವವರ ಪ್ರಮಾಣ ಹೆಚ್ಚಲಿದೆ’ ಎಂದು ಶಿಕ್ಷಣ ತಜ್ಞ ಮಹಾಬಲೇಶ್ವರ ರಾವ್‌ ತಿಳಿಸಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ‘ನಾಲ್ಕು ವರ್ಷಗಳ ಪದವಿ ಕೋರ್ಸ್ ಯಾರ ಹಿತಾಸಕ್ತಿಗಾಗಿ?’ ವಿಷಯದ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಆನ್‌ಲೈನ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಹೊಸ ನೀತಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯೇ ಆಗಿಲ್ಲ. ಪೋಷಕರು ಹಾಗೂ ಮಕ್ಕಳ ಅಭಿಪ್ರಾಯವನ್ನೂ ಆಲಿಸಿಲ್ಲ. ಈ ನೀತಿಯನ್ನು ಏಕಪಕ್ಷೀಯವಾಗಿ ಹಾಗೂ ತರಾತುರಿಯಲ್ಲಿ ಜಾರಿಗೊಳಿಸಲಾಗಿದೆ. ಇದು ಸಂವಿಧಾನ ವಿರೋಧಿ ನಡೆ. ಶಿಕ್ಷಣ ನೀತಿ ರೂಪಿಸುವವರು ಶಿಕ್ಷಣ ತಜ್ಞರೇ ಹೊರತು ರಾಜಕೀಯ ಪಕ್ಷಗಳ ಹಿಂಬಾಲಕರಲ್ಲ’ ಎಂದು ಕಿಡಿಕಾರಿದರು.

‘ಈಗಿನ ಶಿಕ್ಷಣ ನೀತಿಯೂ ಬಹುಶಿಸ್ತೀಯ ಪದ್ಧತಿ ಒಳಗೊಂಡಿದೆ. ವಿದ್ಯಾರ್ಥಿಗಳು ಏಳು ವಿಷಯಗಳನ್ನು ಕಲಿಯುತ್ತಿದ್ದಾರೆ. ಅಂತರ್‌ ಶಿಸ್ತೀಯ ಕಲಿಕೆ ಈಗಿನ ಅಗತ್ಯ. ಮಾಹಿತಿ ಹೊತ್ತ ಕತ್ತೆಗಳ ಅಗತ್ಯ ನಮಗಿಲ್ಲ.64 ವಿದ್ಯೆಗಳಲ್ಲಿ ಕಳ್ಳತನವೂ ಸೇರಿದೆ. ಅದನ್ನು ನೀವು ಕಲಿಸುತ್ತೀರಾ’ ಎಂದು ಪ್ರಶ್ನಿಸಿದರು.

ಯುಜಿಸಿ ಮಾಜಿ ಅಧ್ಯಕ್ಷ ಸುಖದೇವ್‌ ಥೋರಟ್‌, ‘ಅಮೆರಿಕದಲ್ಲಿ ಜಾರಿಯಲ್ಲಿರುವ ಶಿಕ್ಷಣ ವ್ಯವಸ್ಥೆಯ ನಕಲನ್ನು ಯಥಾರೀತಿಯಲ್ಲಿ ಈ ದೇಶದಲ್ಲಿ ಬೇರೂರಿಸುವ ಪ್ರಯತ್ನ ಈಗ ನಡೆಯುತ್ತಿದೆ.ಹೊಸ ನೀತಿಯಿಂದ ಪದವಿಯ ಅವಧಿ ಹಾಗೂ ಪಠ್ಯಕ್ರಮ ಬದಲಾಗಲಿದೆ. ಸಾಧಕ–ಬಾಧಕಗಳನ್ನು ಅವಲೋಕಿಸದೆಯೇ ಹೊಸದೊಂದು ನೀತಿ ಜಾರಿಗೊಳಿಸುವುದು ಸರಿಯಲ್ಲ’ ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎ.ಮುರಿಗೆಪ್ಪ, ‘ಹೊಸ ನೀತಿ ಜಾರಿಗೆ ಸುದೀರ್ಘ ಸಮಯ ತಗಲುತ್ತದೆ. ಸರ್ಕಾರ ಮಾಡಲು ಹೊರಟಿರುವುದು ದೊಡ್ಡ ಮಟ್ಟದ ಬದಲಾವಣೆ. ಇದರ ಕುರಿತು ಎಲ್ಲ ವಲಯಗಳಲ್ಲೂ ಚರ್ಚೆಯಾಗಬೇಕು. ಸಾಧಕ ಬಾಧಕಗಳ ಬಗ್ಗೆ ಅವಲೋಕಿಸಬೇಕು’ ಎಂದು ಹೇಳಿದರು.

ಎಐಎಸ್‌ಇಸಿ ಕರ್ನಾಟಕ ರಾಜ್ಯ ಅಧ್ಯಕ್ಷಅಲ್ಲಮಪ್ರಭು ಬೆಟ್ಟದೂರು, ‘ಹೊಸ ಶಿಕ್ಷಣ ನೀತಿಯಲ್ಲಿ ಮಾತೃಭಾಷೆ ಕಲಿಕೆ ಕಡೆಗಣಿಸಲಾಗಿದೆ. ಭಾಷೆಯು ಅಭಿವ್ಯಕ್ತಿಯ ಸಾಧನ. ಹೀಗಾಗಿ ಪ್ರಾದೇಶಿಕ ಭಾಷೆ ಕಲಿಕೆಗೆ ಒತ್ತು ನೀಡಬೇಕು. ಮೂರು ವರ್ಷಗಳ ಪದವಿಯನ್ನು ನಾಲ್ಕು ವರ್ಷಕ್ಕೆ ಹೆಚ್ಚಿಸಲು ಕಾರಣವೇನು. ಮೂರು ವರ್ಷ ಪದವಿ ಶಿಕ್ಷಣ ಪಡೆದವರು ಜಾಣರಾಗಿಲ್ಲವೇ. ಪದವಿ ಅವಧಿಯ ವಿಸ್ತರಣೆಯಿಂದ ಯಾವುದೇ ಪ್ರಯೋಜನವಿಲ್ಲ. ಇರುವ ಪದವಿ ಅವಧಿಯಲ್ಲೇ ಪರಿಣಾಮಕಾರಿ ಕಲಿಕೆ ಒದಗಿಸುವ ನಿಟ್ಟಿನಲ್ಲಿ ಚಿಂತಿಸಬೇಕು’ ಎಂದು ತಿಳಿಸಿದರು.

ಎಐಎಸ್‌ಇಸಿ ಪ್ರಧಾನ ಕಾರ್ಯದರ್ಶಿ ಅನೀಸ್‌ ರಾಯ್‌, ವಿ.ಎನ್‌.ರಾಜಶೇಖರ್‌, ಸೋಮಶೇಖರ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT