ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುವಜನರು ಕೈಜೋಡಿಸಿದರೆ ಪರಿಸರದ ಉಳಿವು: ಮಂಜುನಾಥ ಪ್ರಸಾದ್

‘ಆಲ್ಟರ್‌ನೇಟಿವ್ 2024’ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್
Published 1 ಜೂನ್ 2024, 16:52 IST
Last Updated 1 ಜೂನ್ 2024, 16:52 IST
ಅಕ್ಷರ ಗಾತ್ರ

ಬೆಂಗಳೂರು: ಪರಿಸರ ರಕ್ಷಣೆ, ನಗರವನ್ನು ಸ್ವಚ್ಛವಾಗಿಡುವ ಕಾರ್ಯಗಳಲ್ಲಿ  ಸರ್ಕಾರರ ಜೊತೆಗೆ ಸಾರ್ವಜನಿಕರು ಮುಖ್ಯವಾಗಿ ಯುವಜನರು ಕೈಜೋಡಿಸಬೇಕು’ ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಶನಿವಾರ ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎಂ.ಎಸ್‌.ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ವಿಮೋವೆ ಫೌಂಡೇಶನ್ ಆಯೋಜಿಸಿದ್ದ ‘ಹಸಿರು ಮತ್ತು ಆಕರ್ಷಕ (ವೈಬ್ರೆಂಟ್) ಬೆಂಗಳೂರಿಗಾಗಿ ಯುವಜನರು–ಆಲ್ಟರ್‌ನೇಟಿವ್ 2024’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಜನಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವುದು ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಹಸಿರು ಪರಿಸರವನ್ನು ಹೆಚ್ಚಳ ಮಾಡಬೇಕಿದೆ. ಯುವಜನರಿಂದ ಮಾತ್ರ ಇದು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ‘ಪರಿಸರವನ್ನು ಉಳಿಸಿಕೊಳ್ಳದೆ ಬದುಕಲು ಸಾಧ್ಯವಿಲ್ಲ. ಮುಂದಿನ ಪೀಳಿಗೆಯು ಆರೋಗ್ಯಕರ ಜೀವನಕ್ಕಾಗಿ ಗಿಡಗಳನ್ನು ನೆಟ್ಟು ಹಸಿರು ಹೆಚ್ಚಿಸಬೇಕು. ಮನೆಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಬೇಕು. ನಿತ್ಯ ಸಾಮಗ್ರಿಗಳನ್ನು ತರಲು ಕಾಗದ/ ಬಟ್ಟೆ ಚೀಲಗಳನ್ನು ಬಳಸಬೇಕು’ ಎಂದು ಸಲಹೆ ಮಾಡಿದರು.

ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ಪ್ರಸಾತ್ ಮನೋಹರ್ ಅವರು, ‘ನಗರದ ಜನಸಂಖ್ಯೆಯಲ್ಲಿ ಶೇ 65ರಷ್ಟು ಯುವಜನರಿದ್ದಾರೆ. ಈ ಎಲ್ಲರೂ ಜಲಮಂಡಳಿಯ ಜೊತೆ ಕೈಜೋಡಿಸಿದರೆ ‘ವಾಟರ್ ಸರ್‌ಪ್ಲಸ್’ ಬೆಂಗಳೂರನ್ನಾಗಿ ಮಾಡಬಹುದು’ ಎಂದರು.

ಬೆಂಗಳೂರು ಸಮುದ್ರ ಮಟ್ಟಕ್ಕಿಂತ ಸುಮಾರು 1000 ಮೀ. ಎತ್ತರದಲ್ಲಿರುವ ಕಾರಣ 100 ಕಿ.ಮೀ. ದೂರದಲ್ಲಿರುವ ಕಾವೇರಿ ನದಿಯಿಂದ ನೀರು ತರುವುದು ಕಷ್ಟ. ನಗರದಲ್ಲಿರುವ ವೃಷಭಾವತಿ, ಅರ್ಕಾವತಿ, ದಕ್ಷಿಣ ಪಿನಾಕಿನಿ ಹಾಗೂ ಸುವರ್ಣಮುಖಿ ನದಿಗಳಿಗೆ ಪುನರ್ಜೀವ ನೀಡಿದರೆ ನಗರದಲ್ಲಿ ನೀರಿನ ಸಮಸ್ಯೆಯನ್ನು ನಿವಾರಿಸಬಹುದು. ಈ ನಾಲ್ಕು ನದಿಗಳು ನಾಲೆಗಳಾಗಿ ಬದಲಾಗಿವೆ. ಯುವಜನರು ಈ ನಾಲೆಗಳನ್ನು ಮತ್ತೆ ನದಿಗಳನ್ನಾಗಿ ಪುನರ್ಜೀವಗೊಳಿಸಲು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಬಿಬಿಎಂಪಿ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತರಾದ ಪ್ರೀತಿ ಗೆಹಲೋತ್‌, ಬೆಂಗಳೂರು ಉತ್ತರ ಸಂಚಾರ ಡಿಸಿಪಿ ಸಿರಿ ಗೌಡ, ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ, ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಬಾಲಚಂದ್ರ, ಗೋಕುಲ ಶೈಕ್ಷಣಿಕ ಫೌಂಡೇಶನ್ನ ಸಿಇಒ ಶ್ರೀನಿವಾಸ ಮೂರ್ತಿ, ವಿಮೋವೆ ಫೌಂಡೇಶನ್ ಸಂಸ್ಥಾಪಕ ಮತ್ತು ಆಲ್ಟರ್ನೇಟಿವ್ 24 ಕಾರ್ಯಕ್ರಮದ ಮುಖ್ಯ ರೂವಾರಿ ವಿನಯ ಶಿಂಧೆ, ದಿ ನ್ಯಾಚುರಲ್ ಸ್ಕೂಲ್ ಸಂಸ್ಥಾಪಕಿ ಪ್ರಿಯಾ ವೆಂಕಟೇಶ್ ಸಂವಾದ ನಡೆಸಿಕೊಟ್ಟರು.

‘ನಮ್ಮ ಬೆಂಗಳೂರು ಯುವಜನರ ಸಮೀಕ್ಷೆ’ ವರದಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ವಿಡಿಯೊ ರೀಲ್‌ ಸ್ಪರ್ಧೆಯನ್ನು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದು, ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT