ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಸರಸ್ವತಿಯೂ ಮಹಿಳೆಯರಿಗೆ ಶಿಕ್ಷಣ ಕೊಡಲಿಲ್ಲ: ಇಂದಿರಾ ಕೃಷ್ಣಪ್ಪ

Last Updated 8 ಜನವರಿ 2023, 20:55 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾವ ಸರಸ್ವತಿಯೂ ಮಹಿಳೆಯರಿಗೆ ಶಿಕ್ಷಣ ಕೊಡಲಿಲ್ಲ. ಆದರೆ, ಶಿಕ್ಷಣ ಕೊಡಿಸಿದ್ದು ಸಾವಿತ್ರಿಬಾಯಿ ಫುಲೆ’ ಎಂದು ಬಿ.ಕೃಷ್ಣಪ್ಪ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಕೃಷ್ಣಪ್ಪ ಅಭಿಪ್ರಾಯಪಟ್ಟರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ಮಹಿಳಾ ಒಕ್ಕೂಟ, ಬಿ.ಕೃಷ್ಣಪ್ಪ ಟ್ರಸ್ಟ್‌ ಏರ್ಪಡಿಸಿದ್ದ ‘ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ 192ನೇ ಜನ್ಮದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಯಾವ ಸಂಪರ್ಕ ಸಾಧನವೂ ಇಲ್ಲದ ಕಾಲದಲ್ಲಿ ಸಾವಿತ್ರಿ ಬಾಯಿ ಫುಲೆ ಅವರು ಪ್ರತಿರೋಧಕ್ಕೂ ಜಗ್ಗದೆ ಮಹಿಳೆಯರಿಗೆ ಶಿಕ್ಷಣ ನೀಡಿದರು. ಅವರನ್ನು ನೆನಪಿಸಿಕೊಂಡು ಮುನ್ನಡೆಯುವ ಅಗತ್ಯವಿದೆ’ ಎಂದರು.

ಸಾಹಿತಿ ವಸುಂದರಾ ಭೂಪತಿ ಅವರು, ‘ಸಾವಿತ್ರಿ ಬಾಯಿ ಫುಲೆ ಅವರು ಪಾಠ ಮಾಡಲು ಹೊರಟರೆ ರಸ್ತೆಯಲ್ಲಿ ಅವರ ಮೇಲೆ ಸಗಣಿ ಎಸೆಯುತ್ತಿದ್ದರು. ಅದಕ್ಕೂ ಅವರು ಜಗ್ಗಲಿಲ್ಲ, ಪತಿ ಜ್ಯೋತಿಬಾ ಫುಲೆ ಅವರಿಂದ ಪಡೆದ ಶಿಕ್ಷಣವನ್ನು ಧೈರ್ಯದಿಂದ ಮಹಿಳೆಯರಿಗೆ ಹಂಚಿದರು’ ಎಂದು ಬಣ್ಣಿಸಿದರು.

‘ಸಗಣಿ ಎಸೆಯುವ ಪುರುಷರ ಪರವಾಗಿ ನಾನೇ ಕ್ಷಮೆ ಕೇಳುತ್ತೇನೆ. ನಿತ್ಯ ಆ ಸೀರೆಯನ್ನು ತೊಳೆದುಕೊಡುತ್ತೇನೆ ಎಂದಿದ್ದರು. ಆ ಮನಸ್ಥಿತಿಯೇ ಸಾವಿತ್ರಿಬಾಯಿ ಅವರಲ್ಲಿ ಧೈರ್ಯ, ಸಹನೆಯನ್ನು ತುಂಬಿತ್ತು’ ಎಂದರು.

ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಬಿ.ಕೃಷ್ಣಪ್ಪ ಟ್ರಸ್ಟ್‌ನ ರುದ್ರಪ್ಪ ಹನಗವಾಡಿ, ಬಿಬಿಎಂಪಿ ಉಪ ಆಯುಕ್ತೆ ಲಕ್ಷ್ಮೀದೇವಿ, ರೈತ ಹೋರಾಟಗಾರ್ತಿ ಅನುಸೂಯಮ್ಮ, ದಲಿತ ಹೋರಾಟಗಾರ್ತಿ ಗಂಗಮ್ಮ, ಎಸ್.ಎಂ.ಶ್ಯಾಮಲಾ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT