ಬೆಂಗಳೂರು: ಕಾಮಗಾರಿಗಳ ಬಿಲ್ ಪಾವತಿಯಲ್ಲೂ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಗುತ್ತಿಗೆದಾರರಿಗೆ ಮೀಸಲಾತಿ ನೀಡುವಂತೆ ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘವು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಆಗ್ರಹಿಸಿದೆ.
ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘದ ನಿಯೋಗದ ಜತೆ ಶುಕ್ರವಾರ ಸಭೆ ನಡೆಸಿದ ಸಚಿವರು, ಅವರ ಅಹವಾಲುಗಳನ್ನು ಆಲಿಸಿದರು.
‘ಕಾಮಗಾರಿಗಳ ಗುತ್ತಿಗೆಯಲ್ಲಿ ಮೀಸಲಾತಿ ನೀಡಿರುವಂತೆ ಬಿಲ್ ಪಾವತಿಯಲ್ಲೂ ಮೀಸಲಾತಿ ಕಲ್ಪಿಸಬೇಕು. ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಕಾಮಗಾರಿಯ ಮೊತ್ತದ ಶೇಕಡ 30ರಷ್ಟನ್ನು ಮುಂಗಡವಾಗಿ ಪಾವತಿಸಲು ಕ್ರಮ ಕೈಗೊಳ್ಳಬೇಕು’ ಎಂದು ಗುತ್ತಿಗೆದಾರರು ಒತ್ತಾಯಿಸಿದರು.
‘ಎಸ್‌ಸಿ, ಎಸ್‌ಟಿ ಗುತ್ತಿಗೆದಾರರು ಸಲ್ಲಿಸಿದ ಬಿಲ್‌ಗಳನ್ನು 60 ದಿನಗಳೊಳಗೆ ಪಾವತಿಸಬೇಕೆಂಬ ಬೇಡಿಕೆ ಇಡಲಾಗಿತ್ತು. ಅದನ್ನು ಸಚಿವರು ಒಪ್ಪಿದ್ದಾರೆ. ಗುತ್ತಿಗೆಯಲ್ಲಿನ ಮೀಸಲಾತಿ ದುರ್ಬಳಕೆ ತಡೆಯಲು ಕೆಲಸದ ಸ್ಥಳದಲ್ಲಿ ಅಧಿಕಾರಿಗಳು ಹಾಗೂ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಫೋಟೊ ಸೆರೆಹಿಡಿದು, ದಾಖಲೆಗೆ ಸೇರಿಸುವುದನ್ನು ಕಡ್ಡಾಯ ಮಾಡುವಂತೆಯೂ ಒತ್ತಾಯಿಸಿದ್ದೇವೆ. ಈ ಬೇಡಿಕೆಯನ್ನೂ ಸಚಿವರು ಒಪ್ಪಿದ್ದಾರೆ’ ಎಂದು ಸಂಘದ ಅಧ್ಯಕ್ಷ ಮಹದೇವಸ್ವಾಮಿ ಎನ್. ತಿಳಿಸಿದರು.
ಅರ್ಹತಾ ಮಾನದಂಡಗಳನ್ನು ಸಡಿಲಿಸಲು ಹಾಗೂ ಸಣ್ಣ ಕಾಮಗಾರಿಗಳ ಗುತ್ತಿಗೆಯನ್ನು ಪ್ಯಾಕೇಜ್ ಟೆಂಡರ್‌ನಡಿ ವಹಿಸುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆಯೂ ಕೋರಲಾಗಿದೆ ಎಂದರು.
‘ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಸರಕು ಖರೀದಿ ಸೇರಿದಂತೆ ಇತರೆ ಸ್ವರೂಪದ ಕೆಲಸಗಳ ಗುತ್ತಿಗೆಯಲ್ಲೂ ಮೀಸಲಾತಿ ನೀಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘದ ಪದಾಧಿಕಾರಿಗಳು ಸಚಿವರ ಮುಂದಿಟ್ಟಿದ್ದಾರೆ. ಕೆಲವಕ್ಕೆ ಒಪ್ಪಿಗೆ ಸೂಚಿಸಿದ್ದು, ಉಳಿದ ಬೇಡಿಕೆಗಳ ಕುರಿತು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಸಚಿವರು ಸೂಚಿಸಿದ್ದಾರೆ’ ಎಂದು ಲೋಕೋಪಯೋಗಿ ಇಲಾಖೆ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.