ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೇಶದ ಸಿಂಧುತ್ವ ಪರಿಶೀಲಿಸಲು ಸುಪ್ರೀಂ ನಿರ್ಧಾರ

ಕಟ್ಟಡಗಳ ಪರಿಸರ ಪರವಾನಗಿ ರದ್ದುಗೊಳಿಸಿದ ಎನ್‌ಜಿಟಿ:
Last Updated 2 ಮಾರ್ಚ್ 2020, 19:38 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಕೈಕೊಂಡ್ರಳ್ಳಿ ಕೆರೆಯ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಗೋದ್ರೆಜ್‌ ಪ್ರಾಪರ್ಟೀಸ್‌ನ ಕಟ್ಟಡಗಳಿಗೆ ನೀಡಿರುವ ಪರಿಸರ ಪರವಾನಗಿ ರದ್ದುಪಡಿಸಿ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಹೊರಡಿಸಿರುವ ಆದೇಶದ ಸಿಂಧುತ್ವವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರ್ಧರಿಸಿದೆ.

ಕಳೆದ ಫೆಬ್ರುವರಿ 3ರಂದು ಎನ್‌ಜಿಟಿ ಹೊರಡಿಸಿರುವ ಆದೇಶದ ಸಿಂಧುತ್ವ ಪ್ರಶ್ನಿಸಿ ವಂಡರ್‌ ಪ್ರಾಜೆಕ್ಟ್ಸ್‌ ಡವಲಪ್‌ಮೆಂಟ್‌ ಪ್ರೈ.ಲಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠ, ಈ ಸಂಬಂಧ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿದೆ.

ನಿರ್ಮಾಣ ಯೋಜನೆಗಾಗಿ ಅಗತ್ಯ ಅನುಮತಿ ಪಡೆಯಲಾಗಿದ್ದರೂ, ಪ್ರಕರಣವನ್ನು ತಪ್ಪಾಗಿ ಅರ್ಥೈಸಿಕೊಂಡು ಎನ್‌ಜಿಟಿ ಈ ಆದೇಶ ನೀಡಿದೆ. ಅಲ್ಲದೆ, ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದ ಆದೇಶವನ್ನು ಮರು ಜಾರಿಗೊಳಿಸಿದೆ ಎಂದು ಅರ್ಜಿದಾರರ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ನ್ಯಾಯಪೀಠಕ್ಕೆ ಹೇಳಿದರು.

2019ರ ಮಾರ್ಚ್ 11ರಂದು ಮಹಾದೇವ್‌ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಜಂಟಿ ತಪಾಸಣೆ ನಡೆಸಲಾಗಿದ್ದು, ಎಲ್ಲಾ ಯೋಜನೆಗಳೂ ಕೆರೆಯ ಬಫರ್ ವಲಯದ ವ್ಯಾಪ್ತಿಯಲ್ಲಿವೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಅರ್ಜಿದಾರರಿಗೆ ಸಂಬಂಧಿಸಿದ ಯೋಜನೆಯ ಕಾಮಗಾರಿಯ ಪರಿಶೀಲನೆಯನ್ನು ಫೆಬ್ರವರಿ 6ರಂದು ಕೈಗೆತ್ತಿಕೊಳ್ಳಲಾಗಿದ್ದರೂ, ಪರಿಸರ ಪರವಾನಗಿಯು ಕಾನೂನು ಬಾಹಿರ ಎಂಬ ಆದೇಶವನ್ನು ಫೆಬ್ರವರಿ 3ರಂದೇ ನೀಡಲಾಗಿದೆ ಎಂದು ಅವರು ವಿವರಿಸಿದರು.

ಪ್ರತಿಸ್ಪರ್ಧಿ ಡವಲಪರ್‌ಗಳು ಎನ್‌ಜಿಟಿಗೆ ದೂರು ಸಲ್ಲಿಸಿದ್ದಾರೆ ಎಂದು ಆರೋಪಿಸಿದ ಸಿಂಘ್ವಿ, ₹ 650 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 650 ಫ್ಲ್ಯಾಟ್‌ಗಳಲ್ಲಿ ಶೇ 80ರಷ್ಟು ಫ್ಲ್ಯಾಟ್‌ಗಳು ಈಗಾಗಲೇ ಮಾರಾಟವಾಗಿವೆ ಎಂದು ಹೇಳಿದರು.

ಕೈಕೊಂಡ್ರಳ್ಳಿ ಕೆರೆಯ ಬಫರ್‌ ವಲಯದ ವ್ಯಾಪ್ತಿಯಲ್ಲೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಹಾಗಾಗಿ, ಎನ್‌ಜಿಟಿ ನೀಡಿರುವ ಆದೇಶಕ್ಕೆ ತಡೆ ನೀಡಬಾರದು ಎಂದು ವಕೀಲ ಪಿ.ಎಸ್‌. ಪಟ್ವಾಲಿಯಾ ವಾದ ಮಂಡಿಸಿದರು.

ಎನ್‌ಜಿಟಿ ಆದೇಶಕ್ಕೆ ತಡೆ ಕೋರಿ ಸಲ್ಲಿಸಲಾದ ಅರ್ಜಿದಾರರಿಗೂ ನೋಟಿಸ್‌ ಜಾರಿ ಮಾಡಿದ ನ್ಯಾಯಪೀಠವು, ಜಂಟಿ ತಪಾಸಣೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿತು. ಅಲ್ಲದೆ, ಪ್ರಕರಣ ಕುರಿತು 3 ವಾರಗಳ ನಂತರ ವಿಚಾರಣೆ ನಡೆಸಲು ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT