ಮಂಗಳವಾರ, ಮೇ 18, 2021
22 °C
ಬಿಎಂಎಸ್‌ ಎಜುಕೇಷನಲ್‌ ಟ್ರಸ್ಟ್‌ನ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪ್ರಕರಣ

ಸೀಟ್ ಬ್ಲಾಕಿಂಗ್‌ ಆರೋಪ: ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಂಜಿನಿಯರಿಂಗ್‌ ಸೀಟ್‌ ಬ್ಲಾಕಿಂಗ್‌ ಆರೋಪಕ್ಕೆ ಸಂಬಂಧಿಸಿದಂತೆ ಬಂದ ಹಲವು ದೂರುಗಳನ್ನು ಆಧರಿಸಿ ಬಿಎಂಎಸ್‌ ಎಜುಕೇಷನಲ್‌ ಟ್ರಸ್ಟ್‌ನ ಅಡಿಯಲ್ಲಿರುವ ಎರಡು ಎಂಜಿನಿಯರಿಂಗ್‌ ಕಾಲೇಜುಗಳಿಗೆ ಹೈಕೋರ್ಟ್‌ ನಿವೃತ್ತ ನ್ಯಾಯೂರ್ತಿ ಬಿ. ಮನೋಹರ್‌ ನೇತೃತ್ವದ ಪ್ರವೇಶಾತಿ ಮೇಲ್ವಿಚಾರಣಾ ಸಮಿತಿ (ಎಒಸಿ) ನೋಟಿಸ್‌ ನೋಟಿದೆ.

2020–21ನೇ ಶೈಕ್ಷಣಿಕ ಸಾಲಿನಲ್ಲಿ ಸೀಟ್‌ ಬ್ಲಾಕಿಂಗ್‌ ಮೂಲಕ ಟ್ರಸ್ಟ್‌ನ ಎರಡು ಎಂಜಿನಿಯರಿಂಗ್‌  ಕಾಲೇಜುಗಳಿಗೆ ಆಯ್ಕೆಯಾದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ. ಆ ಮೂಲಕ, ವಿದ್ಯಾರ್ಥಿಗಳ ಪ್ರವೇಶ ನೀಡುವಾಗ ಅಕ್ರಮ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ 10 ದಿನಗಳ ಒಳಗೆ ಪ್ರತಿಕ್ರಿಯಿಸಬೇಕು ಎಂದು ಏ. 7ರಂದು ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿಗೆ ಸಮಿತಿ ನೋಟಿಸ್‌ ನೀಡಿದೆ.

ಸಮಿತಿಯ ಪ್ರಾಥಮಿಕ ಮಾಹಿತಿ ಪ್ರಕಾರ ಸೀಟ್‌ ಬ್ಲಾಕಿಂಗ್‌ನಲ್ಲಿ ದಂಧೆಯಲ್ಲಿ ಬಿಎಂಎಸ್‌ ಕಾಲೇಜು ಆಫ್‌ ಎಂಜಿನಿಯರಿಂಗ್‌ (ಬಿಎಂಸಿಇ) ಮತ್ತು ಬಿಎಂಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಬಿಎಂಎಸ್‌ಐಟಿ) ಸಂಸ್ಥೆ ಭಾಗಿಯಾಗಿರುವ ಆರೋಪವಿದೆ. ‘ಈ ಎರಡೂ ಕಾಲೇಜುಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ದಾಖಲಾಗದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಈ ಬಾರಿ ಕೌನ್ಸೆಲಿಂಗ್‌ಗೂ ಮೊದಲು ಈ ಬಗ್ಗೆ ಕಾಲೇಜುಗಳಿಗೆ ಎಚ್ಚರಿಕೆ ನೀಡಲಾಗಿತ್ತು’  ಎಂದು ಕಾಮೆಡ್–ಕೆ ನೀಡಿದ್ದ ಮಾಹಿತಿಯನ್ನೂ ಸಮಿತಿ ತನ್ನ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.

ಲಭ್ಯ ದಾಖಲೆಗಳ ಪ್ರಕಾರ, ಈ ಬಾರಿ ಕಾಮೆಡ್‌–ಕೆ ಅಡಿ ಬಿಎಂಸಿಇಗೆ ಹಂಚಿಕೆಯಾದ 277 ಸೀಟುಗಳಲ್ಲಿ 152 ವಿದ್ಯಾರ್ಥಿಗಳು ವರದಿ ಮಾಡಿಕೊಂಡಿಲ್ಲ. ಕಳೆದ ವರ್ಷ 161ರಲ್ಲಿ 92 ಮಂದಿ ದಾಖಲು ಮಾಡಿಕೊಂಡಿರಲಿಲ್ಲ. ಅದೇ ರೀತಿ ಬಿಎಂಎಸ್‌ಐಟಿಗೆ ಈ ವರ್ಷ 180 ಸೀಟು ಹಂಚಿಕೆಯಾಗಿದ್ದು, 79 ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ. ಕೆಇಎ ಮೂಲಕ ಬಿಎಂಸಿಇಗೆ ಸೀಟ್‌ ಹಂಚಿಕೆಯಲ್ಲಿ ಆಯ್ಕೆಯಾದ 18 ವಿದ್ಯಾರ್ಥಿಗಳು ಕಾಲೇಜಿನಲ್ಲಿ ವರದಿ ಮಾಡಿಕೊಂಡಿಲ್ಲ. 7 ವಿದ್ಯಾರ್ಥಿಗಳು ಆರಂಭಿಕ ಸುತ್ತಿನ ಬಳಿಕ ಪ್ರವೇಶ ರದ್ದು ಮಾಡಿಕೊಂಡಿದ್ದಾರೆ. ಅದೇ ರೀತಿ ಬಿಎಂಎಸ್‌ಐಟಿಯಲ್ಲಿ 6 ವಿದ್ಯಾರ್ಥಿಗಳು ವರದಿ ಮಾಡಿಕೊಂಡಿಲ್ಲ, ಒಬ್ಬ ವಿದ್ಯಾರ್ಥಿ ಪ್ರವೇಶ ರದ್ದು ಮಾಡಿಕೊಂಡಿದ್ದಾನೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಈ ರೀತಿ ವರದಿ ಮಾಡಿಕೊಳ್ಳದೆ ಖಾಲಿ ಉಳಿದ ಸೀಟುಗಳನ್ನು ಮ್ಯಾನೇಜ್‌ಮೆಂಟ್‌ ಕೋಟಾದಲ್ಲಿ ಕಾಲೇಜುಗಳು ಭರ್ತಿ ಮಾಡಿಕೊಂಡಿರುವುದನ್ನು ಸಮಿತಿ ಪತ್ತೆ ಮಾಡಿದೆ.

ಬೆಂಗಳೂರಿನ ಸುತ್ತಮುತ್ತಲಿನ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸೀಟುಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ, ಸೀಟು ಆಯ್ಕೆ ಮಾಡಿಕೊಂಡ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿಲ್ಲ ಎಂಬ ಅಂಶವನ್ನು ನಂಬುವುದು ಕಷ್ಟ. ಕಾಮೆಡ್–ಕೆ ಸಲ್ಲಿಸಿರುವ ದಾಖಲೆಗಳ ಪ್ರಕಾರ, ವರದಿ ಮಾಡಿಕೊಳ್ಳದ ವಿದ್ಯಾರ್ಥಿಗಳ ಶುಲ್ಕವನ್ನು ಮರು ಪಾವತಿಸುವಂತೆ ಈ ಕಾಲೇಜುಗಳು ಬೇಡಿಕೆ ಮುಂದಿಟ್ಟಿವೆ ಎಂದೂ ನೋಟಿಸ್‌ನಲ್ಲಿದೆ. 

ಬಿಎಂಎಸ್‌ ಟ್ರಸ್ಟ್‌ನ ಕಾಲೇಜುಗಳಲ್ಲಿನ ಪ್ರವೇಶ ಪ್ರಕ್ರಿಯೆಯನ್ನು ತಮ್ಮ ವಶಕ್ಕೆ ಪಡೆಯುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವ ಎಚ್ಚರಿಕೆಯನ್ನೂ ನೋಟಿಸ್‌ನಲ್ಲಿ ಸಮಿತಿ ನೀಡಿದೆ. ಅಲ್ಲದೆ, 2020–21 ಮತ್ತು ಹಿಂದಿನ ಎರಡು ವರ್ಷಗಳಲ್ಲಿ ಕಾಲೇಜುಗಳಲ್ಲಿ ಸಿಇಟಿ ರ‍್ಯಾಂಕಿಂಗ್‌ ಸಹಿತ ಮ್ಯಾನೇಜ್‌ಮೆಂಟ್‌ ಕೋಟಾದಡಿ ಪ್ರವೇಶ ನೀಡಿದ ವಿದ್ಯಾರ್ಥಿಗಳ ಪಟ್ಟಿ ಮತ್ತು ಪಡೆದ ಶುಲ್ಕದ ವಿವರ ನೀಡಬೇಕು. ಜೊತೆಗೆ, ವರದಿ ಮಾಡಿಕೊಳ್ಳದ ವಿದ್ಯಾರ್ಥಿಗಳ ವಿಭಾಗದಲ್ಲಿ ಆಡಳಿತ ಮಂಡಳಿ ಪ್ರವೇಶ ನೀಡಿದ ವಿದ್ಯಾರ್ಥಿಗಳ ಪಟ್ಟಿಯನ್ನೂ ನೀಡುವಂತೆ ತಿಳಿಸಿದೆ.

ಬಿಎಂಎಸ್‌ ಟ್ರಸ್ಟ್‌ನ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯೆಗೆ ಕಾಲೇಜಿನ ಟ್ರಸ್ಟಿ ಡಾ. ರಾಗಿಣಿ ನಾರಾಯಣ್‌ ಅವರನ್ನು ಸಂಪರ್ಕಿಸಿದಾಗ ಕಾಲೇಜಿನ ನಿರ್ದೇಶಕ ಡಾ. ಮುರಳಿಕೃಷ್ಣ ಅವರನ್ನು ಸಂಪರ್ಕಿಸುವಂತೆ ತಿಳಿಸಿದರು. ಆದರೆ, ಮುರಳಿಕೃಷ್ಣ, ‘ಪ್ರವೇಶ ಪ್ರಕ್ರಿಯೆಯಲ್ಲಿ ನನ್ನ ಪಾತ್ರ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಟ್ರಸ್ಟ್‌ನ ಪ್ರವೇಶ ಸಮಿತಿಯ ಅಧ್ಯಕ್ಷ ದಯಾನಂದ ಪೈ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಬಿಎಂಎಸ್‌ ಟ್ರಸ್ಟ್‌ನ ಟ್ರಸ್ಟಿಯೂ ಆಗಿರುವ ನಿವೃತ್ತ ಐಎಎಸ್‌ ಅಧಿಕಾರಿ ಎಂ. ಮದನ್ ಗೋಪಾಲ್‌ ಮಾತನಾಡಿ, ‘ಸಿಇಟಿಗೆ ಮರಳಿಸಿದ ಸೀಟುಗಳನ್ನು ಭರ್ತಿ ಮಾಡಿದರೆ ಅಕ್ರಮ. ನಾವು ಆ ರೀತಿ ಮಾಡಿಲ್ಲ. ಕಾಮೆಡ್‌–ಕೆ ಸೀಟುಗಳು ಮರಳಿಸಿದ್ದರೆ, ಅವುಗಳನ್ನು ಮ್ಯಾನೇಜ್‌ಮೆಂಟ್‌ ಮಟ್ಟದಲ್ಲಿ ತುಂಬಿಸಿಕೊಳ್ಳುತ್ತಿದ್ದೇವೆ. ಅದರಲ್ಲಿ ಅವ್ಯವಹಾರ ನಡೆದಿದ್ದರೆ ತನಿಖೆ ನಡೆಸಲಾಗುವುದು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು