ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಪುರ: ಬೆಳ್ಳಂದೂರು ಕೆರೆಗೆ ಕೊಳಚೆ ನೀರು; ಕ್ರಮದ ಎಚ್ಚರಿಕೆ

Published 31 ಮೇ 2023, 16:30 IST
Last Updated 31 ಮೇ 2023, 16:30 IST
ಅಕ್ಷರ ಗಾತ್ರ

ಕೆ.ಆರ್.ಪುರ: ‘ಕೊಳಚೆ ನೀರು ಸೇರ್ಪಡೆಯಿಂದ ಶಾಪಗ್ರಸ್ತವಾಗಿರುವ ಬೆಳ್ಳಂದೂರು ಕೆರೆಗೆ, ಸಂಸ್ಕರಿಸದೆ ತ್ಯಾಜ್ಯ ನೀರು ಹರಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದರು.

ಬೆಳ್ಳಂದೂರು ಕೆರೆಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

‘ಮಂಡಳಿಯು ಮಾಲಿನ್ಯ ತಡೆಗೆ ಸಂಬಂಧಿಸಿದಂತೆ ತನ್ನ ಪಾಲಿನ ಕರ್ತವ್ಯವನ್ನು ಯಾವುದೇ ಲೋಪಕ್ಕೆ ಆಸ್ಪದವಿಲ್ಲದಂತೆ ನಿರ್ವಹಿಸಬೇಕು. ಯಾರಾದರೂ ಕೆರೆಗೆ ತ್ಯಾಜ್ಯ ತಂದು ಸುರಿದರೆ, ರಾಸಾಯನಿಕ ಮತ್ತು ಸಂಸ್ಕರಿಸದ ತ್ಯಾಜ್ಯವನ್ನು ನೇರವಾಗಿ ಹರಿ ಬಿಟ್ಟರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು’ ಎಂದು ಸಚಿವರು ಸೂಚಿಸಿದರು.

‘ಬೆಂಗಳೂರಿನ ಯಾವುದೇ ಕೆರೆಯಲ್ಲಿ ತ್ಯಾಜ್ಯ ಸುರಿಯದಂತೆ ನೋಡಿಕೊಳ್ಳಬೇಕು. ರಾತ್ರಿಯ ವೇಳೆ ಮಾತ್ರ ಕೊಳಚೆ ಸ್ಥಳಾಂತರಿಸುವುದು ಸೂಕ್ತ ಎಂಬ ಅಭಿಪ್ರಾಯವಿದೆ. ಹೀಗಾಗಿ, ಹೆಚ್ಚುವರಿ ವಾಹನ ಬಳಕೆ ಮಾಡಿ, ಕಾಮಗಾರಿಯನ್ನು ಶೀಘ್ರ ಮುಗಿಸಬೇಕು. ಕೆರೆ ಪುನಶ್ಚೇತನ ಮಾಡಿದರೆ ಒಳಿತಾಗುತ್ತದೆ’ ಎಂದರು.

‘ಪ್ರಸ್ತುತ 14 ತ್ಯಾಜ್ಯ ನೀರು ಸಂಸ್ಕರಣೆ ಘಟಕ (ಎಸ್.ಟಿ.ಪಿ.) ಕಾರ್ಯ ನಿರ್ವಹಿಸುತ್ತಿದ್ದು, ಇವುಗಳ ಸಾಮರ್ಥ್ಯ 560 ಎಂ.ಎಲ್.ಡಿ. ಆಗಿದೆ. 5 ಎಸ್.ಟಿ.ಪಿ. ಮೇಲ್ದರ್ಜೆಗೇರಿಸಲಾಗುತ್ತಿದೆ’ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

‘ಮುಂದಿನ 10 ವರ್ಷಗಳ ಅವಧಿಗೆ ಅಗತ್ಯವಾದ ಎಸ್.ಟಿ.ಪಿ.ಗಳ ನಿರ್ಮಾಣ ಆಗಬೇಕು. ಕೆಲಸ ಅರ್ಧಕ್ಕೆ ನಿಂತರೆ ಮಾಡಿದ ಹಣವೂ ವ್ಯರ್ಥವಾಗುತ್ತದೆ’ ಎಂದು ಸಚಿವರು ಅಭಿಪ್ರಾಯಪಟ್ಟರು.

‘ರಾಷ್ಟ್ರೀಯ ಹಸಿರು ಪೀಠದ (ಎನ್‌ಜಿಟಿ) ನಿರ್ದೇಶನದಂತೆ ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸಬೇಕು’ ಎಂದು ಖಂಡ್ರೆ ಸೂಚಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎಂ. ಶಾಂತ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ವಿಜಯ ಮೋಹನ್ ರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT