ಶುಕ್ರವಾರ, ಜೂನ್ 25, 2021
22 °C
ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿದ ‘ಶಿ ಫಾರ್ ಸೊಸೈಟಿ’ ಟ್ರಸ್ಟ್

ಸೋಂಕಿತರ ನೆರವಿಗೆ ಬಂದ ಮಹಿಳಾ ಬೈಕರ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಮಹಿಳಾ ಬೈಕರ್‌ಗಳ ತಂಡವೊಂದು ಕೋವಿಡ್‌ ಸೋಂಕಿತರ ನೆರವಿಗೆ ಧಾವಿಸಿದೆ. ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ಉಚಿತವಾಗಿ ಕರೆದೊಯ್ಯಲು ಎರಡು ಆಂಬುಲೆನ್ಸ್‌ಗಳನ್ನು ಸೇವೆಗೆ ಸಮರ್ಪಿಸಿದೆ.

ನಗರದ 10 ಮಹಿಳಾ ಬೈಕರ್‌ಗಳೇ ಸೇರಿ ಸೈನಿಕರ ಕುಟುಂಬಗಳಿಗೆ ನೆರವಾಗಲು ‘ಶಿ ಫಾರ್ ಸೊಸೈಟಿ’ ಎಂಬ ಟ್ರಸ್ಟ್ ಸ್ಥಾಪಿಸಿಕೊಂಡಿದ್ದಾರೆ. ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿ ಸೈನಿಕರ ಕುಟುಂಬಗಳು ಮಾತ್ರವಲ್ಲದೆ ಹಸಿದವರಿಗೆ ಆಹಾರ ಒದಗಿಸಲು ಶ್ರಮಿಸಿದ್ದರು. ವಿಶೇಷವಾಗಿ ತೃತೀಯ ಲಿಂಗಿಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸಿದ್ದರು.

ಎರಡನೇ ಅಲೆಯಲ್ಲಿ ಸೋಂಕಿತರಿಗೆ ನೇರವಾಗಿ ನೆರವಾಗಲು ‘ಶಿ ಫಾರ್ ಸೊಸೈಟಿ’ ಮುಂದಾಗಿದೆ. ‘ಎರಡು ವ್ಯಾನ್‌ಗಳನ್ನು ಬಾಡಿಗೆಗೆ ಪಡೆದು ಆಮ್ಲಜನಕ ಸಹಿತ ಆಂಬುಲೆನ್ಸ್ ಆಗಿ ಮಾರ್ಪಡಿಸಲಾಗಿದೆ’ ಎಂದು ಟ್ರಸ್ಟ್‌ನ ಸದಸ್ಯೆ ಹರ್ಷಿಣಿ ತಿಳಿಸಿದರು.

‘ಸೋಂಕಿತರು ಮನೆಯಿಂದ ಆಸ್ಪತ್ರೆಗೆ ಹೋಗಲು, ಆಸ್ಪತ್ರೆಯಿಂದ ಸ್ಕ್ಯಾನಿಂಗ್ ಸೆಂಟರ್ ಮತ್ತು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಈ ಸೇವೆ ಒದಗಿಸಲಾಗುತ್ತಿದೆ. ಆಸ್ಪತ್ರೆಗೆ ತೆರಳಲು ರೋಗಿಗಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದೊಂದಿಗೆ ಈ ಸೇವೆ ಆರಂಭಿಸಲಾಗಿದೆ’ ಎಂದು ಅವರು ಹೇಳಿದರು.

ಕಳೆದ 10 ದಿನಗಳಿಂದ ಈ ಸೇವೆ ಆರಂಭವಾಗಿದ್ದು, ಹಲವರು ಇದರ ಉಪಯೋಗ ಪಡೆದುಕೊಂಡಿದ್ದಾರೆ. ಈ ಉಚಿತ ಸೇವೆಯನ್ನು ಜನರು ಬಳಕೆ ಮಾಡಿಕೊಳ್ಳಬೇಕು. ಅದಕ್ಕಾಗಿ ಹೆಲ್ಪ್‌ಲೈನ್ ಸಂಖ್ಯೆಗಳನ್ನೂ(96635 65321, 98864 08603, 91416 35045, 99165 96396) ನೀಡಲಾಗಿದೆ ಎಂದು ವಿವರಿಸಿದರು.

‘ತಿಂಗಳಿಗೆ ₹ 3 ಲಕ್ಷ ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯಕ್ಕೆ ಟ್ರಸ್ಟ್‌ ಸದಸ್ಯರೇ ವೆಚ್ಚ ಭರಿಸುತ್ತಿದ್ದೇವೆ. ದಾನಿಗಳು ನೆರವು ಪಡೆದು ನಿಧಿ ಸಂಗ್ರಹಿಸಲು ಕೂಡ ಮುಂದಾಗಿದ್ದೇವೆ. ಆಸಕ್ತರು 99721 59315 ದೂರವಾಣಿ ಸಂಖ್ಯೆ ಸಂಪರ್ಕಿಸಿ ನೆರವು ನೀಡಬಹುದು’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು