ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಬತ್ತರ ಸುಬ್ಬಣ್ಣಗೆ ಗೀತ ಅಭಿನಂದನೆ

Last Updated 30 ಡಿಸೆಂಬರ್ 2018, 19:28 IST
ಅಕ್ಷರ ಗಾತ್ರ

ಬೆಂಗಳೂರು: ‘ಆನಂದಮಯ ಈ ಜಗಹೃದಯ.. ಏತಕೆ ಭಯ ಮಾಣೋ....’ ಈ ಹಾಡನ್ನು ಹಾಡಿ ಮುಗಿಸುತ್ತಿದ್ದಂತೆಯೇ ಶಿವಮೊಗ್ಗ ಸುಬ್ಬಣ್ಣ, ‘ನಾನು ಹಾಡಿದ್ದ ಈ ಗೀತೆಯನ್ನು ಆಲಿಸಿದ್ದ ಕುವೆಂಪು, ‘ನಾನು ಈ ಸಾಲುಗಳನ್ನು ಬರೆದದ್ದಕ್ಕೆ ಸಾರ್ಥಕವಾಯಿತು’ ಎಂದು ಬೆನ್ನು ತಟ್ಟಿದ್ದರು’ ಎಂದು ಸ್ಮರಿಸಿದರು.

– ಇಡೀ ಸಮಾರಂಭದ ಕೇಂದ್ರ ವ್ಯಕ್ತಿಯಾಗಿದ್ದ ಸುಬ್ಬಣ್ಣ ಅವರ ಒಂದು ಸಾಲಿನ ಮಾತು ಇದು.

ಕರ್ನಾಟಕ ಸುಗಮ ಸಂಗೀತ ಪರಿಷತ್‌ ಆಶ್ರಯದಲ್ಲಿ ನಗರದ ಪಿಇಎಸ್‌ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ‘ಸುಗಮ ಸಂಗೀತ ಸಂಪತ್ತು ಡಾ.ಶಿವಮೊಗ್ಗ ಸುಬ್ಬಣ್ಣ ಎಂಬತ್ತು’ ಅಭಿನಂದನಾ ಕಾರ್ಯಕ್ರಮ ಮೇರು ಗಾಯಕನ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯಿತು. ಹೆಸರಾಂತ ಗಾಯಕರು ಸುಬ್ಬಣ್ಣ ಅವರು ಹಾಡಿದ ಗೀತೆಗಳನ್ನು ಮತ್ತೆ ಹಾಡಿದರು.

‘ಪ್ರೀತಿಯೆಂದರೇನು ಎಂದು ನೀನು ನನ್ನ ಕೇಳಿದೆ... ನಾನು ತಿಣುಕಾಡಿದೆ ಉತ್ತರ ಕೊಡಲಾಗದೆ...’ ಎಂದು ಮೃತ್ಯುಂಜಯ ದೊಡ್ಡವಾಡ ಹಾಡಿದರು. ಡಾ.ಚಂದ್ರಶೇಖರ ಕಂಬಾರ ಅವರು ರಚಿಸಿದ ‘ಗೆಳೆಯ ಬರತೀನಿ ಮನದಾಗಿನ ನೆನಪ...’ ಹಾಡು ಅರ್ಚನಾ ಉಡುಪ ಮಧುರ ಕಂಠದಲ್ಲಿ ಮೂಡಿಬಂತು.

ಬಿ.ಆರ್‌. ಲಕ್ಷ್ಮಣರಾವ್‌ ಅವರ, ‘ದೇವರೇ ಅಗಾಧ ನಿನ್ನ ಕರುಣೆಯ ಕಡಲು...’ ಹಾಡಿಗೆ ಪುಟಾಣಿಗಳಾದ ಶ್ರೇಯಾ ಹಾಗೂ ಸಚಿನ್‌ ಧ್ವನಿಯಾದರು.

ಹಿರಿಯ ರಾಜಕಾರಣಿ ಎಂ.ಸಿ. ನಾಣಯ್ಯ, ‘ನಾನು ಕಾನೂನು ಸಚಿವನಾಗಿದ್ದಾಗ ಆರು ತಿಂಗಳ ಅವಧಿಗೆ ಸುಬ್ಬಣ್ಣ ಅವರನ್ನು ಸರ್ಕಾರಿ ವಕೀಲರನ್ನಾಗಿ ನೇಮಿಸಿದ್ದೆ. ಕಾನೂನು ಸಂಬಂಧಿಸಿ ಯಾವುದೇ ಮಾತುಕತೆಗಳು ಸುಬ್ಬಣ್ಣ ಅವರ ಹಾಡಿನೊಂದಿಗೆ ಮುಕ್ತಾಯಗೊಳ್ಳುತ್ತಿತ್ತು’ ಎಂದರು.

ಕಾಡು ಕುದುರೆಯ ನೆನಪು

‘ನನ್ನ ‘ಕಾಡು ಕುದುರೆ ಓಡಿ ಬಂದಿತ್ತಾ...’ ಗೀತೆಯನ್ನು ಹಾಡಿದವರು ಸುಬ್ಬಣ್ಣ. ಅವರು ಚಲನಚಿತ್ರಗಳಿಗೆ ಹಾಡಲು ನಾಂದಿಯಾದದ್ದು ಇದೇ ಗೀತೆ. ಮದ್ರಾಸಿನಲ್ಲಿ ಧ್ವನಿಮುದ್ರಣ ಮಾಡಿದ್ದೆವು. ನಮಗೂ ತಮಿಳು ಗೊತ್ತಿರಲಿಲ್ಲ. ಆಫ್ರಿಕನ್‌ ಜಂಬೆ ಮತ್ತು ಕೊಳಲು ಬಳಸಿ ಹಾಡಲಾದ ಗೀತೆಯಿದು. ರಾಷ್ಟ್ರಪತಿ ಭವನದವರೆಗೂ ತಲುಪಿತು. ಹೀಗೆ ನನ್ನ ಮತ್ತು ಸುಬ್ಬಣ್ಣನ ನಂಟು ಬೆಸೆಯಿತು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT