ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ: ಹೂವು–ಹಣ್ಣು ದರ ಏರಿಕೆ

ಹಬ್ಬದ ಹಿನ್ನೆಲೆ | ತರಕಾರಿಗಳ ದರ ಸ್ಥಿರ | ಮಾರುಕಟ್ಟೆಯಲ್ಲಿ ಗರಿಗೆದರಿದ ಖರೀದಿ ಭರಾಟೆ
Last Updated 19 ಫೆಬ್ರುವರಿ 2020, 14:48 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಮಹಾಶಿವರಾತ್ರಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಮಾರುಕಟ್ಟೆಗಳಲ್ಲಿ ಹೂವು ಮತ್ತು ಹಣ್ಣಿನ ವ್ಯಾಪಾರ ಗರಿಗೆದರಿದೆ. ಮಂಗಳವಾರದಿಂದಲೇ ಹೂವು ಮತ್ತು ಹಣ್ಣಿನ ದರ ಏರಿಕೆ ಕಂಡಿದ್ದು, ಗುರುವಾರದ ವೇಳೆಗೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.

ಸಂಕ್ರಾಂತಿಗೆ ಪ್ರತಿ ಕೆ.ಜಿ.ಗೆ ₹80ರಂತೆ ಮಾರಾಟವಾಗಿದ್ದ ಸೇವಂತಿಗೆ ಹೂವಿನ ದರ ಈಗ ದ್ವಿಗುಣಗೊಂಡಿದೆ. ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ ಮಂಗಳವಾರ ಪ್ರತಿ ಕೆ.ಜಿ.ಗೆ ₹170ರಿಂದ ₹180ರಂತೆ ಮಾರಾಟವಾಯಿತು.

ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ತಮಿಳುನಾಡಿನಿಂದ ಬಂದಿರುವ ಕೆಂಪು, ಹಳದಿ ಹಾಗೂ ಬಿಳಿ ಬಣ್ಣಗಳ ಸೇವಂತಿಗೆಯನ್ನು ರಾಶಿ ಹಾಕಲಾಗಿದೆ. ಶಿವರಾತ್ರಿ ಹಬ್ಬದಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳಿಗೆ ಸೇವಂತಿಗೆ ಹೆಚ್ಚಾಗಿ ಬಳಕೆಯಾಗಲಿದ್ದು, ಹಳದಿ ಸೇವಂತಿಗೆ ಹೂವಿಗೆ ಬೇಡಿಕೆ ಹೆಚ್ಚಿದೆ. ಜನರು ಖರೀದಿಗೆ ಮುಗಿಬಿದ್ದರು.

ಸಂಕ್ರಾಂತಿ ಹಬ್ಬಕ್ಕೆ ಹೋಲಿಸಿದರೆ ಎಲ್ಲ ಹೂಗಳ ದರವೂ ಈಗ ಹೆಚ್ಚಾಗಿದೆ.ಗುಲಾಬಿ ಪ್ರತಿ ಕೆ.ಜಿ.ಗೆ ₹120ರಿಂದ ₹140ರಂತೆ ಮಾರಾಟ ಆಗುತ್ತಿದೆ. ಮಲ್ಲಿಗೆ, ಕಾಕಡ, ಕನಕಾಂಬರ ದುಬಾರಿಯಾದರೆ, ಚೆಂಡು ಹೂವು ಅಗ್ಗವಾಗಿದೆ.

ಭಾನುವಾರದವರೆಗೆ ಪ್ರತಿ ಕೆ.ಜಿ.ಗೆ ₹50ರಿಂದ ₹60ರಂತೆ ಮಾರಾಟವಾಗುತ್ತಿದ್ದ ದಾಳಿಂಬೆ ದರ ದಿಢೀರ್ ಏರಿಕೆಯಾಗಿದ್ದು, ಮಂಗಳವಾರ ₹100ರಿಂದ ₹120ರಂತೆ ಮಾರಾಟವಾಯಿತು. ಸೇಬು, ಕಿತ್ತಳೆ, ಮೂಸಂಬಿ, ಸಪೋಟ ಹಾಗೂ ದ್ರಾಕ್ಷಿ ಹಣ್ಣುಗಳ ದರಗಳೂ ಏರಿ‌ವೆ.

‘ಶಿವರಾತ್ರಿಗೆ ಉಪವಾಸ ವ್ರತ ಕೈಗೊಳ್ಳುವಬಹುತೇಕರು ಊಟದ ಬದಲಿಗೆ ಹಣ್ಣು ಸೇವಿಸುತ್ತಾರೆ. ಬಾಳೆಹಣ್ಣು, ಕಲ್ಲಂಗಡಿ ಹಾಗೂ ನಾನಾ ಬಗೆಯ ಹಣ್ಣುಗಳನ್ನು ಸೇವಿಸಿ ವ್ರತ ಪೂರ್ಣಗೊಳಿಸುವುದು ದರಗಳ ಏರಿಕೆಗೆ ಕಾರಣ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಪ್ರಕಾಶ್‌.

ಸೊಪ್ಪುಗಳಲ್ಲಿ ಕೊತ್ತಂಬರಿ ದುಬಾರಿಯಾಗಿದ್ದು, ಪ್ರತಿ ಕೆ.ಜಿಗೆ ₹70ರಂತೆ ಮಾರಾಟವಾಗುತ್ತಿದೆ. ದಂಟಿನ ಸೊಪ್ಪು, ಪುದೀನ, ಮೆಂತ್ಯ, ಸಬ್ಬಕ್ಕಿ ಹಾಗೂ ಪಾಲಕ್ ಸೊಪ್ಪುಗಳು ತುಸು ದುಬಾರಿಯಾಗಿವೆ.

ತರಕಾರಿಗಳು ಅಗ್ಗ:₹200ರ ಗಡಿ ದಾಟಿದ್ದ ಈರುಳ್ಳಿ, ವಾರದಿಂದ ಪ್ರತಿ ಕೆ.ಜಿ.ಗೆ ₹25ರಿಂದ ₹30ರಂತೆ ಮಾರಾಟವಾಗುತ್ತಿದೆ. ಉಳಿದಂತೆ ಬೆಳ್ಳುಳ್ಳಿ ದುಬಾರಿಯಾಗಿದೆ. ಬೀಟ್‌ರೂಟ್, ಬದನೆ, ಬೆಂಡೇಕಾಯಿ, ಕ್ಯಾರೆಟ್‌ ಹಾಗೂ ಬೀನ್ಸ್‌ ಅಗ್ಗವಾಗಿದೆ.

*
ತರಕಾರಿ ದರ ಕಡಿಮೆ ಇರುವುದು ನಿರಾಳ ಮೂಡಿಸಿದೆ. ಹೂವು, ಹಣ್ಣಿನ ದರಗಳು ಏರಿಕೆಯಾಗಿದ್ದು, ಹಬ್ಬದ ವೇಳೆಗೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
-ಕಾವ್ಯ ಎನ್‌, ಗ್ರಾಹಕಿ

*
ಪ್ರತಿವರ್ಷ ಈ ವೇಳೆಗೆ ತರಕಾರಿ ದರ ಏರುತ್ತಿತ್ತು. ಚಳಿಗಾಲದಲ್ಲಿ ತರಕಾರಿಗಳಿಗೆ ಹಾನಿ ಹೆಚ್ಚು. ಆದರೆ, ಉತ್ತಮ ಮಳೆ, ಪರಿಸರದಿಂದಾಗಿ ಫಸಲು ಚೆನ್ನಾಗಿ ಬಂದಿದೆ.
-ಸೈಯದ್‌ ಶಾಬಾಜ್, ತರಕಾರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT