ಬುಧವಾರ, ಏಪ್ರಿಲ್ 14, 2021
31 °C

‘ಜಾತಿ ವ್ಯವಸ್ಥೆ ತೊಲಗಿಸಲು ಯುವಕರು ಶ್ರಮಿಸಲಿ’-ಸಿದ್ದಲಿಂಗಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಹಾತ್ಮ ಗಾಂಧಿ, ಬಿ.ಆರ್‌.ಅಂಬೇಡ್ಕರ್‌, ಬಸವೇಶ್ವರ, ರಾಮಮನೋಹರ ಲೋಹಿಯಾ, ಬುದ್ಧ ಹೀಗೆ ಅನೇಕರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಈ ಪಿಡುಗನ್ನು ಬುಡಸಹಿತ ಕಿತ್ತೊಗೆಯಲು ಪ್ರಯತ್ನಿಸಿದರು. ಈ ಮಹಾನ್ ಚೇತನರ ಹಾದಿಯಲ್ಲೇ ಇಂದಿನ ಯುವಕರೂ ಸಾಗಬೇಕು’ ಎಂದು ಕವಿ ಸಿದ್ದಲಿಂಗಯ್ಯ ಭಾನುವಾರ ಹೇಳಿದರು.

ಕರ್ನಾಟಕ ಅಂಧರ ವಿಮೋಚನಾ ವೇದಿಕೆ, ಆಶ್ರಯ ಅಂಗವಿಕಲರ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಕಲ್ಯಾಣ ಸಂಸ್ಥೆಯ ಸಹಯೋಗದಲ್ಲಿ ನಡೆದ ಮುದಿಗೆರೆ ರಮೇಶ್‌ಕುಮಾರ್ ಅವರ ‘ಬಟಾಬಯಲು’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಮನುಷ್ಯ ಜಾತಿ ಇರುವವರೆಗೂ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಲ್ಲ ಎಂಬ ಮಾತಿದೆ. ಕುಡಿಯುವಾಗ, ಜೂಜಾಡುವಾಗ ಜಾತಿ ಅಡ್ಡಿ ಬರುವುದಿಲ್ಲ. ಬಾರ್‌ಗಳಲ್ಲಿ ಎಲ್ಲರೂ ಸಹೋದರರೇ. ಎರಡು ಮೂರು ಪೆಗ್‌ ಒಳಗೆ ಸೇರಿದೊಡನೆ ಪ್ರೀತಿ ಉಕ್ಕಿ ಬರುತ್ತದೆ. ಪರಸ್ಪರ ಅಪ್ಪಿಕೊಂಡು ಕಣ್ಣೀರು ಹಾಕುತ್ತಾರೆ. ಬಾರ್‌ಗಳಿಂದ ಜಾತಿ ವ್ಯವಸ್ಥೆ ತೊಲಗಿರಬಹುದು ಆದರೆ ಸಮಾಜದಿಂದಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ‘ರಮೇಶ್‌ ಅವರು ಬಟಾಬಯಲು ಕವನ ಸಂಕಲನದ ಮೂಲಕ ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಅವರು ಅನೇಕ ನುಡಿಗಟ್ಟುಗಳ ಮೂಲಕ ತಮ್ಮ ಬದುಕಿನ ಸಾರ್ಥಕತೆಯನ್ನು ಈ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ’ ಎಂದರು.

ಕೃತಿಯ ಕುರಿತು ಮಾತನಾಡಿದ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ‘ಹುಟ್ಟಿನಿಂದಲೇ ಅಂಧರಾಗಿರುವ ರಮೇಶ್‌ ಅವರು ಅಂದವಾದ ಕವಿತೆಗಳನ್ನು ಬರೆದಿದ್ದಾರೆ. ಕವಿತೆಯು ಮನುಕುಲದ ಬಿಡುಗಡೆಯ ಅಸ್ತ್ರ ಎಂಬುದನ್ನು ಪ್ರತಿಪಾದಿಸಿದ್ದಾರೆ. ಭರತ, ಯುದಿಷ್ಠಿರ ಸೇರಿದಂತೆ ಅನೇಕ ಪುರಾಣ ಪಾತ್ರಗಳ ಕುರಿತೂ ಅವರು ಕವಿತೆಗಳನ್ನು ರಚಿಸಿದ್ದಾರೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಾಯಕ ಜನಾರ್ಧನ್‌ (ಜನ್ನಿ) ಅವರಿಗೆ ಗಾನಯೋಗಿ ಪುಟ್ಟರಾಜ ಗವಾಯಿ ಸಂಗೀತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಅಂಧರ ವಿಮೋಚನಾ ವೇದಿಕೆಯ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಗವಾರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು