ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಿನ ಮೇಲ್ಸೇತು: ಆರೋಪದಲ್ಲಿ ಹುರುಳಿಲ್ಲ ಲೋಕಾಯುಕ್ತ ವರದಿ

Last Updated 18 ಜನವರಿ 2020, 22:15 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ, ನಗರದ ಬಸವೇಶ್ವರ ವೃತ್ತ-ಹೆಬ್ಬಾಳ ನಡುವೆ ಉಕ್ಕಿನ ಷಟ್ಪಥ ಮೇಲ್ಸೇತುವೆ ನಿರ್ಮಾಣ ಯೋಜನೆ ಕೈಗೊಳ್ಳುವಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದುರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್‌ ಸಲ್ಲಿಸಿರುವ ದೂರಿನಲ್ಲಿ ಯಾವುದೇ ಹುರುಳಿಲ್ಲ’ ಎಂದು ಲೋಕಾಯುಕ್ತ ಹೇಳಿದೆ.

‘ಪ್ರಕರಣದಲ್ಲಿ ಹುರುಳಿಲ್ಲ’ ಎಂಬ ಸಹಾಯಕ ರಿಜಿಸ್ಟ್ರಾರ್‌ ಅವರ ವಿಚಾರಣಾ ವರದಿಗೆ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರು ಒಪ್ಪಿಗೆ ನೀಡಿ ದೂರನ್ನು ಕಳೆದ ತಿಂಗಳ 31ರಂದು ವಿಲೇವಾರಿ ಮಾಡಿದ್ದಾರೆ.

‘ಮುಖ್ಯಮಂತ್ರಿ ಸ್ಥಾನದಲ್ಲಿದ್ದಂತವರ ವಿರುದ್ಧ ಆರೋಪ ಮಾಡುವಾಗ ಸಕ್ಷಮ ಪ್ರಾಧಿಕಾರಗಳಿಗೆ ಸರಿಯಾದ ಸಾಕ್ಷ್ಯಾಧಾರ ಒದಗಿಸಬೇಕು. ಕೇವಲ ಊಹೆಯ ಮೇಲೆ ದೂರು ನೀಡಿದರೆ ಅದು ರಾಜಕೀಯ ವ್ಯವಸ್ಥೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ‘ ಎಂದು ಇ.ಪಿ.ರಾಯಪ್ಪ ಪ್ರಕರಣದಲ್ಲಿ ವಿವರಿಸಿರುವ ಸಂಗತಿಯನ್ನು ಲೋಕಾಯುಕ್ತರ ವರದಿ ಉಲ್ಲೇಖಿಸಿದೆ.

ಪ್ರಕರಣವೇನು?: ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ಸೇತುವರೆಗೆ ಉಕ್ಕಿನ ಷಟ್ಪಥ ಮೇಲ್ಸೇತುವೆ ನಿರ್ಮಾಣ ಯೋಜನೆಗೆ ನಿರ್ಧರಿಸಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು 2016ರ ಅಕ್ಟೋಬರ್ 13ರಂದು ಆದೇಶ ಹೊರಡಿಸಿತ್ತು. ಈ ಯೋಜನೆಗೆ ₹ 1,800 ಕೋಟಿ ವ್ಯಯಿಸಲು ಉದ್ದೇಶಿಸಲಾಗಿತ್ತು. ಆದರೆ, ಯೋಜನೆ ಪ್ರಶ್ನಿಸಿ ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಲೋಕಾಯುಕ್ತಕ್ಕೆ ದೂರು ಸಲ್ಲಿಸಿತ್ತು.

ಏತನ್ಮಧ್ಯೆ, ಈ ಪ್ರಕರಣ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಮೆಟ್ಟಿಲೇರಿತ್ತು. ‘ಪರಿಸರ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಇಲಾಖೆ ಸೇರಿದಂತೆ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯದೇ ಕಾಮಗಾರಿ ನಡೆಸುವಂತಿಲ್ಲ’ ಎಂದು ನ್ಯಾಯಮಂಡಳಿ 2017ರ ಮಾರ್ಚ್‌ನಲ್ಲಿ ಆದೇಶಿಸಿತ್ತು. ಇದರಿಂದ ಸರ್ಕಾರವು ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

‘ನಮಗೆ ಬಹುದೊಡ್ಡ ವಿಜಯ’
ಲೋಕಾಯುಕ್ತರ ಆದೇಶಕ್ಕೆ ಸಂಬಂಧಿಸಿದಂತೆ ಶನಿವಾರ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ‘ಮತದಾರರನ್ನು ಓಲೈಸಲು ಬಿಜೆಪಿ ನಾಯಕರು ಮಾಡಿದ ಹಲವು ಆರೋಪಗಳಲ್ಲಿ ಉಕ್ಕಿನ ಮೇಲ್ಸೇತುವೆ ಆರೋಪವೂ ಒಂದಾಗಿತ್ತು. ಅವರ ಆರೋಪಗಳನ್ನು ನಾವು ಮುಕ್ತವಾಗಿ ಎದುರಿಸಿದ್ದೇವೆ. ಸಾರ್ವಜನಿಕರನ್ನು ದಿಕ್ಕುತಪ್ಪಿಸಲು ಹೋದ ನಾಯಕರ ಆರೋಪಗಳಲ್ಲಿ ಹುರುಳಿಲ್ಲ ಎಂಬುದು ಈಗಲಾದರೂ ಜನಕ್ಕೆ ಗೊತ್ತಾಗಿದೆ’ ಎಂದಿದ್ದಾರೆ.

‘ಯೋಜನೆಯಲ್ಲಿ ಭ್ರಷ್ಟಾಚಾರದ ಯಾವುದೇ ಉದ್ದೇಶ ಇರಲಿಲ್ಲ ಎಂಬುದು ಈಗಲಾದರೂ ಸಾರ್ವಜನಿಕರಿಗೆ ಗೊತ್ತಾಗಿದೆ. ಪ್ರಕರಣ ವಿಲೇವಾರಿ ಮಾಡಿರುವ ಲೋಕಾಯುಕ್ತರ ನಡೆ ನಮಗೆ ಬಹುದೊಡ್ಡ ವಿಜಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT