ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕೆ ಬಂದರೆ ಕೃಷಿ ಕಾಯ್ದೆ ತಿದ್ದುಪಡಿ ರದ್ದು: ಸಿದ್ದರಾಮಯ್ಯ ಭರವಸೆ

ಜನ ಪರ್ಯಾಯ ಬಜೆಟ್ ಅಧಿವೇಶನ
Last Updated 23 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಗೆ ತಂದಿರುವ ರೈತ ವಿರೋಧಿ ತಿದ್ದುಪಡಿಗಳು, ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸಲಾಗುವುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಸಂಯುಕ್ತ ಹೋರಾಟ –ಕರ್ನಾಟಕ ನಗರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಜನ ಪರ್ಯಾಯ ಬಜೆಟ್ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉಳುವವನೇ ನೆಲದ ಒಡೆಯನಾಗಬೇಕು ಎಂಬ ಉದ್ದೇಶದಿಂದ ಭೂಸುಧಾರಣಾ ಕಾಯ್ದೆ ಜಾರಿಗೆ ತರಲಾಗಿತ್ತು. ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ‘ಉಳ್ಳವನೇ ನೆಲದೊಡೆಯ’ ಎಂಬಂತಾಗಿದೆ. ಸುಪ್ರೀಂ ಕೋರ್ಟ್‌ನ ಆದೇಶವನ್ನೇ ನೆಪ ಮಾಡಿಕೊಂಡು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂಪರಭಾರೆ ನಿಷೇಧ ಕಾಯ್ದೆಯ(ಪಿಟಿಸಿಎಲ್‌) ಉದ್ದೇಶವನ್ನೇ ಬುಡಮೇಲು ಮಾಡಲಾಗುತ್ತಿದೆ. ಕೃಷಿಕರು ಮತ್ತು ದಲಿತರು ಭೂರಹಿತರಾಗಿ ಮತ್ತೆ ಕೃಷಿ ಕಾರ್ಮಿಕರಾಗುತ್ತಿದ್ದಾರೆ’ ಎಂದರು.

‘ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ಕೃಷಿಗೆ ಯೋಗ್ಯವಲ್ಲದ ಜಾನುವಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗದಂತೆ ಮಾಡಲಾಗಿದೆ. ದನದ ಮಾಂಸ ತಿನ್ನಬಹುದು ಮತ್ತು ಹೊರದೇಶಗಳಿಗೆ ರಫ್ತು ಮಾಡಬಹುದು. ಆದರೆ, ಹತ್ಯೆ ಮಾಡುವಂತಿಲ್ಲ ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಬಿಜೆಪಿಯವರು ತೋರಿಕೆಗೆ ಗೋಪೂಜೆ ಮಾಡುತ್ತಿದ್ದಾರೆ. ದನ, ಕುರಿಗಳನ್ನು ಸಾಕಾಣಿಕೆ ಮಾಡುತ್ತಿದ್ದ ನಾವು ಹಬ್ಬದ ದಿನಗಳಲ್ಲಿ ಅವುಗಳ ಪೂಜೆ ಮಾಡಿಕೊಂಡು ಬಂದಿದ್ದೇವೆ. ಜಾನುವಾರುಗಳ ಸಗಣಿಯನ್ನು ಎಂದೂ ಬಾಚದ, ಅವುಗಳ ಪಾಲನೆ ಮಾಡದ ಗಿರಾಕಿಗಳು ಗೋಪೂಜೆ ಬಗ್ಗೆ ನಮಗೆ ಪಾಠ ಹೇಳಿಕೊಡಲು ಹೊರಟಿದ್ದಾರೆ’ ಎಂದು ಲೇವಡಿ ಮಾಡಿದರು.

‘ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಮೇಲೆ ಸೆಸ್‌ ಸಂಗ್ರಹ ಸಂಪೂರ್ಣ ಕಡಿಮೆಯಾಗಿದೆ. ಎಪಿಎಂಸಿ ಸಿಬ್ಬಂದಿಗೆ ಸಂಬಳವೇ ಸಿಗದಂತಾಗಿದೆ. ಈ ಎಲ್ಲ ಅವಾಂತರಗಳನ್ನು ಸೃಷ್ಟಿಸಿರುವ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂಬ ಸಂಯುಕ್ತ ಹೋರಾಟ– ಕರ್ನಾಟಕದ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಅಧಿಕಾರಕ್ಕೆ ಬಂದ ಕೂಡಲೇ ಅವುಗಳನ್ನು ರದ್ದುಪಡಿಸಲಾಗುವುದು. ಮುಂದಿನ ದಿನಗಳಲ್ಲಿ ನೀವು ನಮ್ಮ ಬೆಂಬಲಕ್ಕೆ ನಿಲ್ಲಬೇಕು’ ಎಂದರು.

‘ಘೇಂಡಾಮೃಗಕ್ಕಿಂತ ದಪ್ಪ ಚರ್ಮದ ಸರ್ಕಾರ’
‘ರಾಜ್ಯದಲ್ಲಿರುವುದು ಕೇವಲ ದಪ್ಪ ಚರ್ಮದ ಸರ್ಕಾರ ಅಲ್ಲ, ಘೇಂಡಾಮೃಗಕ್ಕಿಂತ ದಪ್ಪವಾದ ಚರ್ಮದ ಸರ್ಕಾರ’ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ವಸತಿ ಸಚಿವ ವಿ. ಸೋಮಣ್ಣಗೆ ಜನಪ್ರತಿನಿಧಿಗಳ ನ್ಯಾಯಾಲಯ ಸಮನ್ಸ್ ನೀಡಿದೆ. ರಾಜೀನಾಮೆ ನೀಡಿ ತನಿಖೆ ಎದುರಿಸಿ ಎಂದರೆ, ರಾಜೀನಾಮೆ ಕೊಡಿಸುವುದಿಲ್ಲ ಎಂದು ಮುಖ್ಯಮಂತ್ರಿಯೇ ಹೇಳುತ್ತಾರೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ. ಜಾರ್ಜ್ ವಿರುದ್ಧ ಆರೋಪ ಬಂದ ಕೂಡಲೇ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದೆ. ಈ ರೀತಿಯ ನೈತಿಕತೆ ಬಿಜೆಪಿಯವರಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಸೂಕ್ಷ್ಮತೆ ಇಲ್ಲದ ರಾಜಕಾರಣಿಗಳ ನಡುವೆ ನಾವು ಸಿಕ್ಕಿಕೊಂಡಿದ್ದೇವೆ’ ಎಂದರು.

21 ನಿರ್ಣಯ ಅಂಗೀಕಾರ
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದು, ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದು, ಭೂಸುಧಾರಣಾ ಕಾಯ್ದೆ ತಿದ್ದುಪಡಿ ರದ್ದು ಸೇರಿ 21 ನಿರ್ಣಯಗಳನ್ನು ಅಧಿವೇಶನದಲ್ಲಿ ಅಂಗೀಕರಿಸಲಾಯಿತು.

‘ಸರ್ಕಾರ ಕೂಡಲೇ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯದಿದ್ದರೆ ದೆಹಲಿ ಮಾದರಿಯ ಅನಿರ್ದಿಷ್ಟಾವಧಿ ಹೋರಾಟ ರೂಪಿಸಲಾಗುವುದು. ನಮ್ಮ ಈ ಅಧಿವೇಶನಕ್ಕೆ ಬರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಆಹ್ವಾನ ನೀಡಲಾಗಿತ್ತು. ರೈತರು ಮತ್ತು ದಲಿತರು ಎತ್ತುವ ಪ್ರಶ್ನೆಗಳಿಗೆ ಉತ್ತರಿಸುವ ತಾಕತ್ತಿಲ್ಲದ ಕಾರಣಕ್ಕೇ ಅವರು ಬಂದಿಲ್ಲ’ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT