ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ನೀಡುವ ಮುನ್ನ ಎಚ್ಚರ: ಸಿಮ್ ಕಾರ್ಡ್‌ ಕದ್ದು ₹ 3.45 ಲಕ್ಷ ವಂಚನೆ

Last Updated 9 ಆಗಸ್ಟ್ 2022, 1:17 IST
ಅಕ್ಷರ ಗಾತ್ರ

ಬೆಂಗಳೂರು: ಪರಿಚಯಸ್ಥರ ಸಿಮ್‌ಕಾರ್ಡ್ ಕದ್ದು, ಅದರ ಮೂಲಕ ಬ್ಯಾಂಕ್ ಖಾತೆ ವಹಿವಾಟು ನಡೆಸಿ ₹ 3.45 ಲಕ್ಷ ಡ್ರಾ ಮಾಡಿಕೊಂಡು ವಂಚಿಸಿದ್ದ ಆರೋಪದಡಿ ಜಿ.ಬಿ. ಪ್ರಕಾಶ್ (31) ಎಂಬುವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮಂಡ್ಯ ಜಿಲ್ಲೆಯ ದುದ್ದ ಹೋಬಳಿಯ ಗುನ್ನ ನಾಯಕನಹಳ್ಳಿ ನಿವಾಸಿ ಪ್ರಕಾಶ್, ಮೇ 8ರಿಂದ 14ರ ಅವಧಿಯಲ್ಲಿ ಅಕ್ರಮವಾಗಿ ಹಣ ಡ್ರಾ ಮಾಡಿಕೊಂಡಿದ್ದ. ಠಾಣೆ ವ್ಯಾಪ್ತಿ ನಿವಾಸಿಯೊಬ್ಬರು ನೀಡಿದ್ದ ಆರೋಪದಡಿ ಪ್ರಕಾಶ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯಲ್ಲಿ ಖಾತೆ ಹೊಂದಿರುವ ದೂರುದಾರ, ಖಾತೆಗೆ ತಮ್ಮ ಮೊಬೈಲ್ ಸಂಖ್ಯೆ ಜೋಡಿಸಿದ್ದರು. ಅದೇ ಸಂಖ್ಯೆ ಮೂಲಕ ಹಣದ ವಹಿವಾಟು ನಡೆಸುತ್ತಿದ್ದರು. ಇದನ್ನು ತಿಳಿದಿದ್ದ ಆರೋಪಿ, ಸಂಚು ರೂಪಿಸಿ ಖಾತೆಯಿಂದ ಹಣ ದೋಚಿದ್ದ’ ಎಂದು ತಿಳಿಸಿದರು.

ಕರೆ ಮಾಡುವ ಸೋಗಿನಲ್ಲಿ ಕಳ್ಳತನ: ‘ಸಂಬಂಧಿಕರಿಗೆ ಕರೆ ಮಾಡಬೇಕೆಂದು ದೂರುದಾರರಿಂದ ಮೊಬೈಲ್ ಪಡೆದಿದ್ದ ಆರೋಪಿ ಪ್ರಕಾಶ್, ಅದರ ಸಿಮ್ ಕಾರ್ಡ್ ಕದ್ದಿದ್ದರು. ನಂತರ, ಬೇರೊಂದು ಸಿಮ್ ಕಾರ್ಡ್ ಹಾಕಿ ಮೊಬೈಲ್ ವಾಪಸು ಕೊಟ್ಟಿದ್ದರು. ಕಾರ್ಡ್ ಕಳ್ಳತನವಾದ ಸಂಗತಿ ದೂರುದಾರರಿಗೆ ಗೊತ್ತಾಗಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ಕದ್ದ ಸಿಮ್‌ಕಾರ್ಡ್ ಬೇರೊಂದು ಮೊಬೈಲ್‌ಗೆ ಹಾಕಿದ್ದ ಆರೋಪಿ, ದೂರುದಾರರ ಖಾತೆ ವ್ಯವಹಾರ ನಡೆಸಿದ್ದ. ಒನ್‌ ಟೈಂ ಪಾಸ್‌ವರ್ಡ್ (ಒಟಿಪಿ) ಸಹ ಅದೇ ಮೊಬೈಲ್‌ಗೆ ಬಂದಿದ್ದು. ಅದನ್ನು ದಾಖಲಿಸಿ ₹ 3.45 ಲಕ್ಷ ಡ್ರಾ ಮಾಡಿಕೊಂಡಿದ್ದ’ ಎಂದೂ ತಿಳಿಸಿದರು.

ದ್ವಿಚಕ್ರ ವಾಹನ ಖರೀದಿ: ‘ವಂಚನೆಯಿಂದ ಬಂದ ಹಣದಲ್ಲೇ ಆರೋಪಿ, ದ್ವಿಚಕ್ರ ವಾಹನ ಖರೀದಿಸಿದ್ದ. ₹ 1.30 ಲಕ್ಷ ತನ್ನ ಖಾತೆಯಲ್ಲೇ ಇಟ್ಟುಕೊಂಡಿದ್ದ. ಆರೋಪಿಯನ್ನು ಬಂಧಿಸುತ್ತಿದ್ದಂತೆ ದ್ವಿಚಕ್ರ ವಾಹನ, ಬೈಕ್ ಹಾಗೂ ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ. ಖಾತೆ ವಹಿವಾಟು ಸ್ಥಗಿತಗೊಳಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT