ಬುಧವಾರ, ಜನವರಿ 27, 2021
28 °C
ಜಿಕೆವಿಕೆ ಪ್ರಾಂಗಣದಲ್ಲಿ ನ.6ರಿಂದ 8ರವರೆಗೆ ಮೇಳ l ಬರುವವರಿಗೆ ಬಸ್‌ ಸೌಲಭ್ಯ

ಸರಳ ಕೃಷಿ ಮೇಳಕ್ಕೆ ಸಜ್ಜಾದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಕಾರಣದಿಂದಾಗಿ ಕೃಷಿ ಮೇಳ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲಕ್ಕೆ ತೆರೆಬಿದ್ದಿದ್ದು ದಿನಾಂಕ ನಿಗದಿಯಾಗಿದೆ.

ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನವೆಂಬರ್ 6ರಿಂದ 8ರವರೆಗೆ ಈ ಬಾರಿ ಸರಳ ಕೃಷಿ ಮೇಳಕ್ಕೆ ಎಲ್ಲ ತಯಾರಿ ನಡೆದಿದೆ.

ರೈತರಿಗೆ ಕೃಷಿ ತಂತ್ರಜ್ಞಾನಗಳನ್ನು ಸಕಾಲದಲ್ಲಿ ತಲುಪಿಸುವ ಉದ್ದೇಶದಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಜಿಕೆವಿಕೆ ಆವರಣದಲ್ಲಿ ಪ್ರತಿ ವರ್ಷ ಕೃಷಿ ಮೇಳ ಆಯೋಜಿಸುತ್ತಿದೆ. ಆದರೆ, ಈ ಬಾರಿ ಮೇಳ ಆಯೋಜಿಸುವುದೋ, ಬೇಡವೋ ಎಂಬ ಗೊಂದಲದಲ್ಲಿ ವಿಶ್ವವಿದ್ಯಾಲಯ ಸಿಲುಕಿತ್ತು.

'ಕೊರೊನಾ ನಿಯಂತ್ರಣಕ್ಕೆ ಬರುವ ನಿರೀಕ್ಷೆಯಿಂದ ಕೃಷಿ ಮೇಳಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಆದರೆ, ಮೇಳ ನಡೆಸುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಂಡಿರಲಿಲ್ಲ. ಈಗ ಮೇಳಕ್ಕೆ ಸಜ್ಜಾಗುವಂತೆ ಸರ್ಕಾರ ಸೂಚಿಸಿರುವುದರಿಂದ ತಯಾರಿಗಳು ನಡೆಯುತ್ತಿವೆ' ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ರಾಜೇಂದ್ರ ಪ್ರಸಾದ್ 'ಪ್ರಜಾವಾಣಿ'ಗೆ ತಿಳಿಸಿದರು.

'ಮೇಳ ನಡೆಸಲು ಕನಿಷ್ಠ ಆರು ತಿಂಗಳಿನಿಂದಲೇ ಸಿದ್ಧತೆಗಳು ನಡೆಯುತ್ತವೆ. ರೈತರ ವೀಕ್ಷಣೆಗೆ ಅನುಕೂಲವಾಗುವಂತೆ ಬೆಳೆಗಳ ಪ್ರಾತ್ಯಕ್ಷಿಕೆಗಳನ್ನು ಮೇ-ಜೂನ್‍ನಿಂದಲೇ ಸಿದ್ಧಪಡಿಸಲಾಗಿದೆ. ಈ ಬಾರಿ ಸರಳವಾಗಿ ಕೃಷಿ ಮೇಳ ಆಯೋಜಿಸಲು ನಿರ್ಧರಿಸಿದ್ದೇವೆ. ಮೇಳಕ್ಕೆ ಹೆಚ್ಚಿನ ಜನ ಸೇರದಂತೆ ಹಾಗೂ ಕೊರೊನಾ ಸೋಂಕು ಹರಡದಂತೆ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು' ಎಂದು ವಿವರಿಸಿದರು.

'ಈ ವರ್ಷ ಮೂರು ನೂತನ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ರೈತರಿಗೆ ಆಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸಲು ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗುವುದು. ಇದಕ್ಕಾಗಿ ಕೃಷಿ ವಿಶ್ವವಿದ್ಯಾಲಯದ 50 ಮಳಿಗೆಗಳು ಇರಲಿದ್ದು, ಈ ಸಲ ಖಾಸಗಿ ಮಳಿಗೆಗಳಿಗೆ ಅವಕಾಶ ನೀಡುವುದಿಲ್ಲ' ಎಂದರು.

ಆನ್‍ಲೈನ್ ಮೂಲಕವೂ ಮೇಳ ವೀಕ್ಷಣೆ: 'ಮೇಳದಲ್ಲಿ ಜನಸಂದಣಿಯಾಗದಂತೆ ತಡೆಯುವ ಉದ್ದೇಶದಿಂದ ಆನ್‍ಲೈನ್ ಮೂಲಕ ಮನೆಯಿಂದಲೇ ಕೃಷಿ ಮೇಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು. ವಿಶ್ವವಿದ್ಯಾಲಯದ ಯುಟ್ಯೂಬ್ ವಾಹಿನಿ ಮತ್ತು ಇನ್ನಿತರ ತಂತ್ರಜ್ಞಾನಗಳ ಸಹಾಯದಿಂದ ಮೇಳ ವೀಕ್ಷಿಸಬಹುದು. ಶೀಘ್ರವೇ ಅವುಗಳ ಲಿಂಕ್ ಹಾಗೂ ವಿವರ ಸಾರ್ವಜನಿಕರಿಗೆ ತಲುಪಿಸುತ್ತೇವೆ' ಎಂದು ಮಾಹಿತಿ ನೀಡಿದರು. 

ನೂತನ ತಳಿಗಳು: 

*ನೆಲಗಡಲೆ

*ಅಲಸಂದೆ

*ಮೇವಿನ ಅಲಸಂದೆ

ಮಕ್ಕಳಿಗಿಲ್ಲ ಪ್ರವೇಶ: 'ಕಳೆದ ಬಾರಿ 15 ಲಕ್ಷಕ್ಕೂ ಹೆಚ್ಚು ಮಂದಿ ಕೃಷಿ ಮೇಳಕ್ಕೆ ಭೇಟಿ ನೀಡಿದ್ದರು. ಈ ಬಾರಿ ಜನಸಂದಣಿಯಾಗದಂತೆ ಎಚ್ಚರವಹಿಸುವುದು ನಮ್ಮ ಕರ್ತವ್ಯ. ಕೊರೊನಾ ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ಮಕ್ಕಳು ಹಾಗೂ 60 ಮೇಲ್ಪಟ್ಟವರಿಗೆ ಮೇಳಕ್ಕೆ ಪ್ರವೇಶ ನಿರಾಕರಿಸಲಾಗಿದ್ದು, ವಯಸ್ಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ' ಎಂದು ರಾಜೇಂದ್ರ ಪ್ರಸಾದ್ ತಿಳಿಸಿದರು.

ಮೇಳಕ್ಕೆ ಬರುವವರಿಗೆ ಸವಲತ್ತುಗಳು

* ಜಿಕೆವಿಕೆ ಪ್ರವೇಶದ್ವಾರದಿಂದ ಉಚಿತ ಬಸ್ ವ್ಯವಸ್ಥೆ

* ರಿಯಾಯಿತಿ ದರದಲ್ಲಿ ಲಘು ಊಟ

* ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ

* ಉಚಿತ ಪ್ರವೇಶ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು