ಸೋಮವಾರ, ಆಗಸ್ಟ್ 8, 2022
22 °C
‘ಸಾರ್ವಜನಿಕ ಚರ್ಚೆಗೆ ಮೂರು ತಿಂಗಳು ಅವಕಾಶ ನೀಡಿ’

ಸಿಂಗನಾಯಕನಹಳ್ಳಿ ಕೆರೆ ಪುನರುಜ್ಜೀವನ– 6,316 ಮರಗಳ ತೆರವಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಹೊರವಲಯದ ಸಿಂಗನಾಯಕನಹಳ್ಳಿ ಕೆರೆಯ ಪುನರುಜ್ಜೀವನ ಕಾರ್ಯಕ್ಕೆ 6,316 ಮರಗಳನ್ನು ತೆರವುಗೊಳಿಸುವುದಕ್ಕೆ ಅನುಮತಿ ನೀಡುವ ಕುರಿತು ಅರಣ್ಯ ಇಲಾಖೆ ಯಾವುದೇ ನಿರ್ಧಾರ ಕೈಗೊಳ್ಳಬಾರದು. ಕೋವಿಡ್‌ ಸೋಂಕು ಈಗಲೂ ಇರುವುದರಿಂದ ಮರಗಳ ತೆರವಿನ ಕುರಿತ ಚರ್ಚೆಗೆ ಕನಿಷ್ಠ 3 ತಿಂಗಳು ಕಾಲಾವಕಾಶ ನೀಡಬೇಕು ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ ಒತ್ತಾಯಿಸಿದೆ.

ಈ ಕುರಿತು ರಾಜ್ಯ ಸರ್ಕಾರದ ಅರಣ್ಯ, ಜೀವಿವಿಜ್ಞಾನ ಮತ್ತು ಪರಿಸರ ಇಲಾಖೆಯ ಕಾರ್ಯದರ್ಶಿ ಬೃಜೇಶ್‌ ಕುಮಾರ್‌ ಅವರಿಗೆ ಪ್ರತಿಷ್ಠಾನವು ಮನವಿ ಸಲ್ಲಿಸಿತು.

‘ಕೆರೆ ಅಭಿವೃದ್ಧಿಗೆ 6,316 ಮರ ಕಡಿಯುವುದರ ಕುರಿತು ಸಮಗ್ರ ಅಧ್ಯಯನ ನಡೆಸುವುದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಈ ಕೆರೆ ಪುನರುಜ್ಜೀವನ ಯೋಜನೆ ಬಗ್ಗೆ ತಜ್ಞರಿಂದ ತಾಂತ್ರಿಕ ವರದಿಯನ್ನೂ ಪಡೆಬೇಕಾದ ಅಗತ್ಯವಿದೆ’ ಎಂದು ಪ್ರತಿಷ್ಠಾನವು ಮನವಿಯಲ್ಲಿ ತಿಳಿಸಿದೆ.

‘ಪ್ರತಿಷ್ಠಾನವಾಗಲೀ ಅಥವಾ ನಮ್ಮ ಕೋರಿಕೆಯನ್ನು ಬೆಂಬಲಿಸುತ್ತಿರುವ ಪರಿಸರ ಕಾರ್ಯಕರ್ತರಾಗಲೀ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ, ಯೋಜನೆಗಾಗಿ ಇಷ್ಟೊಂದು ಸಂಖ್ಯೆಯಲ್ಲಿ ಮರಗಳನ್ನು ಬಲಿ ಕೊಡಬಾರದು ಎಂಬುದಷ್ಟೇ ನಮ್ಮ ಕಳಕಳಿ. 6,316 ಮರಗಳನ್ನು ಕಡಿದು, ಸಹಜವಾಗಿ ಅಭಿವೃದ್ಧಿಗೊಂಡ ವನ್ಯಜೀವಿ ಆವಾಸ ಸ್ಥಾನವನ್ನು ನಾಶ ಮಾಡಿ ಕೆರೆಯನ್ನು ಪುನರುಜ್ಜೀವನ ನಡೆಸುವ ಅನಿವಾರ್ಯ ನಿಜ್ಕೂ ಇದೆಯೇ ಎಂಬುದನ್ನು ಸಮಗ್ರವಾಗಿ ಮರುಪರಿಶೀಲನೆಗೆ ಒಳಪಡಿಸಬೇಕು. ಈ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಬೇಕು ಎಂಬುದು ನಮ್ಮ ಒತ್ತಾಯ’ ಎಂದು ಪ್ರತಿಷ್ಠಾನದ ಪ್ರಧಾನ ವ್ಯವಸ್ಥಾಪಕ ವಿನೋದ್‌ ಜೇಕಬ್‌ ತಿಳಿಸಿದರು.

‘ನಗರವು ಕಾಂಕ್ರಿಟೀಕರಣಗೊಳ್ಳುತ್ತಿರುವ ವೇಗಕ್ಕೆ ಇಲ್ಲಿನ ನಿವಾಸಿಗಳು ಕಂಗಾಲಾಗಿದ್ದಾರೆ. ಈ ಹಂತದಲ್ಲಿ ಮತ್ತೆ ಸಾವಿರಾರು  ಮರಗಳನ್ನು ಕಳೆದುಕೊಂಡರೆ ಅದು ಇನ್ನೊಂದು ಪರಿಸರ ದುರಂತಕ್ಕೆ ಕಾರಣವಾಗಲಿದೆ. ಕೆರೆ ಪ್ರದೇಶದ ಪರಿಸರ ವ್ಯವಸ್ಥೆಯು ಆಸುಪಾಸಿನ ಗ್ರಾಮಗಳ ಅನೇಕ ತಲೆಮಾರುಗಳನ್ನು ಪೊರೆಯುತ್ತಾ ಬಂದಿದೆ. ಅಲ್ಲಿನ ಮರಗಳು ಕೆರೆಯ ಜಲಾನಯನ ಪ್ರದೇಶವನ್ನೂ ಸಂರಕ್ಷಿಸುತ್ತಾ ಬಂದಿವೆ. ದಶಕಗಳಿಂದ ಈ ಪರಿಸರದಲ್ಲಿ ಅಂತರ್ಜಲ ಮರುಪೂರಣಕ್ಕೆ ಕೊಡುಗೆ ನೀಡುತ್ತಾ ಬಂದಿವೆ’ ಎಂದು ಅವರು ನೆನಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು