ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಪಥಗಳ ವೈಟ್‌ಟಾಪಿಂಗ್‌

ಇಂದಿರಾನಗರ 100 ಅಡಿ ರಸ್ತೆ: ಕಾಮಗಾರಿ ಪರಿಷ್ಕರಣೆಗೆ ಆಡಳಿತಾಧಿಕಾರಿ ಸಲಹೆ
Last Updated 28 ಅಕ್ಟೋಬರ್ 2020, 19:58 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಸುಮಾರು 2.60 ಕಿ.ಮೀ ಉದ್ದದ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯ ಟೆಂಡರ್ ಅನುಮೋದನೆಗೆ ಬಿಬಿಎಂಪಿಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ರಸ್ತೆಯಲ್ಲಿ ನಾಲ್ಕು ಪಥಗಳ ವೈಟ್‌ಟಾಪಿಂಗ್ ಅಳವಡಿಸಲು ಉದ್ದೇಶಿಸಲಾಗಿದೆ. ಅದರ ಬದಲು ಕಾಮಗಾರಿಯ ವಿನ್ಯಾಸವನ್ನು ಆರು ಪಥಗಳನ್ನಾಗಿ ಪರಿಷ್ಕರಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ ಸಲಹೆ ನೀಡಿದರು.

ಪೂರ್ವ ವಲಯದ ವಿವಿಧ ಕಾಮಗಾರಿಗಳನ್ನು ಅವರು ಬುಧವಾರ ಪರಿಶೀಲಿಸಿದರು.

100 ಅಡಿ ರಸ್ತೆಯಲ್ಲಿ ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗವು ಮೋಟಾರುರಹಿತ ಸಾರಿಗೆ ವ್ಯವಸ್ಥೆಯಡಿ ಬೈಸಿಕಲ್ ಪಥ ಅಳವಡಿಸಲಿದೆ. ನಗರ ಭೂಸಾರಿಗೆ ನಿರ್ದೇಶನಾಲಯದ (ಡಲ್ಟ್‌) ಅಧಿಕಾರಿಗಳ ಜೊತೆ ಸಮಾಲೋಚಿಸಿ ಇದರ ವಿನ್ಯಾಸವನ್ನು ವಿನ್ಯಾಸ ಅಂತಿಮಗೊಳಿಸಬೇಕು. ಈ ವಿನ್ಯಾಸವು ವೈಟ್‌ಟಾಪಿಂಗ್ ಯೋಜನೆಯ ವಿನ್ಯಾಸದೊಂದಿಗೆ ಹೊಂದಿಕೆ ಆಗಬೇಕು. ಆ ಬಳಿಕವೇ ಕಾಮಗಾರಿ ಆರಂಭಿಸಬೇಕು ಎಂದು ಆಡಳಿತಾಧಿಕಾರಿ ಸೂಚನೆ
ನೀಡಿದರು.

ಇಂದಿರಾನಗರ 80 ಅಡಿ ರಸ್ತೆಯಲ್ಲಿ ಕೈಗೊಂಡ ಸುಮಾರು 1.87 ಕಿ.ಮೀ. ಉದ್ದದ ವೈಟ್‌ಟಾಪಿಂಗ್ ಕಾಮಗಾರಿ ಆಡಳಿತಾಧಿಕಾರಿ ಪರಿಶೀಲಿಸಿದರು.

ಇಲ್ಲಿ ವೈಟ್‌ಟಾಪಿಂಗ್‌ ಪೂರ್ಣಗೊಂಡು ಪಾದಚಾರಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಪಾದಚಾರಿ ಮಾರ್ಗದಲ್ಲಿ ಈಗಲೂ ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳು ಹಾಗೆಯೇ ಇವೆ.

‘ಮುಖ್ಯ ಎಂಜಿನಿಯರ್‌ ಯೋಜನೆ (ಕೇಂದ್ರ) ಮತ್ತು ಬೆಸ್ಕಾಂನ ತಾಂತ್ರಿಕ ನಿರ್ದೇಶಕರು ಜಂಟಿ ತಪಾಸಣೆ ನಡೆಸಿ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ ನೆಲದಡಿಯಲ್ಲಿ ವಿದ್ಯುತ್‌ ಕೇಬಲ್‌ಗಳನ್ನು ಅಳವಡಿಸಬೇಕು‘ ಎಂದು ಆಡಳಿತಾಧಿಕಾರಿ ಸೂಚಿಸಿದರು.

ಕೋರಮಂಗಲ 80 ಅಡಿ ರಸ್ತೆಯ ತಪಾಸಣೆ: ಕೋರಮಂಗಲ 80 ಅಡಿ ರಸ್ತೆಯಲ್ಲಿ ಬೃಹತ್ ಮಳೆನೀರುಗಾಲುವೆ ಹಾದುಹೋಗಿದ್ದು, ಮಳೆ ಬಂದಾಗ ಸಾಕಷ್ಟು ಸಮಸ್ಯೆಯಾಗುತ್ತಿರುವುದಾಗಿಕೋರಮಂಗಲ 4ನೇ ಬ್ಲಾಕ್ ನಿವಾಸಿಗಳ ಸಂಘದ ಪದಾಧಿಕಾರಿಗಳು ಆಡಳಿತಾಧಿಕಾರಿಗೆ ದೂರು ನೀಡಿದ್ದರು. ಆಡಳಿತಾಧಿಕಾರಿ ಸ್ಥಳ ಪರಿಶೀಲನೆ ನಡೆಸಿದರು.

ಮುಖ್ಯ ಎಂಜಿನಿಯರ್‌ (ರಾಜಕಾಲುವೆ) ಬಿ.ಎಸ್‌.ಪ್ರಹ್ಲಾದ್, ‘ಕೋರಮಂಗಲ ಕಣಿವೆಯಲ್ಲಿ ಹರಿದುಬರುವ ಮಳೆ ನೀರು ಬೆಳ್ಳಂದೂರು ಕೆರೆಯನ್ನು ಸೇರುತ್ತದೆ. ಇದನ್ನು ಸಂಪರ್ಕಿಸುವ ದ್ವಿತೀಯ ಹಂತದ ಕಣಿವೆಗಳಲ್ಲಿ ಮಳೆ ನೀರು ಹೆಚ್ಚಾದಾಗ 80 ಅಡಿ ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತದೆ. ಜೊತೆಗೆ ಕೋರಮಂಗಲ 4ನೇ ಬ್ಲಾಕ್‌ನಲ್ಲಿ ಹಾಗೂ ಎಸ್.ಟಿ ಬೆಡ್ ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಇದಕ್ಕೆ ಪರಿಹಾರವಾಗಿ ರಸ್ತೆಯ ಮದ್ಯಭಾಗದಲ್ಲಿ ಸೆಕಂಡರಿ ವ್ಯಾಲಿಗೆ ಸಮಾನಾಂತರ ಕೊಳವೆಯನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

‘ಒಂದೂವರೆ ತಿಂಗಳಲ್ಲಿ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕು’ ಎಂದು ಆಡಳಿತಾಧಿಕಾರಿ ಸೂಚನೆ ನೀಡಿದರು.

‘ಈಜಿಪುರ ಸೇತುವೆ: ತ್ವರಿತವಾಗಿ ಪೂರ್ಣಗೊಳಿಸಿ’: ಈಜಿಪುರ ಮುಖ್ಯರಸ್ತೆ, ಸೋನಿ ವರ್ಲ್ಡ್‌ ಜಂಕ್ಷನ್ ಮತ್ತು ಕೇಂದ್ರಿಯ ಸದನ ಜಂಕ್ಷನ್‌ಗಳನ್ನು ಜೋಡಿಸುವ 2.40 ಕಿಮೀ ಉದ್ದದ ಎಲಿವೇಟೆಡ್ ಕಾರಿಡಾರ್ ಯೋಜನೆಯ ಪ್ರಗತಿಯನ್ನು ಆಡಳಿತಾಧಿಕಾರಿ ಪರಿಶೀಲಿಸಿದರು. ಮೇಲ್ಸೇತುವೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಅಸಮಾದಾನ ವ್ಯಕ್ತಪಡಿಸಿದರು. ಮೇಲ್ಸೇತುವೆಗೆ ಬಳಸುವ ಕಾಂಕ್ರೀಟ್‌ ಘಟಕಗಳ ಪೂರ್ವ ಜೋಡಣೆ (ಪ್ರೀ–ಕಾಸ್ಟ್‌) ಕಾರ್ಯವನ್ನು ಚುರುಕುಗೊಳಿಸುವಂತೆ ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT