ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೌರ ಚಾವಣಿ ಯೋಜನೆ: ತ್ವರಿತ ಅನುಷ್ಠಾನಕ್ಕೆ ಮಾರ್ಗಸೂಚಿ

Published 24 ಮೇ 2024, 16:21 IST
Last Updated 24 ಮೇ 2024, 16:21 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸೌರ ಚಾವಣಿ ಯೋಜನೆ ಅನುಷ್ಠಾನವನ್ನು ತ್ವರಿತಗೊಳಿಸಲು ಇಂಧನ ಇಲಾಖೆಯು ಹೊಸದಾಗಿ ಮಾರ್ಗಸೂಚಿ ಪ್ರಕಟಿಸಿದೆ. ಎಲ್ಲ ಎಸ್ಕಾಂಗಳು ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಂಧನ ಇಲಾಖೆ ಸೂಚಿಸಿದೆ.

ದೊಡ್ಡ ಪ್ರಮಾಣದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಈ ಹಿಂದೆ ತಜ್ಞರ ಸಮಿತಿ ರಚಿಸಲಾಗಿತ್ತು. ತಜ್ಞರ ಸಮಿತಿ, ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ವರದಿ ಆಧರಿಸಿ ಈಗ ಮಾರ್ಗಸೂಚಿ ಪ್ರಕಟಿಸಲಾಗಿದೆ.

ಮಾರ್ಗಸೂಚಿಯಲ್ಲಿ ಏನಿದೆ?: ಸೌರ ಯೋಜನೆ ಅನುಷ್ಠಾನಕ್ಕೆ ಎಲ್ಲ ಎಸ್ಕಾಂಗಳು ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು. ಹೆಚ್ಚಿನ ಗ್ರಾಹಕರನ್ನು ತಲುಪಲು ವ್ಯಾಪಕವಾದ ಜಾಗೃತಿ ಚಟುವಟಿಕೆ ಕೈಗೊಳ್ಳಬೇಕು. ಸಣ್ಣ ಗ್ರಾಹಕರು 1 ಕೆ.ವಿಯಿಂದ 3 ಕೆ.ವಿ. ಸಾಮರ್ಥ್ಯದ ಸೌರ ಚಾವಣಿ ಸ್ಥಾವರಗಳನ್ನು ಸ್ಥಾಪಿಸುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಿದೆ.

ಗ್ರಾಹಕರು ಸಲ್ಲಿಸುವ ಅರ್ಜಿ ಪ್ರಕ್ರಿಯೆಗೆ ಸಾಮಾನ್ಯ ವಿಆರ್‌ಎಲ್‌ ಹಾಗೂ ವೆಬ್‌ಸೈಟ್‌ ರಚಿಸಲು ಬೆಸ್ಕಾಂ ನೋಡಲ್‌ ಕೇಂದ್ರ ಆಗಿರುತ್ತದೆ. ಎಲ್ಲ ಎಸ್ಕಾಂಗಳಿಗೆ ಒಂದೇ ವೇದಿಕೆ ಒದಗಿಸಲು ಲಾಗಿನ್‌ ಒದಗಿಸಬೇಕು ಎಂದು ತಿಳಿಸಿದೆ.

ಅರ್ಜಿಗಳು, ವಿದ್ಯುತ್‌ ಖರೀದಿ ಒಪ್ಪಂದಗಳು ಮತ್ತು ಗ್ರಿಡ್‌ಗೆ ಮಾರಾಟದ ವ್ಯವಹಾರಗಳು ಆನ್‌ಲೈನ್‌ನಲ್ಲೇ ನಡೆಯಬೇಕು. ಸೌರ ಬಿಲ್ಲಿಂಗ್ ಸಾಫ್ಟ್‌ವೇರ್ ಮೇ 31ರ ಒಳಗೆ ಆನ್‌ಲೈನ್‌ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.

ಜಾರಿಯಲ್ಲಿ ವಿಳಂಬವಾದರೆ ಸಿಬ್ಬಂದಿಗೆ ದಂಡ ವಿಧಿಸಲು ಎಸ್ಕಾಂಗಳಿಗೆ ಅಧಿಕಾರ ನೀಡಲಾಗಿದೆ. ಸ್ಮಾರ್ಟ್ ಮೀಟರ್ ಕಾರ್ಯ ವಿಧಾನದಂತೆಯೇ ಖರೀದಿ ಪ್ರಕ್ರಿಯೆಗಾಗಿ ಬೆಸ್ಕಾಂ ಮೊಬೈಲ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕು. ಎಲ್ಲ ಎಸ್ಕಾಂಗಳು ಪಿಪಿಎ ಮಾದರಿ ಅನುಮೋದಿಸಲು ಏಕರೂಪದ ವಿಧಾನ ಅನುಸರಿಸಬೇಕು. ಮೀಟರ್ ಪರೀಕ್ಷೆಯು ಒಂದೇ ಕಡೆ ಆಗಬೇಕು. ಎಲ್ಲ ಎಸ್ಕಾಂಗಳು ಮೇಲಿನ ಮಾರ್ಗಸೂಚಿ ಪಾಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT