ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಹುಡುಗರೇ ಹೈ ಟೆಕಿಗಳು...

ದಕ್ಷಿಣ ಭಾರತ ವಿಜ್ಞಾನ ಮೇಳದಲ್ಲಿ ಗಮನ ಸೆಳೆದ ಗ್ರಾಮೀಣ ಶಾಲೆಗಳ ಮಕ್ಕಳು
Last Updated 8 ಜನವರಿ 2019, 0:57 IST
ಅಕ್ಷರ ಗಾತ್ರ

ಬೆಂಗಳೂರು: ಹೈಟೆಕ್‌ ಮಕ್ಕಳ ಮುಂದೆ ಹಳ್ಳಿ ಹೈದರು ಹುಡುಕಿದ ಸಾಧನಗಳೇ ನೋಡುಗರ ಗಮನ ಸೆಳೆದವು.ಹೆಲ್ಮೆಟ್‌ಗೆ ಸೋಲಾರ್‌ ಫಲಕ ಜೋಡಿಸಿಕೊಂಡು ಅದರ ವಿದ್ಯುತ್‌ ಮೂಲಕ ಕೀಟನಾಶಕ ಸಿಂಪಡಿಸುವ ಯಂತ್ರ ಚಾಲನೆ ಮಾಡಿದ ತೆಲಂಗಾಣದ ನಾರಾಯಣಪೇಟೆಯ ದಯಾನಂದ ವಿದ್ಯಾಮಂದಿರದ ಹುಡುಗ ಜಗದೀಶ್‌.

ಇದು ನಗರದ ಸೇಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌ನಲ್ಲಿಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿಶ್ವೇಶ್ವರಯ್ಯ ಕೈಗಾರಿಕೆ ಮತ್ತು ತಾಂತ್ರಿಕ ಮ್ಯೂಸಿಯಂ ಆಶ್ರಯದಲ್ಲಿ ಸೋಮವಾರ ಆರಂಭವಾದ ದಕ್ಷಿಣ ಭಾರತ ರಾಜ್ಯಗಳ ವಿಜ್ಞಾನ ಮೇಳದಲ್ಲಿ ಕಂಡ ನೋಟ.

ಮಾರುಕಟ್ಟೆಯಲ್ಲಿ ಸಿಗುವ ಸ್ಪ್ರೇಯರ್‌ನಷ್ಟೇ ಪರಿಣಾಮಕಾರಿಯಾಗಿ ಈ ಯಂತ್ರವೂ ಕೆಲಸ ಮಾಡುತ್ತದೆ. ಕಳೆ ಕೀಳುವ ಯಂತ್ರದ ಮಾದರಿಯಲ್ಲೇ ಇದನ್ನು ತಯಾರಿಸಿದ್ದಾನೆ. ಅಲ್ಯೂಮಿನಿಯಂ ಕೊಳವೆಯ ತುದಿಗೆ ಪುಟ್ಟ ಡಿಸಿ ಮೋಟಾರ್‌ ಅಳವಡಿಸಿದ್ದ. ಅದಕ್ಕೆ ಹೊಂದಿಕೊಂಡಂತೆ ಕೀಟನಾಶಕದ ಕ್ಯಾನ್‌ ಜೋಡಿಸಿದ್ದ. ಯಂತ್ರ ಚಾಲನೆಯಾಗುತ್ತಿದ್ದಂತೆಯೇ ಕೀಟನಾಶಕ ಮೋಟಾರ್‌ಗೆ ಅಳವಡಿಸಿದ ಚಕ್ರದಂಥ ಸ್ಪ್ರೇಯರ್‌ಗೆ ಬಿದ್ದು ಸಿಂಪಡಣೆಗೊಳ್ಳುತ್ತದೆ. ಕೊಳವೆಯ ಹಿಡಿಕೆ ಭಾಗದಲ್ಲಿ ಮೋಟಾರ್‌ನ ನಿಯಂತ್ರಣ ಸ್ವಿಚ್‌ ಇದೆ. ಅದರ ಮೂಲಕ ಚಲನೆಯನ್ನು ನಿಯಂತ್ರಿಸಲಾಗುತ್ತದೆ.

ಬೆಳೆ ನಿರ್ವಹಣೆಯ ಬಹುಪಯೋಗಿ ಸೈಕಲ್‌ನ್ನು ನೆಲಮಂಗಲ ತಾಲ್ಲೂಕು ಸೋಲದೇವನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಾಡಿ ತಂದಿದ್ದರು.

ಈ ಸೈಕಲ್‌ ಕೀಟ ಆಕರ್ಷಕ ಮೋಹಕ ದೀಪ ಹೊಂದಿದೆ. ಇಲ್ಲಿ ಬಿದ್ದು ಸತ್ತ ಕೀಟಗಳನ್ನೇ ಕೊಳೆಯಿಸಿ ಮಜ್ಜಿಗೆ, ಬೇವಿನ ಎಣ್ಣೆ ಬೆರೆಸಿ ಸೋಸಿ ಕೀಟನಾಶಕ ತಯಾರಿಸುತ್ತಾರೆ. ಇದರಲ್ಲೇ ಸಿಂಪಡಣೆ ಕ್ಯಾನ್‌ ಕೂಡಾ ಇದೆ. ಅದರ ಮೂಲಕ ಸಿಂಪಡಣೆ ನಡೆಯುತ್ತದೆ. ಸಾವಯವ ಗೊಬ್ಬರ ತಯಾರಿಕೆಯ ಮಾದರಿಯನ್ನೂ ಇದರಲ್ಲಿ ಅಳವಡಿಸಿದ್ದಾರೆ. ಬೀಜ ಬಿತ್ತನೆಗೂ ಅವಕಾಶವಿದೆ. ಕಳೆ ಕೀಳಲು ಸೈಕಲ್‌ ಹಿಂಭಾಗದಲ್ಲಿ ಪುಟ್ಟ ಬ್ಲೇಡ್‌ ಅಳವಡಿಸಲಾಗಿದೆ. ಹೀಗೆ ಇದು ಮೋಟಾರು ರಹಿತ ಕೃಷಿ ಯಂತ್ರ. ಇದನ್ನು ಸಿದ್ಧಪಡಿಸಿದವರು ಜನಾರ್ದನ, ಮಧು ನಾಯಕ್‌ ಮತ್ತು ಮಧು ಕುಮಾರ್‌.

ವಿವಿಧೆಡೆ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಸಿಕ್ಕ ಬಹುಮಾನದ ದುಡ್ಡನ್ನೇ ಈ ಸೈಕಲ್‌ ಸಿದ್ಧಪಡಿಸಲು ಬಳಸಿದ್ದಾರೆ.

ಪುದುಚೇರಿಯ ಹುಡುಗ ಶಕ್ತಿವೇಲು ಮನೆಯಲ್ಲಿ ಅನುಷ್ಠಾನಗೊಳಿಸಿದ ಶಕ್ತಿ ವ್ಯವಸ್ಥೆಯ ಮಾದರಿಯನ್ನೇ ಪ್ರದರ್ಶಿಸಿದ್ದ. ಕೃಷಿ ತ್ಯಾಜ್ಯಗಳನ್ನು ಒಂದು ಟ್ಯಾಂಕ್‌ನಲ್ಲಿ ಹಾಕಿ ನೀರು ಬೆರೆಸಿ ಕೊಳೆಯಿಸುತ್ತಾರೆ. ಆ ನೀರು ಸಿಟ್ರಿಕ್‌ ಆಮ್ಲದ ರೂಪ ಪಡೆದು ಹುಳಿಮಿಶ್ರಣವಾಗಿ ಇನ್ನೊಂದು ತೊಟ್ಟಿಗೆ ಹರಿಯುತ್ತದೆ. ಆ ತೊಟ್ಟಿಗಳಲ್ಲಿ ಸೀಸ ಮತ್ತು ತಾಮ್ರದ ಮೊಳೆಗಳನ್ನು ಅಳವಡಿಸಿದ್ದಾನೆ. ಈ ಕಡ್ಡಿಗಳಿಗೆ ತಂತಿ ಜೋಡಿಸಲಾಗಿದೆ. ಇಲ್ಲಿ ಉತ್ಪತ್ತಿಯಾದ ವಿದ್ಯುತ್‌ ಮುಂದೆ ಬಲ್ಬನ್ನು ಬೆಳಗಿಸುತ್ತದೆ. ಕೊಳೆತ ತ್ಯಾಜ್ಯ ಕಾಂಪೋಸ್ಟ್‌ ಗೊಬ್ಬರವಾಗಿ ಸಿಗುತ್ತದೆ. ‘ಈ ಪ್ರಯೋಗದಿಂದ ಸಿಕ್ಕ ವಿದ್ಯುತ್‌ ಪ್ರತಿ ದಿನ ಮೂರು ಗಂಟೆಗಳಷ್ಟು ಕಾಲ ಮನೆ ಬೆಳಗುತ್ತದೆ’ ಎಂದು ಪ್ರಶಾಂತ್‌ ವಿವರಿಸಿದ.

ಪುದುಚೇರಿ ಯಾನಂನ ಶಾರದಾ ವಿದ್ಯಾನಿಕೇತನದ ವಿದ್ಯಾರ್ಥಿ ವಹಾಬ್‌
ನದ್ದು ಸ್ಮಾರ್ಟ್‌ ಸೈಕಲ್‌ ಯೋಜನೆ. ಸಾಮಾನ್ಯ ಸೈಕಲ್‌ಗೆ ಒಂದು ಹೆಚ್ಚುವರಿ ಚೈನ್‌ ಜೋಡಿಸಿ ಅದನ್ನು ಡಿಸಿ ಮೋಟಾರ್‌ಗೆ ಸಂಪರ್ಕಿಸಲಾಗಿತ್ತು. ಸೈಕಲ್‌ ಪೆಡಲ್‌ ಮಾಡುವಾಗ ಮೋಟಾರು ತಿರುಗಿ ಬ್ಯಾಟರಿಯನ್ನು ಚಾರ್ಜ್‌ ಮಾಡುತ್ತದೆ. ಮುಂದೆ ಪೆಡಲ್‌ ನಿಲ್ಲಿಸಿ ಹ್ಯಾಂಡಲ್‌ ಬಾರ್‌ನಲ್ಲಿರುವ ಆ್ಯಕ್ಸಿಲರೇಟರ್‌ ತಿರುವಿದರೆ ಸಾಕು. ಮೋಟಾರ್‌ ಚಾಲನೆಗೊಂಡು ಸೈಕಲ್‌ ಚಕ್ರವನ್ನು ತಿರುಗಿಸುತ್ತದೆ. ಹೀಗೆ ಪೆಡಲ್‌ ಮತ್ತು ಮೋಟಾರ್‌ ಎರಡೂ ಶಕ್ತಿಯ ಮೂಲಕ ಓಡುವ ಸೈಕಲ್‌ ಇದು.

ಸ್ಮಾರ್ಟ್‌ ರಕ್ಷಕ ದೋಣಿ

ಪ್ರವಾಹ ಸಂತ್ರಸ್ತರನ್ನು ರಕ್ಷಿಸುವ ಸ್ಮಾರ್ಟ್‌ ರಕ್ಷಕ ದೋಣಿಯನ್ನು ಬಾಲುಸ್ಸೇರಿಯ ಹೃದ್ಯಾ ಮತ್ತು ತಂಡದವರು ರೂಪಿಸಿದ್ದರು. ರಿಮೋಟ್‌ ಮೂಲಕ ಸಂಕೇತ ಗುರುತಿಸುವ, ಪ್ರವಾಹ ಪೀಡಿತ ಸ್ಥಳಕ್ಕೆ ಧಾವಿಸುತ್ತದೆ ಈ ದೋಣಿ.

ಸಂತ್ರಸ್ತರ ಸಮೀಪ ಸ್ವಯಂ ಚಾಲಿತವಾಗಿ ದೋಣಿಯ ಏಣಿ ತೆರೆದುಕೊಳ್ಳುತ್ತದೆ. ಅವರನ್ನು ಸುರಕ್ಷಿತ ಸ್ಥಳಕ್ಕೆ ಒಯ್ಯುತ್ತದೆ. ಇದನ್ನು ಕಂಪ್ಯೂಟರ್‌– ಮೊಬೈಲ್‌ ತಂತ್ರಜ್ಞಾನ, ಮೈಕ್ರೋಚಿಪ್‌ ಬಳಸಿ ಸಿದ್ಧಪಡಿಸಲಾಗಿದೆ.

ಪ್ಯಾನಿಕ್‌ ಸ್ಟನ್‌ ಜಾಕೆಟ್‌

ಮಹಿಳೆಯ ಬಳಿ ದುರ್ವರ್ತನೆ ತೋರಲು ಮುಂದಾದರೆ ಷಾಕ್‌ ನೀಡಲಿದೆ ಜಾಕೆಟ್‌. ಇದನ್ನು ತಿರುಪುರದ ವಿದ್ಯಾರ್ಥಿನಿ ದಾರುಣಿಕಾ ಎ.ಎಸ್‌. ಪ್ರದರ್ಶಿಸಿದಳು. ಯಾರಾದರೂ ಮೈಮುಟ್ಟಲು ಮುಂದಾದರೆ ಈ ಜಾಕೆಟ್‌ನಲ್ಲಿ ಅಳವಡಿಸಿದ ಸೆನ್ಸರ್‌ಗಳು ಜಾಗೃತಗೊಂಡು ಕಿಡಿಗೇಡಿಗೆ ವಿದ್ಯುತ್‌ ಆಘಾತ ನೀಡುತ್ತವೆ.

ಕಡಿಮೆ ವೆಚ್ಚದ ರೋಬೊ

ಧರ್ಮಪುರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕೆ. ಶಕ್ತಿವೇಲು ಸ್ವಯಂ ಚಾಲಿತ ರೋಬೊ ತಯಾರಿಸಿದ್ದ. ರಟ್ಟಿನ ಚೌಕಟ್ಟಿನೊಳಗೆ ಮೋಟಾರ್‌ ಅಳವಡಿಸಿದ್ದ. ಚಾಲನೆಯಾಗುತ್ತಿದ್ದಂತೆಯೇ ರೋಬೋ ಒಂದೊಂದೇ ಹೆಜ್ಜೆ ಮುಂದೆ/ ಹಿಂದೆ ಸಾಗುತ್ತದೆ. ಕೈಗಳೂ ಕೆಲಸ ಮಾಡುತ್ತವೆ.

ಬಯೋಪ್ಯಾಡ್‌

ಋತುಸ್ರಾವದ ಸಂದರ್ಭ ಬಳಸುವ ಜೈವಿಕ ಪ್ಯಾಡ್‌ಗಳು ಗಮನ ಸೆಳೆದವು. ಸೀಗ್ರಾಸ್‌ (ಹುಲ್ಲು), ಹಾಗೂ ಸಾವಯವ ವಸ್ತುಗಳನ್ನು ಬಳಸಿ ಈ ಪ್ಯಾಡ್‌ಗಳನ್ನು ಸಿದ್ಧ
ಪಡಿಸಲಾಗಿತ್ತು. ಅಲ್ಪ ವೆಚ್ಚದಲ್ಲಿ ಸೋಂಕು ಉಂಟಾಗದ ಪ್ಯಾಡ್‌ಗಳನ್ನು ಶಿಕ್ಷಕರು– ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಸ್ವಯಂ ಚಾಲಿತವಾಗಿ ತ್ಯಾಜ್ಯ ಪ್ರತ್ಯೇಕಿಸುವ, ವಿದ್ಯುತ್‌ ಉತ್ಪಾದಿಸುವ, ಇಂಗಾಲ ಉತ್ಪಾದನೆ ಇಳಿಮುಖವಾಗಿಸುವ ಮಾದರಿಯನ್ನು ಅರುಣ್‌ ಕುಮಾರ್‌ ಪ್ರದರ್ಶಿಸಿದ. ತೂಕಡಿಸಿದರೆ ಎಚ್ಚರಿಸುವ ಅಲಾರಾಂ, ಸ್ವಯಂ ಚಾಲಿತ ಬೀದಿ ದೀಪ, ಪರ್ಯಾಯ ಶಕ್ತಿ ಮೂಲಗಳ ಮಾದರಿಗಳನ್ನು ಪ್ರದರ್ಶಿಸಿದರು.

***

ದಿನ ನಿತ್ಯದ ಎಲ್ಲ ಸಂದರ್ಭದಲ್ಲಿ ವಿಜ್ಞಾನ ನಮ್ಮೊಂದಿಗಿರುತ್ತದೆ. ವಿದ್ಯಾರ್ಥಿ ಪ್ರತಿಭೆಗಳ ಆಲೋಚನೆಗಳಿಗೆ ಈ ಪ್ರದರ್ಶನದಲ್ಲಿ ವೇದಿಕೆ ನೀಡಿದ್ದೇವೆ.
ಪಿ.ಸಿ.ಜಾಫರ್‌, ಆಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT