ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೀನ್‌ ವ್ಯಾಲಿ ಗೋಮಾಳ ಜಮೀನು; ರೇವ್ ಪಾರ್ಟಿ ಸ್ಥಳಕ್ಕೆ ಎಸ್ಪಿ ಭೇಟಿ

Last Updated 20 ಸೆಪ್ಟೆಂಬರ್ 2021, 21:44 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ತಮ್ಮನಾಯಕನಹಳ್ಳಿ ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ರೇವ್‌ ಪಾರ್ಟಿ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಡಾ.ಕೆ.ವಂಶಿಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಡಾ.ಕೆ.ವಂಶಿಕೃಷ್ಣ ಮಾತನಾಡಿ, ವಶಕ್ಕೆ ಪಡೆಯಲಾಗಿರುವ ಎಲ್ಲ ಆರೋಪಿಗಳ ರಕ್ತ ಹಾಗೂ ಮೂತ್ರ ಮತ್ತು ಹೇರ್‌ ಪಾಲಿಕಲ್‌ ಟೆಸ್ಟ್‌ ವರದಿಗಾಗಿ ಕಾಯಲಾಗುತ್ತಿದೆ. ಕೋವಿಡ್‌ ಮಾರ್ಗಸೂಚಿಗಳಿದ್ದರೂ ಪಾರ್ಟಿ ಆಯೋಜನೆ ಮಾಡಿರುವುದು ತಪ್ಪು. ರೆಸಾರ್ಟ್‌ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಕಂದಾಯ ಇಲಾಖೆಗೆ ಸ್ಥಳದ ಮಾಹಿತಿ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದರು.

ವೀಕೆಂಡ್‌ ಸಂದರ್ಭದಲ್ಲಿ ಎಲ್ಲ ರೆಸಾರ್ಟ್‌ಗಳ ಮೇಲೆ ದಾಳಿ ಮಾಡುವಂತೆ ಜಿಲ್ಲೆ ಪೊಲೀಸರಿಗೆ ತಿಳಿಸಲಾಗಿದೆ. ತಪಾಸಣೆ ಬಿಗಿಗೊಳಿಸಿ ಅವ್ಯವಹಾರ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಪುಂಡರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ ಎಂದು ತಿಳಿಸಿದರು.

ಸ್ಥಳಕ್ಕೆ ಎಎಸ್ಪಿ ಲಕ್ಷ್ಮೀಗಣೇಶ್‌, ಡಿವೈಎಸ್ಪಿ ಎಂ.ಮಲ್ಲೇಶ್‌, ಸರ್ಕಲ್‌ ಇನ್‌ಸ್ಪೆಕ್ಟರ್ ಎಚ್.ಆರ್.ಮಹಾನಂದ, ಸಬ್‌ಇನ್‌ಸ್ಪೆಕ್ಟರ್‌ ಮಧುಸೂದನ್‌ ಭೇಟಿ ನೀಡಿ ಪರಿಶೀಲಿಸಿದರು.

ಘಟನೆ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಪಿ.ದಿನೇಶ್‌ ಗ್ರೀನ್‌ವ್ಯಾಲಿ ರೆಸಾರ್ಟ್‌ಗೆ ಭೇಟಿ ನೀಡಿ ದಾಖಲಾತಿ ಪರಿಶೀಲನೆ ನಡೆಸಿದರು.

ಗ್ರೀನ್‌ ವ್ಯಾಲಿಯು ಹಸಿರು ವಲಯದಲ್ಲಿದ್ದು ಭೂಪರಿವರ್ತನೆ ಮಾಡಿಸಿಕೊಳ್ಳದೆ ಖಾತೆದಾರರು ಪ್ರಶ್ನಿತ ಜಮೀನಿನಲ್ಲಿ ಭೂ ಕಂದಾಯ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಪತ್ರ ಬರೆದಿದ್ದಾರೆ. ರೇವ್‌ ಪಾರ್ಟಿ ನಡೆದ ರೆಸಾರ್ಟ್‌ ಸ್ಥಳ ತಮ್ಮನಾಯಕನಹಳ್ಳಿ ಸರ್ವೆ ನಂ.23/ಪಿ93ರಲ್ಲಿ ಒಂದು ಎಕರೆ ಮತ್ತು ಸರ್ವೆ ನಂ.23/ಪಿ101ರಲ್ಲಿ ನಾಲ್ಕು ಎಕರೆ ಖಾತೆದಾರರ ಹೆಸರು ಅಲುಮೇಲಮ್ಮ ಕೋಂ ದಾಸಪ್ಪ ಎಂದಿದೆ. ಈ ಪ್ರದೇಶ ಮೂಲತಃ ಗೋಮಾಳದ ಜಮೀನಾಗಿದ್ದು ದರಖಾಸ್ತು ಮೂಲಕ ಮಂಜೂರಾಗಿದೆ ಎಂದು ಪತ್ರದಲ್ಲಿ ತಹಶೀಲ್ದಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT