ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಾಳ ಜಂಕ್ಷನ್‌ ಸುಧಾರಣೆಗೆ ವಿಶೇಷ ಯೋಜನೆ: ಬಿಬಿಎಂಪಿಗೆ ₹6,000 ಕೋಟಿ

ಅಮೃತ ನಗರೋತ್ಥಾನ: ಹೆಬ್ಬಾಳ ಜಂಕ್ಷನ್‌ ಸುಧಾರಣೆಗೆ ವಿಶೇಷ ಯೋಜನೆ
Last Updated 6 ಜನವರಿ 2022, 20:30 IST
ಅಕ್ಷರ ಗಾತ್ರ

ಬೆಂಗಳೂರು:‘ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆ’ ಅಡಿಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ₹ 6,000 ಕೋಟಿ ವಿಶೇಷ ಅನುದಾನ ಒದಗಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

2021ರ ಆಗಸ್ಟ್‌ 15ರಂದು ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಈ ಯೋಜನೆ ಪ್ರಕಟಿಸಿದ್ದರು. ಯೋಜನೆಯ ಅವಧಿಯನ್ನು ಐದು ವರ್ಷಗಳ ಬದಲಿಗೆ ಮೂರು ವರ್ಷಗಳಿಗೆ ಸೀಮಿತಗೊಳಿಸಿ ಅನುಷ್ಠಾನಕ್ಕೆ ತರಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೇ ವೇಳೆ ನಗರ ಸ್ಥಳೀಯ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲು ₹3,885 ಕೋಟಿ ಕ್ರಿಯಾ ಯೋಜನೆಗೂ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತು.

ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘2022–23ರಿಂದ 2024–25 ರವರೆಗೆ ಈ ಯೋಜನೆ ಜಾರಿಗೆ ಬರಲಿದೆ. ಪ್ರತಿ ವರ್ಷ ಬಿಬಿಎಂಪಿಗೆ ತಲಾ ₹ 2,000 ಕೋಟಿ ವಿಶೇಷ ಅನುದಾನ ಒದಗಿಸಲಾಗುವುದು’ ಎಂದರು.

ಹೆಬ್ಬಾಳ ಜಂಕ್ಷನ್‌ ಸುಧಾರಣೆ: ಅತಿಯಾದ ಸಂಚಾರ ದಟ್ಟಣೆ ಹೊಂದಿರುವ ಹೆಬ್ಬಾಳ ಜಂಕ್ಷನ್‌ ಸುಧಾರಣೆ ಮತ್ತು ರೈಲು ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಯೋಜನೆಯೊಂದನ್ನು ಜಾರಿಗೊಳಿಸುವ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಯೋಜನೆಯ ಪ್ರಾಥಮಿಕ ವಿನ್ಯಾಸವನ್ನು ಸಂಪುಟ ಸಭೆಯಲ್ಲಿ ಅನುಮೋದಿಸಿದ್ದು, ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಹಸಿರು ನಿಶಾನೆ ದೊರಕಿದೆ.

‘ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ತಗ್ಗಿಸುವುದು, ಅಲ್ಲಿಂದ ಕೆ.ಆರ್‌.ಪುರ ಮತ್ತು ತುಮಕೂರು ರಸ್ತೆಗಳ ಕಡೆಗೂ ಸುಲಭವಾಗಿ ಸಂಚರಿಸಲು ಅವಕಾಶ ಮಾಡಿಕೊಡುವಂತೆ ಮೂಲಸೌಕರ್ಯ ಅಭಿವೃದ್ಧಿಪಡಿಸುವ ದೂರದೃಷ್ಟಿಯ ಯೋಜನೆಯೊಂದನ್ನು ರೂಪಿಸಲಾಗುವುದು. ಇದಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ, ಬಿಎಂಟಿಸಿ, ಬೆಸ್ಕಾಂ, ಬೆಂಗಳೂರು ಜಲ ಮಂಡಳಿ ಮತ್ತು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿಗಳು ಸುದೀರ್ಘ ಸಮಾಲೋಚನೆ ನಡೆಸಿ, ಯೋಜನೆ ರೂಪಿಸಿವೆ’ ಎಂದು ಮಾಧುಸ್ವಾಮಿ ತಿಳಿಸಿದರು.

ಆಸ್ತಿ ತೆರಿಗೆ: ದಂಡ ಕಡಿತಕ್ಕೆ ನಿರ್ಣಯ

ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿ ವೇಳೆ ತಪ್ಪು ಮಾಹಿತಿ ನೀಡಿ, ಕಡಿಮೆ ತೆರಿಗೆ ಪಾವತಿಸಿದ್ದ 78,254 ಆಸ್ತಿ ಮಾಲೀಕರಿಗೆ ವ್ಯತ್ಯಾಸದ ಮೊತ್ತಕ್ಕೆ ದುಪ್ಪಟ್ಟು ದಂಡ ವಿಧಿಸುವ ಬದಲಿಗೆ, ಸರಳ ಬಡ್ಡಿ ವಸೂಲಿಗೆ ಸಂಪುಟ ಸಭೆ ನಿರ್ಣಯಿಸಿದೆ.

ಈ ಆಸ್ತಿಗಳ ಮಾಲೀಕರು ವ್ಯತ್ಯಾಸದ ಮೊತ್ತದ ಜತೆಗೆ ಬ್ಯಾಂಕ್‌ ಬಡ್ಡಿಯ ದರದಷ್ಟು ದಂಡ ಪಾವತಿಸಿ, ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಸೂಲಾಗದೇ ಇರುವ ₹ 238 ಕೋಟಿಯಷ್ಟು ನಗರ ಭೂ ಸಾರಿಗೆ ಉಪಕರಣವನ್ನೂ ಮನ್ನಾ ಮಾಡಲು ನಿರ್ಧರಿಸಲಾಗಿದೆ.

ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ₹ 100 ಕೋಟಿ

ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗಾಗಿ ಬಿಎಂಟಿಸಿಗೆ ₹ 100 ಕೋಟಿ ಅನುದಾನ ಒದಗಿಸುವ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದೆ. 300 ಎಲೆಕ್ಟ್ರಿಕ್‌ ಬಸ್‌ ಖರೀದಿಸಲು ನಿರ್ಧರಿಸಲಾಗಿದೆ.

ಬೆಂಗಳೂರು ಜಲಮಂಡಳಿಯ ತೊರೆಕಾಡನಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯ ಪಂಪ್‌ಹೌಸ್‌ಗಳಲ್ಲಿ ವಿದ್ಯುತ್‌ ಉಪಕರಣಗಳ ಬದಲಾವಣೆಗೆ ₹ 44.50 ಕೋಟಿ ವೆಚ್ಚ ಮಾಡುವ ಪ್ರಸ್ತಾವಕ್ಕೂ ಒಪ್ಪಿಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT