ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಣ ನಮ್ಮ ಬಿಡುಗಡೆಗಿರುವ ಏಕೈಕ ಅಸ್ತ್ರ’-ಆರ್‌.ವಿ.ಚಂದ್ರಶೇಖರ್‌

Last Updated 9 ಏಪ್ರಿಲ್ 2021, 16:16 IST
ಅಕ್ಷರ ಗಾತ್ರ

ಬೆಂಗಳೂರು: ‘ದಲಿತ ಸಮುದಾಯದ ಮಕ್ಕಳಿಗೆ ಇಂದಿಗೂ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಹೀಗಾಗಿ ಈ ಸಮುದಾಯ ಅಸಮಾನತೆಯ ಬಲೆಯೊಳಗೆ ಬಂದಿಯಾಗಿದೆ. ಶಿಕ್ಷಣವೆಂಬ ಅಸ್ತ್ರ ದೊರೆತರೆ ಇದರಿಂದ ವಿಮೋಚನೆಗೊಳ್ಳುವುದು ಸುಲಭ’ ಎಂದು ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯ (ಎನ್‌ಎಲ್‌ಎಸ್‌ಐಯು) ಸಹಾಯಕ ಪ್ರಾಧ್ಯಾಪಕ ಆರ್‌.ವಿ.ಚಂದ್ರಶೇಖರ್‌ ತಿಳಿಸಿದರು.

ಅಂಬೇಡ್ಕರ್‌ ಹಬ್ಬದ ಅಂಗವಾಗಿ ಸ್ಪೂರ್ತಿಧಾಮ ಸಂಸ್ಥೆ ಆಯೋಜಿಸಿದ್ದ ‘ರಾಷ್ಟ್ರಪ್ರಭುತ್ವ–ಜಾತೀಯ ಹಿಂಸೆ/ಅವಮಾನದ ಹೊಸ ರೂಪಗಳು’ ವಿಷಯದ ಕುರಿತ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ದಲಿತ ಸಮುದಾಯದ ಶೇ 34ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇಂದಿಗೂ ನಾವು ಮೇಲ್ವರ್ಗದವರ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದೇವೆ. ದಲಿತ ಪರ ದನಿ ಎತ್ತುವ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ತಳ ಸಮುದಾಯದ ಅಧಿಕಾರಿಗಳನ್ನು ಬೆದರಿಸುವ ಕೆಲಸ ನಡೆಯುತ್ತಿದೆ. ಅವರಿಗೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತಿದೆ. ಇದು ಆತಂಕಕಾರಿ’ ಎಂದರು.

‘ಏಕ ಭಾಷೆ ಮತ್ತು ಏಕ ಸಂಸ್ಕೃತಿ ಜಾರಿಯಾಗಬೇಕು ಎಂದು ಹಲವರು ಹೇಳುತ್ತಿದ್ದಾರೆ. ಇದು ನಮ್ಮ ಸಂಸ್ಕೃತಿಯನ್ನು ನಾಶಗೊಳಿಸುವ ಹುನ್ನಾರ. ದೇಶದ ಸಾಮಾಜಿಕ ರಚನೆಯೊಳಗೆ ಅಸಮಾನತೆ ಮನೆಮಾಡಿದೆ. ದಲಿತರಿಗೆ ಮೊದಲು ಸಂಸ್ಕೃತ ಕಲಿಯಲು ಅವಕಾಶ ಇರಲಿಲ್ಲ. ಈಗ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಯಲು ಅವಕಾಶ ನೀಡುತ್ತಿಲ್ಲ. ದಲಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಕರೆ ಅವರು ಉನ್ನತ ಸ್ಥಾನಕ್ಕೇರಬಹುದು ಎಂಬ ಆತಂಕ ಹಲವರಲ್ಲಿದೆ. ಹೀಗಾಗಿಯೇ ಈ ನೀತಿ ಅನುಸರಿಸುತ್ತಿದ್ದಾರೆ. ಕಾರ್ಪೊರೇಟ್‌ ವ್ಯವಸ್ಥೆಯಲ್ಲೂ ಈಗ ಜಾತಿ ವ್ಯವಸ್ಥೆ ನುಸುಳಿದೆ. ಮೇಲ್ವರ್ಗದವರು ತಳ ಸಮುದಾಯದವರ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.

ಸ್ಪೂರ್ತಿಧಾಮ ಸಂಸ್ಥೆಯ ಅಧ್ಯಕ್ಷ ಕೆ.ಮರಿಸ್ವಾಮಿ ‘ರಾಷ್ಟ್ರಪ್ರಭುತ್ವದ ಮೂಲಕ ಒಂದು ದೇಶ, ಒಂದು ಸಂಸ್ಕೃತಿ ವ್ಯವಸ್ಥೆ ಜಾರಿಗೊಳಿಸಲು ಹೊರಟಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಉಳ್ಳವರು ಹಾಗೂ ತಳ ಸಮುದಾಯದವರನ್ನು ಪ್ರತ್ಯೇಕಿಸುತ್ತಿರುವುದೂ ಆತಂಕಕಾರಿ ಬೆಳವಣಿಗೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT