ಬೆಂಗಳೂರು: ‘ಪ್ರಸಕ್ತ ಸಾಲಿನಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದ ಕ್ರೀಡಾ ಕೋಟಾದ ಅರ್ಹತೆಗಳನ್ನು ಮರು ಪರಿಶೀಲನೆ ನಡೆಸಿ’ ಎಂದು ಹೈಕೋರ್ಟ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಿರ್ದೇಶಿಸಿದೆ.
ಕೆಇಎ ನಿಗದಿಪಡಿಸಿರುವ ಕ್ರೀಡಾ ಕೋಟಾದ ಅರ್ಹತಾ ಮಾನದಂಡಗಳನ್ನು ಪ್ರಶ್ನಿಸಿ ಮೈಸೂರಿನ ಟೆನಿಸ್ ಆಟಗಾರ್ತಿ ದೀಕ್ಷಾ ಪ್ರಸಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ನಿಯಮಾನುಸಾರ ಅಭ್ಯರ್ಥಿಯು ಕ್ರೀಡಾ ಕೋಟಾದಲ್ಲಿ ಸೀಟು ಪಡೆಯಬೇಕಾದರೆ ಮೂರು ವರ್ಷ ಸತತವಾಗಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ರಾಜ್ಯ ಅಥವಾ ದೇಶವನ್ನು ಪ್ರತಿನಿಧಿಸಿ ಪದಕ ಜಯಿಸಿರಬೇಕು. ಈ ನಿಯಮದ ಪ್ರಕಾರ ಅರ್ಜಿದಾರರು ಕ್ರೀಡಾ ಕೋಟಾದಡಿ ಸೀಟು ಪಡೆಯಲು ಅರ್ಹತೆ ಹೊಂದಿದ್ದಾರೆ’ ಎಂದು ವಿವರಿಸಿದರು.
‘ಕೋವಿಡ್ ಕಾರಣದಿಂದಾಗಿ 2021 ಹಾಗೂ 2022ರಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆದಿರಲಿಲ್ಲ. ಆದರೆ 2022-23 ಹಾಗೂ 2023-24ನೇ ಸಾಲಿನ ಕ್ರೀಡಾಕೂಟಗಳು ಒಂದೇ ವರ್ಷ ನಡೆದಿವೆ. ಹಾಗಾಗಿ, ಕೆಇಎ ಇವುಗಳಲ್ಲಿ ಒಂದನ್ನು ಮಾತ್ರ ಪರಿಗಣಿಸುತ್ತಿರುವ ಕಾರಣ ಅರ್ಜಿದಾರರು ಕ್ರೀಡಾ ಕೋಟಾದಡಿ ಸೀಟು ಪಡೆಯಲು ಅನರ್ಹರಾಗುತ್ತಾರೆ. ಆದ್ದರಿಂದ, ಕೆಇಎಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೋರಿದರು.
ಕೆಇಎ ಪರ ವಾದ ಮಂಡಿಸಿದ ಹೈಕೋರ್ಟ್ ವಕೀಲ ಎನ್.ಕೆ.ರಮೇಶ್ ಮತ್ತು ಸರ್ಕಾರಿ ವಕೀಲ ಸುದೇವ್ ಹೆಗಡೆ, ‘ಕೋವಿಡ್ -19 ಸೃಷ್ಟಿಸಿದ ವಿಚಿತ್ರ ಸನ್ನಿವೇಶದಿಂದಾಗಿ ಕ್ರೀಡಾ ಕೋಟಾದಡಿ ಸಾಕಷ್ಟು ಅರ್ಹ ಅಭ್ಯರ್ಥಿಗಳು ಪ್ರವೇಶ ಪಡೆಯಲಾಗಿಲ್ಲ. ಹಾಗಾಗಿ, ಅರ್ಜಿದಾರರೂ ಸೇರಿದಂತೆ ಇತರರಿಗೆ ಅನ್ವಯವಾಗುವಂತೆ ಕ್ರೀಡಾ ಕೋಟಾ ಪಟ್ಟಿ ಪರಿಷ್ಕರಣೆಗೆ ನ್ಯಾಯಾಲಯ ಆದೇಶಿಸಬೇಕು’ ಎಂದು ಮನವಿ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಕೋವಿಡ್ ಸಾಂಕ್ರಾಮಿಕದ ಕಾರಣ ಕಳೆದ ಕೆಲವು ವರ್ಷಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟಗಳು ನಡೆದಿಲ್ಲ. ಹೀಗಾಗಿ ಮಾನದಂಡಗಳನ್ನು ಮರುಪರಿಶೀಲನೆ ನಡೆಸುವ ಅಗತ್ಯವಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. ಅಂತೆಯೇ, ‘18 ವರ್ಷದ ಅರ್ಜಿದಾರರನ್ನು ಕ್ರೀಡಾ ಕೋಟಾದ ಅರ್ಹರ ಪಟ್ಟಿಗೆ ಸೇರಿಸಿ. ಅವರಿಗೆ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿ’ ಎಂದು ಕೆಇಎಗೆ ಸೂಚಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.