ಶನಿವಾರ, ಜುಲೈ 31, 2021
27 °C
ಕೊರೊನಾ ಹೊಡೆತಕ್ಕೆ ನೆಲಕಚ್ಚಿದ ಐಷಾರಾಮಿ ಹೋಟೆಲ್‌ ಉದ್ಯಮ

ಔಟ್‌ಡೋರ್‌ ಕೆಟರಿಂಗ್‌ಗೆ ಇಳಿದ ಸ್ಟಾರ್‌ ಹೋಟೆಲ್‌ಗಳು

ಪ್ರಜಾವಾಣಿ ಫೀಚರ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್‌ನಿಂದ ಅದ್ಧೂರಿ ಸಭೆ, ಸಮಾರಂಭ ಮತ್ತು ಭರ್ಜರಿ ವೀಕೆಂಡ್‌ ಪಾರ್ಟಿಗಳಿಗೆ ಕತ್ತರಿ ಬಿದ್ದಿದೆ. ಇವುಗಳನ್ನೇ ನೆಚ್ಚಿ ಕೊಂಡಿದ್ದ ಐಷಾರಾಮಿ ಹೋಟೆಲ್‌ ಉದ್ಯಮದ ಆದಾಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕೊರೊನಾ ತಂದೊಡ್ಡಿದ ಸಂಕಷ್ಟದಿಂದ ಪಾರಾಗಲು ಬೆಂಗಳೂರು ಮಹಾನಗರದ ‌ಸ್ಟಾರ್‌ ಹೋಟೆಲ್‌ಗಳು ಪರ್ಯಾಯ ಆದಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ. 

ಲಾಕ್‌ಡೌನ್‌ ನಷ್ಟವನ್ನು ಸರಿದೂಗಿಸಲು ಸ್ಟಾರ್‌ ಮತ್ತು ಲಕ್ಸುರಿ ಹೋಟೆಲ್‌ಗಳು ಔಟ್‌ ಡೋರ್‌ ಕೆಟರಿಂಗ್ ಆರಂಭಿಸಲು ಮುಂದಾಗಿವೆ. ಫೋನ್‌  ಮೂಲಕ ಆರ್ಡರ್‌ ಪಡೆಯುತ್ತಿರುವ ಹೋಟೆಲ್‌ಗಳು ಕಾರುಗಳಲ್ಲಿಯೇ ಗ್ರಾಹಕರ ಮನೆಗೆ ಆಹಾರ ತಲುಪಿಸುವ ಕೆಲಸ ಆರಂಭಿಸಿವೆ.  

ಮತ್ತೊಂದೆಡೆ, ವಿಮಾನ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಆಹಾರ ಪೂರೈಸಲು ‘ಫ್ಲೈಟ್‌ ಕಿಚನ್‌’ ಗುತ್ತಿಗೆ ಪಡೆಯಲು ವಿಮಾನ ಸಂಸ್ಥೆಗಳ ಜತೆ ಮಾತುಕತೆಯಲ್ಲಿ ತೊಡಗಿವೆ. ಖಾಸಗಿ ವಿಮಾನ ಸಂಸ್ಥೆಗಳು ನಿಗದಿ ಪಡಿಸಿದ ದರದಲ್ಲಿಯೇ ಆಹಾರ ಪೂರೈಸುವ ಪ್ರಸ್ತಾಪವನ್ನೂ ಮುಂದಿಟ್ಟಿವೆ. 

ಆರ್ಥಿಕ ಮತ್ತು ಪ್ರವಾಸೋದ್ಯಮ ಚಟುವಟಿಕೆ ಕುಂಠಿತಗೊಂಡಿದ್ದರಿಂದ ಲಾಕ್‌ಡೌನ್‌ಗಿಂತ‌ ಮೊದಲೇ ಹೋಟೆಲ್ ಉದ್ಯಮಕ್ಕೆ ಗ್ರಹಣ ಹಿಡಿದಿತ್ತು. ಕೊರೊನಾ ಸೋಂಕು ತಗಲುವ ಭೀತಿಯಿಂದ ಜನರು ಹೋಟೆಲ್‌ಗಳತ್ತ ಸುಳಿಯದ ಕಾರಣ ಹೋಟೆಲ್‌ ರೂಂ ಬುಕ್ಕಿಂಗ್ ಪ್ರಮಾಣ ಸರಾಸರಿ ಶೇ 20ಕ್ಕಿಂತ ಕೆಳಗೆ ಕುಸಿದಿದೆ. ಇದು ಹೋಟೆಲ್‌ ಉದ್ಯಮದ ಆದಾಯದಕ್ಕೆ ಬಿದ್ದ ದೊಡ್ಡ ಪೆಟ್ಟು. ವಾಸ್ತವ ಪರಿಸ್ಥಿತಿ ಹೇಗಿದೆ ಎಂದರೆ ಸ್ಟಾರ್‌ ಹೋಟೆಲ್‌ ಉದ್ಯಮ ಇದರಿಂದ ಚೇತರಿಸಿಕೊಳ್ಳಲು ಮತ್ತು ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುವಂತಾಗಿದೆ ಎನ್ನುತ್ತಾರೆ ನಗರದ ಲಕ್ಸುರಿ ಹೋಟೆಲ್‌ವೊಂದರ‌ ಜನರಲ್‌ ಮ್ಯಾನೇಜರ್ ವರುಣ್‌ ಸಿಂಗ್‌. ‌   

ಕ್ವಾರಂಟೈನ್‌ ಕೇಂದ್ರಗಳಾದ ಸ್ಟಾರ್‌ ಹೋಟೆಲ್‌

ನಗರದ ಕೆಲವು ಐಷಾರಾಮಿ‌ ಹೋಟೆಲ್‌ಗಳು ‘ಕ್ವಾರಂಟೈನ್’ ಸೆಂಟರ್‌ಗಳಾಗಿ ಬದಲಾಗಿವೆ. ದೆಹಲಿ, ಮುಂಬೈ ಮತ್ತು ಚೆನ್ನೈನಿಂದ ನಗರಕ್ಕೆ ವಿಮಾನಗಳಲ್ಲಿ ಬಂದಿಳಿಯುವ ಎಲ್ಲರಿಗೂ ಕ್ವಾರಂಟೈನ್‌ ಕಡ್ಡಾಯ ಮಾಡಲಾಗಿದೆ. ಹೆಚ್ಚಿನವರಿಗೆ ಇಂತಹ ಐಷಾರಾಮಿ ಹೋಟೆಲ್‌ಗಳನ್ನು ಶಿಫಾರಸು ಮಾಡಲಾಗುತ್ತದೆ.

‘ಹೋಟೆಲ್‌ ಕ್ವಾರಂಟೈನ್’‌ ಗ್ರಾಹಕರಿಗೆ ಶೇ 15– ಶೇ20 ರಷ್ಟು ಡಿಸ್ಕೌಂಟ್‌ ಸೇವೆ ನೀಡಲು ಕೆಲವು ಹೋಟೆಲ್‌ಗಳು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಲಕ್ಸುರಿ ಹೋಟೆಲ್‌ಗಳಲ್ಲಿ ದಿನವೊಂದಕ್ಕೆ ಊಟ ಮತ್ತು ವಸತಿ ವೆಚ್ಚ ಸೇರಿ ₹1,800 ರಿಂದ ₹ 3,500  ಶುಲ್ಕ ವಿಧಿಸಿದರೆ, ಸ್ಟಾರ್‌ ಹೋಟೆಲ್‌ಗಳು ₹4 ಸಾವಿರದಿಂದ ₹8ಸಾವಿರ ಚಾರ್ಜ್ ಮಾಡುತ್ತಿವೆ. ಕ್ವಾರಂಟೈನ್‌ ಗ್ರಾಹಕರ ಮೂಲಕವಾದರೂ ಒಂದಷ್ಟು ಆದಾಯ ಬರುವಂತಾಗಲಿ ಎನ್ನುವುದು ಅವುಗಳ ಆಶಯ. 

ಬದಲಾದ ಒಳಾಂಗಣ ವಿನ್ಯಾಸ  

ಈ ನಡುವೆ ಹೋಟೆಲ್‌ಗೆ ಬರುವ ಗ್ರಾಹಕರ ನಡುವೆ ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ನಗರದ ಹೆಚ್ಚಿನ ಹೋಟೆಲ್‌ಗಳು ರೂಪಾಂತರಗೊಳ್ಳುತ್ತಿವೆ. ಸರ್ಕಾರದ ಆದೇಶದ ಅನ್ವಯ ಮುಂದಿನ ಕೆಲವು ತಿಂಗಳು ಪ್ರತಿ ಟೇಬಲ್‌ ನಡುವೆ ಆರು ಅಡಿ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಇದರಿಂದಾಗಿ ಹೋಟೆಲ್‌ ಒಳಾಂಗಣ ವಿನ್ಯಾಸಗಳು ಈಗಾಗಲೇ ಬದಲಾಗಿವೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು