ಬುಧವಾರ, ಏಪ್ರಿಲ್ 14, 2021
31 °C
ಕೈಗವಸು ಹಾಕಿಕೊಂಡು ಹಣ ಪಡೆಯಲು ಸಾಧ್ಯವಿಲ್ಲವೇ: ಪ್ರಯಾಣಿಕರ ಪ್ರಶ್ನೆ

ಶುರುವಾಗದ ಟೋಕನ್‌ ವ್ಯವಸ್ಥೆ: ಮೆಟ್ರೊ ವಿರುದ್ಧ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವವರಿಗೆ ಟೋಕನ್‌ ವಿತರಿಸಲು ಮುಂದಾಗದ ಬೆಂಗಳೂರು ಮೆಟ್ರೊ ರೈಲು ನಿಗಮದ ವಿರುದ್ಧ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವವರಿಗೆ ಈಗಲೂ ಟೋಕನ್‌ ವಿತರಣೆ ಮಾಡುತ್ತಿಲ್ಲ. ಸ್ಮಾರ್ಟ್‌ ಕಾರ್ಡ್‌ ರಿಚಾರ್ಜ್‌ ಮಾಡಿಸಲೂ ಹಣ ತೆಗೆದುಕೊಳ್ಳುವುದಿಲ್ಲ. ಆನ್‌ಲೈನ್‌ನಲ್ಲಿ ಅಥವಾ ಎಟಿಎಂ ಕಾರ್ಡ್‌ ನೀಡಿ ಮಾಡಿಸಬೇಕು. ಎಟಿಎಂ ಕಾರ್ಡ್ ಇರದಿದ್ದರೆ ವಾಪಸ್‌ ಬರಬೇಕಾಗುತ್ತದೆ’ ಎಂದು ಜಯಲಕ್ಷ್ಮಿ ಪಾಟೀಲ ಎಂಬುವರು ಹೇಳಿದರು.

‘ಆನ್‌ಲೈನ್‌ ರಿಚಾರ್ಜ್‌ ಮಾಡಿಸಿಕೊಳ್ಳಲು ಗೊತ್ತಿಲ್ಲದವರು, ಎಟಿಎಂ ಕಾರ್ಡ್‌ ಇರದವರು ಮೆಟ್ರೊ ಹತ್ತಲೇಬಾರದು ಎಂದು ಬಿಎಂಆರ್‌ಸಿಎಲ್‌ ತೀರ್ಮಾನಿಸಿದಂತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಕೋವಿಡ್‌ ನಿಯಂತ್ರಣಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿಬ್ಬಂದಿ ಹೇಳುತ್ತಾರೆ. ಕೈಗವಸು ಹಾಕಿಕೊಂಡು ಹಣ ತೆಗೆದುಕೊಳ್ಳಬಹುದಲ್ಲವೇ? ಹಣವೂ ತೆಗೆದುಕೊಳ್ಳುವುದಿಲ್ಲ, ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಕೂಡ ಮಾಡುವುದಿಲ್ಲ ಎಂದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.

ಕನಿಷ್ಠ ₹180 ಖರ್ಚು: ‘ಮೆಟ್ರೊ ಸ್ಮಾರ್ಟ್‌ಕಾರ್ಡ್‌ನಲ್ಲಿ ಕನಿಷ್ಠ ₹ 50 ಬಾಕಿ ಇರಲೇಬೇಕು. ಸ್ಮಾರ್ಟ್‌ಕಾರ್ಡ್‌ಗೆ ₹ 50 ಶುಲ್ಕ ಇದೆ. ಅಂದರೆ, ಒಮ್ಮೆ ಪ್ರಯಾಣಿಸಲು ಕನಿಷ್ಠ ₹ 180 ಬೇಕಾಗುತ್ತದೆ. ಬೇರೆ ಊರಿನಿಂದ ಬಂದವರು ಅಥವಾ ಹೋಗುವವರಿಗೆ, ಒಮ್ಮೆ ಮಾತ್ರ ಸಂಚರಿಸುವವರಿಗೆ ತುಂಬಾ ಹೊರೆ ಎನಿಸುತ್ತಿದೆ. ಟೋಕನ್‌ ವಿತರಣೆ ವ್ಯವಸ್ಥೆಯನ್ನು ಕೂಡಲೇ ಆರಂಭಿಸಬೇಕು’ ಎಂದು ಪ್ರಯಾಣಿಕ ರಮೇಶ್ ಎಂಬುವರು ಒತ್ತಾಯಿಸಿದರು.

‘ಕೋವಿಡ್ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈಗಾಗಲೇ ಲಸಿಕೆಯೂ ಬಂದಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಹೆಚ್ಚು ಜನ ಪ್ರಯಾಣಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ, ಚಿತ್ರಮಂದಿರಗಳಲ್ಲಿಯೂ ಹೆಚ್ಚು ಜನ ಸೇರುತ್ತಿದ್ದಾರೆ. ಆದರೆ, ಮೆಟ್ರೊ ನಿಲ್ದಾಣಗಳಲ್ಲಿ ಮಾತ್ರ ಟೋಕನ್ ವಿತರಿಸುತ್ತಿಲ್ಲ ಎಂಬುದು ವಿಚಿತ್ರ ಎನಿಸುತ್ತದೆ’ ಎಂದು ಪ್ರಯಾಣಿಕ ವಿಜಯ್‌ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ಗೆ ಹಲವು ಬಾರಿ ಕರೆ ಮಾಡಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು