‘ಬೀದಿ ನಾಯಿಗಳು ಆಹಾರಕ್ಕಾಗಿ ಮಕ್ಕಳು ಹಾಗೂ ವೃದ್ಧರ ಮೇಲೆ ಎರಗುತ್ತಿವೆ. ಅವುಗಳಿಗೆ ಆಹಾರ ನೀಡುವ ಗುಂಪೇ ಇದೆ. ಕೋಳಿ ಮಾಂಸ ಮೀನು ಮಾಂಸ ಮೂಳೆ ಸೇರಿದಂತೆ ಎಲ್ಲೆಲ್ಲಿಂದಲೋ ತಂದು ಕೆಲವು ಬೀದಿ ನಾಯಿಗಳಿಗೆ ಹಾಕುತ್ತಾರೆ. ಕೆಲವು ಪ್ರದೇಶಗಳಲ್ಲಿ ನಿತ್ಯವೂ ಬಿಸ್ಕತ್ ಹಾಕುವುದು ಸಾಮಾನ್ಯವಾಗಿದೆ. ಹೀಗೆ ಸಿಗುವ ಆಹಾರ ಸಿಗದಾಗ ಬೀದಿ ನಾಯಿಗಳು ನಾಗರಿಕರ ಮೇಲೆ ದಾಳಿ ಮಾಡುತ್ತಿವೆ. ಅವುಗಳಿಗೆ ಆಹಾರ ಹಾಕದಿದ್ದರೆ ಬೇರೆ ಪ್ರದೇಶಗಳಿಗೆ ಹೋಗುತ್ತವೆ ಎಂದು ಹಲವು ಬಾರಿ ಹೇಳುತ್ತಿದ್ದೇವೆ. ಆದರೆ ಯಾರೂ ಕೇಳುತ್ತಿಲ್ಲ. ಬಿಬಿಎಂಪಿಯೇ ಅವರ ಬೆಂಬಲಕ್ಕೆ ನಿಂತಿದೆ. ₹2 ಕೋಟಿ ವೆಚ್ಚ ಮಾಡಿ ಬೀದಿ ನಾಯಿಗಳಿಗೆ ಕೋಳಿ ಮಾಂಸ ಸೇರಿದಂತೆ ಪೌಷ್ಟಿಕ ಆಹಾರ ನೀಡಲು ಮುಂದಾಗಿದೆ. ಇದರ ಬದಲು ಬೀದಿ ನಾಯಿಗಳ ಹಾವಳಿಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಿ’ ಎಂದು ನಾಗರಿಕರಾದ ಶ್ರೀನಿವಾಸ್ ಜಗದೀಶ್ ಶರ್ಮಿಳಾ ಉಮಾ ಅವರು ಆಗ್ರಹಿಸಿದರು.
ಮತ್ತಿಕೆರೆಯಲ್ಲಿ ಇರಿಸಲಾಗಿದ್ದ ‘ಟ್ರ್ಯಾಪ್ ಕೇಜ್’ನಲ್ಲಿ ಸಿಲುಕಿದ ಬೀದಿ ನಾಯಿಗಳು
ದೂರಿನ ಮೇಲೆ ಕ್ರಮ: ಬಿಬಿಎಂಪಿ
‘ಬೀದಿ ನಾಯಿಗಳ ಕಡಿತ ಪ್ರಕರಣಗಳ ಬಗ್ಗೆ ದಾಖಲಾಗುವ ದೂರಿನಂತೆ ಕ್ರಮ ಕ್ರಮ ಕೈಗೊಳ್ಳಲಾಗುತ್ತಿದೆ. ಆ ಪ್ರದೇಶಗಳಿಗೆ ನಮ್ಮ ವೈದ್ಯರ ತಂಡ ಭೇಟಿ ನೀಡಿ ವ್ಯಗ್ರ ಬೀದಿ ನಾಯಿಗಳನ್ನು ಹಿಡಿಯುವ ಕೆಲಸ ಮಾಡುತ್ತದೆ. ತಕ್ಷಣಕ್ಕೆ ಸಿಗದ ಬೀದಿ ನಾಯಿಗಳನ್ನು ಹಿಡಿಯಲು ಬೋನ್‌ಗಳನ್ನೂ ಹಿಡಲಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು. ‘ವ್ಯಗ್ರ ಅಥವಾ ಕಚ್ಚುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಬೀದಿ ನಾಯಿಗಳನ್ನು ಹಿಡಿದು ಅವುಗಳನ್ನು ನಿಗಾ ಕೇಂದ್ರಗಳಲ್ಲಿ ಇರಿಸಲಾಗುತ್ತದೆ. ವೈದ್ಯರು ಅವುಗಳಿಗೆ ಚಿಕಿತ್ಸೆ ನೀಡುತ್ತಾರೆ. ಅವುಗಳು ಸಹಜ ಸ್ಥಿತಿಗೆ ಬಂದಿವೆ ಎಂದು ವೈದ್ಯರು ದೃಢೀಕರಿಸಿದ ಮೇಲೆ ಅವುಗಳನ್ನು ಬಿಡಲಾಗುತ್ತದೆ’ ಎಂದರು.
ಹೆಬ್ಬಾಳದಲ್ಲಿ ‘ಟ್ರ್ಯಾಪ್ ಕೇಜ್’ನಲ್ಲಿ ಸಿಲುಕಿದ ಬೀದಿ ನಾಯಿಗಳು
‘ಆಶ್ರಯ ಕೇಂದ್ರ’ಗಳಿಗೆ ಬೇಕು ನೂರಾರು ಎಕರೆ!
ದೆಹಲಿಯ ಎಲ್ಲ ಪ್ರದೇಶಗಳಲ್ಲಿರುವ ಬೀದಿ ನಾಯಿಗಳನ್ನು ‘ಆಶ್ರಯ ಕೇಂದ್ರ’ಕ್ಕೆ ಸ್ಥಳಾಂತರಿಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ಬೆಂಗಳೂರಿನಲ್ಲೂ ಪಾಲಿಸಿದರೆ ಸಾವಿರಾರು ‘ಆಶ್ರಯ ಕೇಂದ್ರ’ಗಳನ್ನು ಬಿಬಿಎಂಪಿ ಸ್ಥಾಪಿಸಬೇಕಾಗುತ್ತದೆ. ವ್ಯಗ್ಯ ಹಾಗೂ ಕಚ್ಚುವ ನಾಯಿಗಳನ್ನು ಇರಿಸಿ ಅವುಗಳಿಗೆ ಚಿಕಿತ್ಸೆ ನೀಡಲು ‘ನಿಗಾ ಕೇಂದ್ರ’ಗಳನ್ನೇ ಬಿಬಿಎಂಪಿ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ದಾಸರಹಳ್ಳಿಯಲ್ಲಿ ಸುಮಾರು 50 ಬೀದಿ ನಾಯಿಗಳನ್ನು ಇರಿಸುವ ‘ನಿಗಾ ಕೇಂದ್ರ’ವಿದೆ. ಯಲಹಂಕ ಹಾಗೂ ಆರ್.ಆರ್. ನಗರದಲ್ಲಿ ಇದೇ ರೀತಿಯ ‘ನಿಗಾ ಕೇಂದ್ರ’ಗಳು ನಿರ್ಮಾಣವಾಗುತ್ತಿವೆ. ಇಲ್ಲಿ ಸುಮಾರು 500 ನಾಯಿಗಳಿಗೆ ಅವಕಾಶವಿದೆ. ವ್ಯಗ್ರ ನಾಯಿಗಳನ್ನೇ ನಿಗಾ ವಹಿಸಲು ಬಿಬಿಎಂಪಿಯಲ್ಲಿ ಸ್ಥಳಾವಕಾಶದ ಕೊರತೆ ಇದೆ. ಇನ್ನು ಎಲ್ಲ 2.79 ಲಕ್ಷ ಬೀದಿ ನಾಯಿಗಳಿಗೆ ‘ಆಶ್ರಯ ಕೇಂದ್ರ’ ಸ್ಥಾಪಿಸಬೇಕಾದರೆ ನೂರಾರು ಎಕರೆ ಭೂಮಿ ಬೇಕಾಗುತ್ತದೆ. ನಿರ್ಮಾಣಕ್ಕೆ ಸಾವಿರಾರು ಕೋಟಿ ಬೇಕಾಗುತ್ತದೆ ಎನ್ನಲಾಗಿದೆ.