ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ನಿರ್ವಹಣೆಗೆ ಕಸುವು ತುಂಬಲು ಬೇಕಿದೆ ಕಟ್ಟುನಿಟ್ಟಿನ ನಿಯಮ

Last Updated 13 ಫೆಬ್ರುವರಿ 2021, 18:44 IST
ಅಕ್ಷರ ಗಾತ್ರ

ಬೆಂಗಳೂರು: ನಗರವನ್ನು ಕಾಡುತ್ತಿರುವ ಮತ್ತೊಂದು ಕೊನೆ ಮೊದಲಿಲ್ಲದ ಸಮಸ್ಯೆಯೆಂದರೆ ಅದು, ಕಸ ವಿಲೇವಾರಿ. ಬಿಬಿಎಂಪಿ ಏನೇ ತಿಪ್ಪರಲಾಗ ಹಾಕಿದರೂ ಕಸ ವಿಲೇವಾರಿಯನ್ನು ಹದ್ದುಬಸ್ತಿಗೆ ತರಲಾಗುತ್ತಿಲ್ಲ. ‘ಕಸ ನಿರ್ವಹಣೆ ಬೈಲಾ 2020’ ಜಾರಿಯಾದ ಬಳಿಕವೂ ಪಾಲಿಕೆಯ ಪಾಲಿಗೆ ಈ ಸಮಸ್ಯೆ ಕಗ್ಗಂಟಾಗಿ ಉಳಿದಿದೆ. ಈ ಸಮಸ್ಯೆಗೆ ಕಡಿವಾಣ ಹಾಕಬಲ್ಲ ಅಂಶಗಳನ್ನು ಬಿಬಿಎಂಪಿ ಕಾಯ್ದೆಯಲ್ಲೇ ಅಳವಡಿಸುವ ಅವಕಾಶವನ್ನು ಸರ್ಕಾರ ಕೈಚೆಲ್ಲಿದೆ.

ಕೇಂದ್ರ ಸರ್ಕಾರವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನದ ಮೇರೆಗೆ 2016ರಲ್ಲಿ ರೂಪಿಸಿರುವ ‘ಕಸ ನಿರ್ವಹಣೆ ಮಾರ್ಗಸೂಚಿ’ಗಳ ಪ್ರಕಾರ, ಯಾವುದೇ ಮಿಶ್ರಕಸವನ್ನು ಭೂಭರ್ತಿ ಕೇಂದ್ರಗಳಲ್ಲಿ ವಿಲೇ ಮಾಡುವಂತಿಲ್ಲ. ಈ ನಿಯಮ ಜಾರಿಯಾಗಿ ಅದಾಗಲೇ ಐದು ವರ್ಷಗಳು ಉರುಳಿದ ಬಳಿಕವೂ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ ಉತ್ಪತ್ತಿಯಾಗುವ ಬಹುಪಾಲು ಕಸ ಭೂಭರ್ತಿ ಕೇಂದ್ರಗಳನ್ನು ತಲುಪುತ್ತಿದೆ. ಸರ್ಕಾರದ ನೆರವಿನಿಂದ ಪಾಲಿಕೆಯೇ ಸ್ಥಾಪಿಸಿರುವ ಏಳು ಕಸ ಸಂಸ್ಕರಣಾ ಘಟಕಗಳು ತಮ್ಮ ಸಾಮರ್ಥ್ಯದ ಕಾಲು ಭಾಗದಷ್ಟು ಕಸವನ್ನೂ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುತ್ತಿಲ್ಲ.

ಒಂದು ಕಾಲದಲ್ಲಿ ಮಹಾನಗರಗಳಿಗೆ ಮಾದರಿಯಾಗಬಲ್ಲ ಕಸ ವಿಲೇವಾರಿ ವ್ಯವಸ್ಥೆ ಹೊಂದಿದ್ದ ಬೆಂಗಳೂರಿಗೆ ಕಸದ ಕಾರಣಕ್ಕಾಗಿಯೇ ಕಳಂಕ ಅಂಟಿಕೊಂಡಿದೆ. ಸರ್ಕಾರದ ಬುಡವನ್ನೇ ನಡುಗಿಸಬಲ್ಲಷ್ಟು ಕಸದ ಮಾಫಿಯಾ ಬಲಿಷ್ಠವಾಗಿರುವಾಗ ಈ ಕಳಂಕವನ್ನು ತೊಳೆಯುವುದು ಅಷ್ಟು ಸುಲಭವಲ್ಲ. ಕಸ ವಿಲೇವಾರಿಯನ್ನು ಹದ್ದುಬಸ್ತಿಗೆ ತರಲು ಕೆಲವು ಮೇಯರ್‌ಗಳು ಪ್ರಯತ್ನಪಟ್ಟಿದ್ದರು. ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ಸಹಕಾರ ಸಿಗದೆ ಈ ಪ್ರಯತ್ನಗಳು ಕೊನೆ ತಲುಪಲೇ ಇಲ್ಲ. ಕಸ ವಿಲೇವಾರಿ ಗುತ್ತಿಗೆಯನ್ನು ಟೆಂಡರ್‌ ಕರೆದೇ ನೀಡಬೇಕು. ಇದರಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಎಷ್ಟೇ ಕೂಗು ಎದ್ದರೂ ಅದನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಹೈಕೋರ್ಟ್‌ನ ಸ್ಪಷ್ಟ ನಿರ್ದೇಶನದ ಹೊರತಾಗಿಯೂ ಈಗಲೂ 198 ವಾರ್ಡ್‌ಗಳ ಪೈಕಿ 68ಕ್ಕಿಂತ ಹೆಚ್ಚು ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಟೆಂಡರ್‌ ಅನುಷ್ಠಾನ ಸಾಧ್ಯವಾಗಿಲ್ಲ.

ಕಸ ನಿರ್ವಹಣೆ ವ್ಯವಸ್ಥೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಬಿಬಿಎಂಪಿ ಕಾಯ್ದೆಯಲ್ಲೇ ಅಳವಡಿಸುವ ಅಗತ್ಯವಿದೆ. ಕಸ ನಿವಹಣೆ ವ್ಯವಸ್ಥೆ ಹಾದಿ ತಪ್ಪಲು ಅಧಿಕಾರಿಗಳೂ ಕಾರಣ. ಅಧಿಕಾರಿಗಳಿಗೆ ಉತ್ತರದಾಯಿತ್ವ ನಿಗದಿಪಡಿಸುವ ಅಂಶಗಳನ್ನು ಈ ಕಾಯ್ದೆಯಲ್ಲೇ ಅಳವಡಿಸದೇ ಹೋದರೆ ಕಸ ನಿರ್ವಹಣೆಗೆ ಕಸುವು ತುಂಬುವುದು ಕಷ್ಟ ಎನ್ನುತ್ತಾರೆ ನಗರ ಯೋಜನಾ ತಜ್ಞರು.

‘ಕಸದ ವಿಲೇವಾರಿ ವ್ಯವಸ್ಥೆಗೆ ಸಂಬಂಧಿಸಿದಂತೆ ಕಠಿಣ ಕಾನೂನು ಇಲ್ಲದಿರುವುದು ಅಧಿಕಾರಿಗಳನ್ನಷ್ಟೇ ಅಲ್ಲ, ನ್ಯಾಯಾಲಯದ ಕೈಯನ್ನೂ ಕಟ್ಟಿ ಹಾಕಿದ್ದನ್ನು ನಾವು ಕಂಡಿದ್ದೇವೆ. ಕಟ್ಟುನಿಟ್ಟಾದ ನಿಯಮಗಳನ್ನು ಬಿಬಿಎಂಪಿ ಕಾಯ್ದೆಯಲ್ಲೇ ಸೇರ್ಪಡೆಗೊಳಿಸುವ ತುರ್ತು ಅಗತ್ಯವಿದೆ’ ಎನ್ನುತ್ತಾರೆ ಸೆಂಟರ್ ಫಾರ್‌ ಅರ್ಬನ್‌ ಗವರ್ನನ್ಸ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್‌ ಸಂಸ್ಥೆಯ ನಿರ್ದೇಶಕ ಪಿ.ಜಿ.ಶೆಣೈ.

‘ಕೇಂದ್ರ ಸರ್ಕಾರ 2016ರಲ್ಲಿ ರೂಪಿಸಿರುವ ಕಸ ನಿರ್ವಹಣಾ ಮಾರ್ಗಸೂಚಿಗಳನ್ನು ಪಾಲಿಸುವ ಬದ್ಧತೆಯನ್ನು ಹೊಂದಿರಬೇಕು. ನಿರ್ವಹಣೆಗೆ ಸಂಬಂಧಿಸಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಕಾಲಕಾಲಕ್ಕೆ ರೂಪಿಸುವ ನೀತಿಗಳ ಅನ್ವಯ ಕಸ ನಿರ್ವಹಣೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು’ ಎಂಬುದಾಗಿ ಹೊಸ ಕಾಯ್ದೆಯ ಸೆಕ್ಷನ್ 285ರಲ್ಲಿ ಉಲ್ಲೇಖಿಸಲಾಗಿದೆ. ಕೇವಲ ಈ ರೀತಿ ಉಲ್ಲೇಖಿಸುವುದರಿಂದ ಯಾವ ಸಾಧನೆಯೂ ಆಗುವುದಿಲ್ಲ. 2016ರ ಕಸ ನಿರ್ವಹಣೆ ನೀತಿಯ ಆಶಯಗಳನ್ನು, ಅದರಂತೆ ಪಾಲಿಕೆಯ ಜವಾಬ್ದಾರಿಗಳನ್ನು ಹೊಸ ಕಾಯ್ದೆಯಲ್ಲೇ ನೇರವಾಗಿ ಅಳವಡಿಸಿದರೆ ಕಸದ ಮಾಫಿಯಾ ಮಟ್ಟ ಹಾಕಲು ಶಕ್ತಿಶಾಲಿ ಅಸ್ತ್ರ ಸಿಗುತ್ತಿತ್ತು’ ಎನ್ನುತ್ತಾರೆ ಸೆಂಟರ್ ಫಾರ್‌ ಅರ್ಬನ್‌ ಗವರ್ನನ್ಸ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್‌ ಸಂಸ್ಥೆಯ ನಿರ್ದೇಶಕ ಸಿ.ಆರ್.ರವೀಂದ್ರ.

‘ಕಸ ನಿರ್ವಹಣೆ ಬೈಲಾವು 1986ರ ಪರಿಸರ ಸಂರಕ್ಷಣಾ ಕಾಯ್ದೆಗೆ ಬದ್ಧವಾಗಿರುವುದನ್ನು ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 285ರಲ್ಲಿ ಖಚಿತಪಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದಂತೆ ತಡೆಯುವುದು, ಉಗುಳಿದರೆ ದಂಡ ವಿಧಿಸುವುದು ಮುಂತಾದ ಅಂಶಗಳು ಬೈಲಾದಲ್ಲಿವೆ. ಇಂತಹ ಕೃತ್ಯಗಳಿಗೆ ಭಾರತೀಯ ದಂಡ ಸಂಹಿತೆಯ 297ನೇ ಸೆಕ್ಷನ್‌ ಪ್ರಕಾರ ದಂಡ ವಿಧಿಸುವ ಅವಕಾಶವಾಗುವಂತಹ ಅಂಶಗಳನ್ನು ಬಿಬಿಎಂಪಿ ಕಾಯ್ದೆಯಲ್ಲಿ ಅಡಕಗೊಳಿಸಿದರೆ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವ ವ್ಯವಸ್ಥೆ ಇನ್ನಷ್ಟು ಶಕ್ತಿಶಾಲಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ’ ಎಂದು ವಿವರಿಸಿದರು.

‘ಪಾಲಿಕೆ ಅಧಿಕಾರಿಗಳಿಗೂ ಹೊಣೆ ನಿಗದಿಯಾಗಲಿ’

‘ಬಿಬಿಎಂಪಿ ಈಗ ರೂಪಿಸಿರುವ ಬೈಲಾದಲ್ಲಿ ಕಸವನ್ನು ಮೂಲದಲ್ಲೇ ವಿಂಗಡಿಸುವ ಹೊಣೆಯನ್ನು ಸಾರ್ವಜನಿಕರಿಗೆ ಬಿಟ್ಟುಬಿಡಲಾಗಿದೆ. ಕಸ ನಿರ್ವಹಣೆ ಸಮರ್ಪಕವಾಗಿ ನಡೆಯದಿದ್ದರೆ ಅದರ ಎಲ್ಲ ಜವಾಬ್ದಾರಿಗಳನ್ನೂ ಗುತ್ತಿಗೆದಾರರಿಗೆ ವರ್ಗಾಯಿಸಲಾಗುತ್ತದೆ. ಅಧಿಕಾರಿಗಳು ಗುತ್ತಿಗೆ ಷರತ್ತುಗಳನ್ನು ರೂಪಿಸುವಾಗ ಎಲ್ಲೂ ತಮಗೆ ಯಾವುದೇ ಜವಾಬ್ದಾರಿಗಳು ಇಲ್ಲದ ಹಾಗೆ ಎಚ್ಚರವಹಿಸುತ್ತಾರೆ’ ಎಂದು ರವೀಂದ್ರ ಹೇಳಿದರು,

‘ಕಸದ ಸಮಸ್ಯೆ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಬಿಎಂಪಿಗೆ ನೋಟಿಸ್‌ ನೀಡುವುದು, ಬಿಬಿಎಂಪಿ ಅಧಿಕಾರಿಗಳು ಗುತ್ತಿಗೆದಾರರಿಗೆ ನೋಟಿಸ್‌ ನೀಡುವುದು ಅಥವಾ ಅವರನ್ನು ಕಪ್ಪುಪಟ್ಟಿಗೆ ಸೇರಿಸುವುದು ದಶಕಗಳಿಂದ ನಡೆಯುತ್ತಾ ಬಂದಿದೆ. ಆದರೆ, ವ್ಯವಸ್ಥೆ ಮಾತ್ರ ಇನ್ನೂ ಸುಧಾರಣೆ ಆಗಿಲ್ಲ. ಕಸ ವಿಲೇವಾರಿಗೆ ಸುಸ್ಥಿರ ವ್ಯವಸ್ಥೆ ರೂಪಿಸಲು ವಿಫಲವಾಗುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧವೂ ನಿರ್ದಿಷ್ಟ ಕ್ರಮಕೈಗೊಳ್ಳುವಂತಹ ಕಠಿಣ ಕಾನೂನು ರೂಪಿಸಬೇಕು. ಇದಲ್ಲದೇ ಹೋದರೆ ಇನ್ನೂ ನೂರು ವರ್ಷಗಳ ಬಳಿಕವೂ ಕಸ ನಿರ್ವಹಣೆಯ ಸಮಸ್ಯೆ ಅರಣ್ಯರೋದನವಾಗಿಯೇ ಮುಂದುವರಿಯಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಅಂಕಿ ಅಂಶ

4,400 ಟನ್‌:ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ ಉತ್ಪಾದನೆಯಾಗುವ ಕಸ (ಸಗಟು ಕಸ ಹೊರತಾಗಿ)

3000 ಟನ್‌: ನಿತ್ಯ ಭೂಭರ್ತಿ ಕೇಂದ್ರವನ್ನು ಸೇರುರುತ್ತಿರುವ ಮಿಶ್ರ ಕಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT