ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶುದ್ಧ ಕುಡಿವ ನೀರಿನಲ್ಲಿ ವ್ಯತ್ಯಾಸವಾದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

Published 3 ಜುಲೈ 2024, 16:24 IST
Last Updated 3 ಜುಲೈ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಾಸವಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ ಆಯೋಜಿಸಿದ್ದ ‘ಭೂ ಪರಿವರ್ತನೆ ಮತ್ತು ಒಣಭೂಮಿ ನಿರ್ವಹಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯಕ್ಕೂ ನೈರ್ಮಲ್ಯಕ್ಕೂ ನೇರ ಸಂಬಂಧವಿದೆ. ಸ್ವಚ್ಛತೆ ಇದ್ದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ರಾಜ್ಯದಲ್ಲಿ ಇತ್ತೀಚೆಗೆ ಕಲುಷಿತ ನೀರಿನಿಂದ ಅನಾಹುತಗಳಾಗುತ್ತಿವೆ. ಶುದ್ಧ ಕುಡಿಯುವ ನೀರಿನ ಪೂರೈಕೆ ಸರ್ಕಾರದ ಕರ್ತವ್ಯ ಎಂದರು.

ಡೆಂಗಿ ಪ್ರಕರಣಗಳೂ ಹೆಚ್ಚಾಗುತ್ತಿದ್ದು, ರೋಗ ನಿಯಂತ್ರಣಕ್ಕೆ ನಗರಪಾಲಿಕೆ, ಆರೋಗ್ಯ ಇಲಾಖೆ, ಪೌರಾಡಳಿತ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರೂ ಕೈಜೋಡಿಸಿ, ಸ್ವಚ್ಛತೆ ಕಾಪಾಡಿಕೊಂಡರೆ ರೋಗ ನಿರ್ಮೂಲನೆಯಾಗುತ್ತದೆ ಎಂದು ಹೇಳಿದರು.

‘ನಿಸರ್ಗವನ್ನು ಪ್ರೀತಿಸುವ ಮನಸನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ನಿಸರ್ಗ ಕಾಪಾಡುವುದು ಕಷ್ಟವೇನಿಲ್ಲ. ಅದನ್ನು ಪ್ರೀತಿಸುವ ಪ್ರವೃತ್ತಿ ಅಗತ್ಯ. ಕಳೆದ 20 ವರ್ಷಗಳಲ್ಲಿ ಪ್ರವಾಹ ಹಾಗೂ ಬರಗಾಲವನ್ನು ನಾವು ಎದುರಿಸುತ್ತಿದ್ದು ಇದರ ಕಾರಣಗಳ ಬಗ್ಗೆ ಸಂಶೋಧನೆಗಳು ಅಗತ್ಯ.
ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಅರಣ್ಯ ಇಲಾಖೆ ಗಮನಹರಿಸಬೇಕು’ ಎಂದು ಸೂಚಿಸಿದರು.

ಗುರಿ ಮೀರಿದ ಸಾಧನೆ: ‘ರಾಜ್ಯದ ಹಸಿರು ವ್ಯಾಪ್ತಿ ಹೆಚ್ಚಿಸಲು ಕಳೆದ ವರ್ಷ 5 ಕೋಟಿ ಸಸಿ ನೆಡುವುದಾಗಿ ಘೋಷಣೆ ಮಾಡಲಾಗಿತ್ತು. ಅರಣ್ಯ ಇಲಾಖೆ 5.43 ಕೋಟಿ ಸಸಿ ನೆಟ್ಟು ಗುರಿ ಮೀರಿದ ಸಾಧನೆ ಮಾಡಿದೆ. ಆದರೆ, ‘ಹೀಗೆ ನೆಟ್ಟ ಸಸಿಗಳ ಪೈಕಿ ಎಷ್ಟು ಬದುಕುಳಿದಿವೆ’ ಎಂದು ಮುಖ್ಯಮಂತ್ರಿಯವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ‘ಆಡಿಟ್‌ ರಿಪೋರ್ಟ್‌’ ಅನ್ನು ಆಗಸ್ಟ್‌ ಅಂತ್ಯದೊಳಗೆ ತಯಾರಿಸಲಾಗುತ್ತದೆ.  ಅಗತ್ಯ ಬಿದ್ದರೆ ‘ಹೊರಗಿನವರಿಂದ ಪರಿಶೀಲನೆ’ಯನ್ನೂ ಮಾಡಿಸಲಾಗುವುದು’ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಪ್ರತಿ ವರ್ಷ 5 ಕೋಟಿ ಸಸಿಯನ್ನು ನೆಟ್ಟು, ಮುಂದಿನ ಮೂರು ವರ್ಷದಲ್ಲಿ 15 ಕೋಟಿ ಸಸಿಗಳನ್ನು ನೆಡುವ ಮೂಲಕ ಶೇ 32ರಷ್ಟು ಹಸಿರು ಹೊದಿಕೆಯ ಗುರಿಯನ್ನು ಸಾಧಿಸಲಾಗುತ್ತದೆ ಎಂದರು.

Cut-off box - 12 ಜಾಗೃತಿ ಮಾಸಾಚರಣೆ ಪ್ಲಾಸ್ಟಿಕ್ ಇ-ತ್ಯಾಜ್ಯ ಜೈವಿಕ ವೈದ್ಯಕೀಯ ತ್ಯಾಜ್ಯ ಘನ ತ್ಯಾಜ್ಯ ನಿರ್ವಹಣೆ ಅತಿ ದೊಡ್ಡ ಸವಾಲಾಗಿದೆ. ಈ ಎಲ್ಲ ತ್ಯಾಜ್ಯಗಳ ನಿಯಂತ್ರಣ ನಿರ್ವಹಣೆಗೆ ಪ್ರತಿ ತಿಂಗಳಿಗೆ ಒಂದರಂತೆ 12 ಜಾಗೃತಿ ಮಾಸಾಚರಣೆ ನಡೆಸಲಾಗುವುದು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ಜನವರಿಯಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿಯಂತ್ರಣ ಫೆಬ್ರುವರಿಯಲ್ಲಿ ಇ-ತ್ಯಾಜ್ಯ ನಿಯಂತ್ರಣ ಮಾರ್ಚ್‌ನಲ್ಲಿ ಶುದ್ಧ ಜಲ ಸುರಕ್ಷತೆ ಏಪ್ರಿಲ್‌ನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣ ಮೇನಲ್ಲಿ ಜೀವ-ವೈವಿಧ್ಯ ಮತ್ತು ಪರಿಸರ ಜೂನ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ಪ್ರಕೃತಿ ಪರಿಸರ ಸಂರಕ್ಷಣೆ ಜುಲೈನಲ್ಲಿ ಘನ ತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯ ನಿರ್ವಹಣೆ ಆಗಸ್ಟ್‌ನಲ್ಲಿ ವಾಯುಮಾಲಿನ್ಯ ನಿಯಂತ್ರಣ ಸೆಪ್ಟೆಂಬರ್‌ನಲ್ಲಿ ಪರಿಸರ ಸ್ನೇಹಿ ಗಣಪತಿ ಪೂಜೆಗೆ ಉತ್ತೇಜನ ಮತ್ತು ಪಿಓಪಿ ಮೂರ್ತಿಗಳ ನಿಯಂತ್ರಣ ಅಕ್ಟೋಬರ್‌ನಲ್ಲಿ ಜಲಮಾಲಿನ್ಯ ತಡೆ ನವೆಂಬರ್‌ನಲ್ಲಿ ಪರಿಸರ ಸ್ನೇಹಿ ದೀಪಾವಳಿ ಮತ್ತು ಭಾರ ಲೋಹ– ಅಪಾಯಕಾರಿ ರಾಸಾಯನಿಕ ಪಟಾಕಿ ನಿಗ್ರಹ ಹಾಗೂ ಡಿಸೆಂಬರ್‌ನಲ್ಲಿ ಗೃಹಬಳಕೆಯ ಕಲುಷಿತ ನೀರು ನಿಯಂತ್ರಣ ನಿರ್ವಹಣೆ ಮಾಸಾಚರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT