ಗುರುವಾರ , ಜುಲೈ 29, 2021
23 °C
ತನಿಖೆಯ ಸಂದರ್ಭ ಹಲ್ಲೆ ನಡೆಸಿದ ಆರೋಪ

ಪೊಲೀಸ್‌ ಸಿಬ್ಬಂದಿ ವಿರುದ್ಧದ ಪ್ರಕರಣ ಕೈಬಿಟ್ಟ ‘ಸುಪ್ರೀಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಕರಣವೊಂದರ ತನಿಖೆಯ ಸಂದರ್ಭ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಐಪಿಎಸ್‌ ಅಧಿಕಾರಿ ಡಿ.ದೇವರಾಜ ಹಾಗೂ ಇತರ ಸಿಬ್ಬಂದಿ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಕೈಬಿಟ್ಟಿದೆ.

‘ಪೊಲೀಸ್‌ ಸಿಬ್ಬಂದಿಯು ಕರ್ತವ್ಯ ನಿರ್ವಹಣೆ ವೇಳೆ ಅಧಿಕಾರದ ವ್ಯಾಪ್ತಿ ಮೀರಿ ವರ್ತಿಸಿದ ಆರೋಪ ಎದುರಿಸಿದ್ದರೂ, ಸರ್ಕಾರದ ಅನುಮತಿ ಇಲ್ಲದೆ ಅವರನ್ನು ವಿಚಾರಣೆಗೆ ಒಳಪಡಿಸಲಾಗದು. ಪೊಲೀಸರು ಸಮರ್ಥವಾಗಿ ಕರ್ತವ್ಯ ನಿರ್ವಹಿಸಲು ಈ ಕ್ರಮವು ವಿಶ್ವಾಸ ಮೂಡಿಸುತ್ತದೆ’ ಎಂದುನ್ಯಾಯಮೂರ್ತಿಗಳಾದ ಆರ್‌.ಭಾನುಮತಿ ಹಾಗೂ ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

‘ಅಧಿಕೃತ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದ ಯಾವುದೇ ಕಾರ್ಯದಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿಯನ್ನು ಕಿರುಕುಳ, ಪ್ರತೀಕಾರ ಹಾಗೂ ಕ್ಷುಲ್ಲಕ ವಿಚಾರಣೆ ಎದುರಿಸದಂತೆ ರಕ್ಷಿಸುವುದು ಕಡ್ಡಾಯ. ಅವರ ವಿರುದ್ಧ ವಿಚಾರಣೆ ನಡೆಸುವ ಮೊದಲು ಸರ್ಕಾರದ ಅನುಮತಿಯೂ ಕಡ್ಡಾಯ’ ಎಂದು ಪೀಠ ಆದೇಶ ನೀಡಿದೆ.

ವಿಚಾರಣೆಗೆ ತಡೆ ಕೋರಿ ಸಲ್ಲಿಸಲಾದ ಮೇಲ್ಮನವಿಯನ್ನು 2018ರ ಜನವರಿ 31ರಂದು ತಳ್ಳಿ ಹಾಕಿದ್ದ ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಅರ್ಜಿದಾರರ ಪರ ಹಿರಿಯ ವಕೀಲರಾದ ಸಜನ್‌ ಪೂವಯ್ಯ, ಬಾಲಾಜಿ ಶ್ರೀನಿವಾಸನ್ ವಾದ ಮಂಡಿಸಿದರು.

2012ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಪ್ರಕರಣದ ತನಿಖೆಯ ವೇಳೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಓವೈಸ್ ಶಬ್ಬೀರ್ ಹುಸೇನ್ ಎಂಬುವರು ಬೆಂಗಳೂರಿನ ಅಪರಾಧ ದಳದ ಅಂದಿನ ಡಿಸಿಪಿಯಾಗಿದ್ದ ಡಿ.ದೇವರಾಜ, ಸಿಬ್ಬಂದಿಯಾದ ಎಚ್.ಸಿದ್ದಪ್ಪ, ಆರ್.ಪುನೀತ್ ಕುಮಾರ್, ವಿ.ಆರ್. ದೀಪಕ್, ಹನುಮೇಶ್ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು