ಬೆಂಗಳೂರು: ಹೀಲಿಯಂ ಅನಿಲ ಸೇವಿಸಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರದ ನಿವಾಸಿ ಯಾಗ್ನಿಕ್(24) ಆತ್ಮಹತ್ಯೆ ಮಾಡಿಕೊಂಡವರು.
ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಮೊಬೈಲ್ ಪಾಸ್‌ವರ್ಡ್ ಲಾಕ್ ಆಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್) ರವಾನೆ ಮಾಡಲಾಗಿದೆ. ಲಾಕ್ ತೆಗೆದು ಪರಿಶೀಲಿಸಿದ ಬಳಿಕ ಆತ್ಮಹತ್ಯೆಗೆ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದರು.
ಯಾಗ್ನಿಕ್ ಅವರು ವಿಪ್ರೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಿಂದಲೇ ಕೆಲಸ ಮಾಡುವ ಅವಕಾಶವಿದ್ದ ಕಾರಣಕ್ಕೆ ಕೆಲವು ತಿಂಗಳಿಂದ ಸಕಲೇಶಪುರದಲ್ಲೇ ಇದ್ದರು. ಈ ಮಧ್ಯೆ ಎಂ.ಟೆಕ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಪರೀಕ್ಷೆ ನಿಮಿತ್ತ ಶುಕ್ರವಾರ ನಗರಕ್ಕೆ ಬಂದಿದ್ದರು. ನೀಲಾದ್ರಿ ರಸ್ತೆಯಲ್ಲಿರುವ ರಾಯಲ್ ಇನ್ ಹೋಟೆಲ್‌ನಲ್ಲಿ ಕೊಠಡಿ ಪಡೆದುಕೊಂಡಿದ್ದರು. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಯಾಗ್ನಿಕ್ ಕೊಠಡಿ ಖಾಲಿ ಮಾಡಬೇಕಿತ್ತು. ಆದರೆ, ಮಧ್ಯಾಹ್ನವಾದರೂ ಬಾಗಿಲು ತೆರೆದಿರಲಿಲ್ಲ. ಇದರಿಂದ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಎಷ್ಟು ಕರೆದರೂ ಬಾಗಿಲು ತೆರವು ಮಾಡಿರಲಿಲ್ಲ. ಬಳಿಕ ಮಾಸ್ಟರ್ ಕೀ ಬಳಸಿ ಕೋಣೆ ತೆರೆದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಎರಡು ದಿನಗಳ ಹಿಂದೆ ಸ್ನೇಹಿತನ ಮನೆಗೆ ಹೋಗಿದ್ದ ಯಾಗ್ನಿಕ್, ಚಾರಣಕ್ಕೆ ಹೋಗಬೇಕೆಂದು ಸುಳ್ಳು ಹೇಳಿ ಸುಮಾರು ಮೂರುವರೆ ಅಡಿ ಉದ್ದದ್ದ ಬ್ಯಾಗ್ ಪಡೆದುಕೊಂಡಿದ್ದರು. ಅಲ್ಲಿಂದ ಪೀಣ್ಯಕ್ಕೆ ತೆರಳಿ ಅಲ್ಲಿ ಹೀಲಿಯಂ ಅನಿಲ ತುಂಬಿದ ಸಿಲಿಂಡರ್ ಖರೀದಿಸಿ ಕೊಠಡಿಗೆ ಬಂದಿದ್ದರು. ಹೋಟೆಲ್‌ನ ಎದುರು ಅಳವಡಿಕೆ ಮಾಡಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದೊಡ್ಡದಾದ ಬ್ಯಾಗ್ ಅನ್ನು ತೆಗೆದುಕೊಂಡು ತೆರಳುತ್ತಿರುವ ದೃಶ್ಯ ಸೆರೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಯಾಗ್ನಿಕ್ ಅವರು ಹೀಲಿಯಂ ಅನಿಲ ತುಂಬಿದ ಸಿಲಿಂಡರ್‌ಗೆ ಸಂಪರ್ಕಿಸಿದ್ದ ಪೈಪ್ ಅನ್ನು ತನ್ನ ಬಾಯಿಗೆ ಇಟ್ಟುಕೊಂಡಿದ್ದು, ಪ್ಲಾಸ್ಟಿಕ್ ಸುತ್ತಿಕೊಂಡಿದ್ದರು. ಅಲ್ಲದೇ ಸ್ವಲ್ಪವೂ ಅನಿಲ ಸೋರಿಕೆ ಆಗದಂತೆ ಟೇಪ್ ಸಹ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಲಿಯಂ ದೇಹದ ಒಳಗೆ ಹೋಗುತ್ತಿದ್ದಂತೆ ಉಸಿರಾಟದ ಸಮಸ್ಯೆ ಉಂಟಾಗಿ ಮೃತಪಟ್ಟಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಮೃತ ಯುವಕ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಪ್ರೇಮ ವೈಫಲ್ಯದಿಂದ ಅವರು ನೊಂದಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಹೀಲಿಯಂ ಅನಿಲವನ್ನು ಬಲೂನ್‌ಗಳಿಗೆ ಗಾಳಿ ತುಂಬಿಸಲು ಬಳಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.