ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯವರ್ಧನೆಗೆ ಹೊಂದುವ ರಾಗಿ ತಳಿ ಗುರುತಿಸಿ: ಡಾ. ಎಸ್. ವಿ. ಸುರೇಶ್

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ವಿ. ಸುರೇಶ್
Published 14 ಅಕ್ಟೋಬರ್ 2023, 16:06 IST
Last Updated 14 ಅಕ್ಟೋಬರ್ 2023, 16:06 IST
ಅಕ್ಷರ ಗಾತ್ರ

ಬೆಂಗಳೂರು: ‘ರೈತರು ರಾಗಿಯನ್ನು ಬೆಳೆದರೆ ಸಾಲದು, ಅದನ್ನು ಬಳಸುವಂತಾಗಬೇಕು. ರಾಗಿಯ ಮೌಲ್ಯವರ್ಧನೆ ಮಾಡುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕಿದೆ‘ ಎಂದು ಗಾಂಧಿ ಕೃಷಿ ವಿಶ್ವವಿದ್ಯಾಲಯದ(ಜಿಕೆವಿಕೆ) ಕುಲಪತಿ ಡಾ ಎಸ್.ವಿ. ಸುರೇಶ್ ಸಲಹೆ ನೀಡಿದರು.

ಐಸಿಎಆರ್‌, ಜಿಕೆವಿಕೆ, ಸಹಜ ಸಮೃದ್ಧ, ವಾಸನ್, ಆರ್‌ಆರ್‌ಎ ನೆಟ್‌ವರ್ಕ್‌ ಮತ್ತು ಕಾಪ್ಸ್‌ ಫಾರ್ ಎಚ್‌ಡಿ ಸಂಸ್ಥೆಗಳ ಸಹಯೋಗಲ್ಲಿ ವಿವಿಯಲ್ಲಿ ನಡೆದ ‘ಕರ್ನಾಟಕದಲ್ಲಿ ರಾಗಿಯ ಸುಸ್ಥಿರ ಉತ್ಪಾದನಾ ಪದ್ದತಿಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 

‘ಮೌಲ್ಯವರ್ಧಿತ ಪದಾರ್ಥಗಳ ತಯಾರಿಕೆಗೆ ಸೂಕ್ತವಾದ ರಾಗಿ ತಳಿಗಳನ್ನು ಗುರುತಿಸುವ ಮತ್ತು ಅಭಿವೃದ್ದಿ ಪಡಿಸುವ ಕಾರ್ಯವನ್ನು ವಿಜ್ಞಾನಿಗಳು ಕೈ ಗೆತ್ತಿಕೊಳ್ಳಬೇಕು' ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿ ಕೃಷಿ ಸಂಶೋಧನಾ ನಿರ್ದೇಶಕ ಡಾ.ವೆಂಕಟೇಶ್ ' ಬೆಂಗಳೂರು ಕೃಷಿ ವಿ.ವಿ ಇದುವರೆಗೂ 36 ರಾಗಿ ತಳಿಗಳನ್ನು ಬಿಡುಗಡೆ ಮಾಡಿದೆ. ಬದಲಾಗುತ್ತಿರುವ ವಾತಾವರಣಕ್ಕೆ ಅನುಗುಣವಾಗಿ ರಾಗಿ ಸಾಗುವಳಿ ಪದ್ದತಿಗಳನ್ನು ಅಳವಡಿಸಿಕೊಂಡು ಇಳುವರಿಯನ್ನು ಕಾಯ್ದುಕೊಳ್ಳಬೇಕಿದೆ' ಎಂದರು.

ಕೃಷಿ ವಿಜ್ಞಾನಿಗಳಾದ ಡಾ.ಪ್ರಕಾಶ್ ಕಮ್ಮರಡಿ ಮತ್ತು ಡಾ.ಎನ್.ದೇವಕುಮಾರ್ ಮಾತನಾಡಿ, ‘ಸಾಂಪ್ರದಾಯಿಕ ರಾಗಿ ತಳಿಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು. ಗುಳಿ ರಾಗಿ ಪದ್ಧತಿಯಂತಹ  ರೈತ ಮೂಲದ ರಾಗಿಯ ಉತ್ಪಾದನಾ ಪದ್ದತಿಗಳ ಬಗ್ಗೆ ಸಂಶೋಧನೆ ಮತ್ತು ಪ್ರಚಾರ ಮಾಡುವ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ 22 ರಾಗಿ ತಳಿಗಳನ್ನು ಸಂರಕ್ಷಿಸಿರುವ ರಾಣೆಬೆನ್ನೂರು ತಾಲ್ಲೂಕಿನ ಇಟಗಿ ಗ್ರಾಮದ ರೇವಣಪ್ಪ ಪೂಜಾರ ಮತ್ತು ಸಮುದಾಯ ಕೃಷಿ ಮೂಲಕ 76 ರಾಗಿ ತಳಿಗಳನ್ನು ಬೆಳೆಸಿ ಗುಣಲಕ್ಷಣಗಳನ್ನು ದಾಖಲಿಸುತ್ತಿರುವ  ಕುಂದಗೋಳ ತಾಲ್ಲೂಕಿನ ಮತಿಗಟ್ಟಿಯ ವಿನಾಯಕ ಮಹಿಳಾ ಸಂಘ ಮತ್ತು ಮಾದರಿ ರಾಗಿ ಕೃಷಿಕ ತಿಪಟೂರು ತಾಲ್ಲೂಕಿನ ಕರಿಕೆರೆ ರಮೇಶ್ ಅವರನ್ನು ಸನ್ಮಾನಿಸಲಾಯಿತು.

'ಮಳೆಯಾಶ್ರಯದಲ್ಲಿ ಸಿರಿಧಾನ್ಯ ಬೆಳೆಗಳ ಉತ್ಪಾದನಾ ತಾಂತ್ರಿಕತೆಗಳು', ‘ರಾಗಿ ಉತ್ಪಾದನಾ ತಾಂತ್ರಿಕತೆಗಳು' ಮತ್ತು ದೇಸಿ  ರಾಗಿ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಲಾಯಿತು‌

ಜಿಕೆವಿಕೆಯ ಅಖಿಲ ಭಾರತ ಸುಸಂಘಟಿತ ಸಿರಿಧಾನ್ಯ ಸಂಶೋಧನಾ ಪ್ರಾಯೋಜನೆ ಮುಖ್ಯಸ್ಥರಾದ ಡಾ.ಟಿ.ಇ. ನಾಗರಾಜ, ಹಿರಿಯ ವಿಜ್ಞಾನಿ  ಡಾ.ಟಿ.ಎಸ್. ಸುಕನ್ಯ ಮತ್ತು ಸಹಜ ಸಮೃದ್ದದ ನಿರ್ದೇಶಕರಾದ ಜಿ.ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT