ಶುಕ್ರವಾರ, ಏಪ್ರಿಲ್ 3, 2020
19 °C
ಸ್ವಚ್ಛ ಭಾರತ ಯೋಜನೆ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ * ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಅಕ್ರಮ

ಸ್ವಚ್ಛ ಭಾರತ: ಅನುದಾನ ದುರ್ಬಳಕೆ ಎಸಿಬಿ ತನಿಖೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ವಚ್ಛ ಭಾರತ ಯೋಜನೆಯ ಅನುದಾನವನ್ನು ನಿಯಮಾವಳಿಗೆ ವಿರುದ್ಧವಾಗಿ ಅನ್ಯ ಉದ್ದೇಶಕ್ಕೆ ಬಳಸಿದ ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಯನ್ನು ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಒಪ್ಪಿಸಿದೆ.

ಕೇಂದ್ರ ಸರ್ಕಾರವು 2016-17 ಮತ್ತು 2017-18ನೇ ಸಾಲಿನಲ್ಲಿ ಸ್ವಚ್ಛ ಭಾರತ ಯೋಜನೆಯಡಿ ಪಾಲಿಕೆಗೆ ₹ 108.56 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ‘ಈ ಯೋಜನೆಯಡಿ ಸೂಚಿಸಿರುವ ಕಾಮಗಾರಿಗಳಿಗೆ (ಶೌಚಾಲಯ ನಿರ್ಮಾಣ, ಕಸ ನಿರ್ವಹಣೆ ಹಾಗೂ ಆರೋಗ್ಯ ಇಲಾಖೆಯ ಕಾಮಗಾರಿಗಳು... ಇತ್ಯಾದಿ) ₹ 16.28 ಕೋಟಿಯನ್ನು ಮಾತ್ರ ಬಳಸಲಾಗಿದೆ. ಇನ್ನುಳಿದ ₹ 92.27 ಕೋಟಿ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಲಾಗಿದೆ’ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್‌. ಆರ್‌. ರಮೇಶ್‌ ಎಸಿಬಿಗೆ ದೂರು ನೀಡಿದ್ದರು.

ಈ ಯೋಜನೆಗೆ ಸಂಬಂಧಪಡದ ರಸ್ತೆ, ಪಾದಚಾರಿ ಮಾರ್ಗ, ಚರಂಡಿ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ಬಳಸುವ ಮೂಲಕ ಬಿಬಿಎಂಪಿ ಅಧಿಕಾರಿಗಳು ತಪ್ಪೆಸಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದ್ದು, ತನಿಖೆ ನಡೆಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಇದೇ 14ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. 

‘ಈ ಅನುದಾನದಲ್ಲಿ ಕೆ.ಆರ್‌.ಮಾರುಕಟ್ಟೆಯ ಗೋಡೆಗೆ ಒಂದು ಬಾರಿ ಬಣ್ಣ ಬಳಿದು ಎರಡು ಬಾರಿ ಬಿಲ್‌ ಪಾವತಿಸಲಾಗಿದೆ’ ಎಂದು ರಮೇಶ್‌ ಆರೋಪಿಸಿದ್ದರು.

‘2015-16 ರಿಂದ 2017-18 ಅವಧಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ₹ 1,116 ಕೋಟಿ ವೆಚ್ಚ ಮಾಡಲಾಗಿದೆ. ಈ ಕಾಮಗಾರಿಗಳಲ್ಲಿ ನೂರಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ’ ಎಂದು ಆರೋಪಿಸಿ ರಮೇಶ್‌ ಎಸಿಬಿಗೆ ದೂರು ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು