ಬೆಂಗಳೂರು: ಕುಳಿತುಕೊಳ್ಳುವ ಸಿಮೆಂಟ್ ಹಾಗೂ ಕಲ್ಲಿನ ಬೆಂಚುಗಳು ಮುರಿದಿವೆ. ವಿದ್ಯುತ್ ಕಂಬ ಬಾಗಿದ್ದು, ಸ್ವಿಚ್ ಬೋರ್ಡ್ ಬಾಯ್ದೆರೆದಿದೆ. ನಡಿಗೆ ಪಥದಲ್ಲಿ ಕಸದ ರಾಶಿ ಬಿದ್ದಿದೆ.
ಆರ್.ಟಿ. ನಗರದ ವಾರ್ಡ್ ನಂಬರ್ 46ರ 18ನೇ ಕ್ರಾಸ್, ಆದರ್ಶ ಸ್ಕೂಲ್ ಹಿಂಭಾಗದಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 'ರವೀಂದ್ರನಾಥ ಟ್ಯಾಗೋರ್ ಉದ್ಯಾನ’ದ ಸದ್ಯದ ಸ್ಥಿತಿ ಇದು.
ಈ ಉದ್ಯಾನವು ಹೊರಗಿನಿಂದ ನೋಡಲು ಅಂದವಾಗಿ ಕಾಣಿಸುತ್ತದೆ. ಒಳ ಪ್ರವೇಶಿಸಿದರಷ್ಟೆ ಅಶುಚಿತ್ವ, ಅವ್ಯವಸ್ಥೆಗಳು, ಅಧ್ವಾನಗಳು ಅನಾವರಣಗೊಳ್ಳುತ್ತವೆ. ಪಾರ್ಕ್‌ನಲ್ಲಿ ಮೂಲ ಸೌಲಭ್ಯಗಳಿದ್ದರೂ, ನಿರ್ವಹಣೆಯ ಕೊರತೆಯಿಂದಾಗಿ ಅವು ಬಳಸುವ ಸ್ಥಿತಿಯಲ್ಲಿಲ್ಲ.
ನಡಿಗೆ ಪಥದಲ್ಲಿ ಅಲಲ್ಲಿ ಒಣಗಿದ ಎಲೆಗಳು ರಾಶಿಯಾಗುತ್ತಿರುತ್ತವೆ. ಒಣಗಿದ ಎಲೆಗಳನ್ನು ನಿಯಮಿತವಾಗಿ ತೆಗೆದು ಸ್ವಚ್ಛಗೊಳಿಸುವುದಿಲ್ಲ. ಹೀಗಾಗಿ ಇಲ್ಲಿ ನಡೆದಾಡುವ ಹಿರಿಯರಿಗೆ ಜಾರಿ ಬೀಳುವ ಭಯ. ಜಿಗಿದು ಓಡುವ ಪುಟ್ಟ ಮಕ್ಕಳೂ ಜಾರುತ್ತವೆಂಬ ಆತಂಕ ಪೋಷಕರದ್ದು.
‘ನಡೆದು ದಣಿದವರು ಸುಧಾರಿಸಿಕೊಳ್ಳುವುದಕ್ಕೆ ಅಲ್ಲಲ್ಲಿ ಆಸನಗಳಿವೆ. ಆದರೆ ಎಲ್ಲವೂ ಕುಳಿತುಕೊಳ್ಳಲು ಯೋಗ್ಯವಾಗಿಲ್ಲ. ಒಂದೆರಡು ಮುರಿದಿವೆ. ಇನ್ನೊಂದೆರಡು ಉರುಳಿವೆ. ಇವೆಲ್ಲ ಮುರಿದು ಬಿದ್ದು ದೀರ್ಘ ಕಾಲವಾಗಿದ್ದರೂ, ಬದಲಾಯಿಸಿಲ್ಲ. ಮಳೆ ಬಂದಾಗ ತುಂಬಾ ಸಮಸ್ಯೆಯಾಗುತ್ತದೆ’ ಎನ್ನುತ್ತಾರೆ ಹಿರಿಯ ನಾಗರಿಕರು.
ಕತ್ತರಿಸಿದ ಬೃಹತ್ ಮರದ ತುಂಡಿನಿಂದಾಗಿ ನಡಿಗೆ ಪಥದ ನೆಲಹಾಸು ಕಿತ್ತುಹೋಗಿದೆ. ಪಾರ್ಕ್ ಅಂಗಳದ ಒಂದು ಬದಿಯಲ್ಲಿರುವ ಗುಂಡಿಯ ಮೇಲೆ ಮುಚ್ಚಿದ್ದ ಕಬ್ಬಿಣದ ಮುಚ್ಚಳ ಅರ್ಧ ತೆರೆದುಕೊಂಡಿದೆ.
‘ವಿದ್ಯುತ್ ದೀಪದ ಕಂಬಗಳಿವೆ. ಆದರೆ ದೀಪಗಳು ಬೆಳಗುವುದಿಲ್ಲ. ಒಂದು ವಿದ್ಯುತ್ ಕಂಬವಂತೂ ಬಾಗಿದೆ. ಕಂಬದಲ್ಲಿರುವ ವಿದ್ಯುತ್ ಸ್ವಿಚ್ ಬಾಕ್ಸ್ ಬಾಯ್ದೆರೆದಿದೆ. ತಂತಿಗಳು ಹೊರಗೆ ಇಣುಕುತ್ತಿವೆ. ಮಕ್ಕಳು ಅರಿವಿಲ್ಲದೆ ಮುಟ್ಟಿದರೆ ಅಪಾಯ’ ಎನ್ನುತ್ತಾರೆ ವಾಯುವಿಹಾರಿಗಳು.
‘ಉದ್ಯಾನದಲ್ಲಿ ಕನಿಷ್ಠ ನಿರ್ವಹಣೆಯ ಅಗತ್ಯವಿದೆ. ಹುಳು, ಹುಪ್ಪಟೆಗಳು ಓಡಾಡುತ್ತಿರುತ್ತವೆ. ರಾತ್ರಿ ಹೊತ್ತು ಬೆಳಕಿನ ವ್ಯವಸ್ಥೆಗೆ ದೀಪಗಳು ಬೇಕು. ಉದ್ಯಾನದ ಸ್ವಚ್ಛತೆ ಕಡೆಗೆ ಹೆಚ್ಚು ಗಮನ ಕೊಡಬೇಕು’ ಎನ್ನುತ್ತಾರೆ ವಾಯುವಿಹಾರಿ ಮುನಿಯಪ್ಪ.
ಉದ್ಯಾನದಲ್ಲಿ ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ನೂರಾರು ಮಂದಿ ವಾಯುವಿಹಾರಕ್ಕಾಗಿ ಬರುತ್ತಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು. ಪಾರ್ಕ್‌ನಲ್ಲಿನ ಅವ್ಯವಸ್ಥೆ ಕಂಡು ಇತ್ತೀಚೆಗೆ ಕೆಲವರು ವಾಯುವಿಹಾರಕ್ಕೆ ಬರುವುದನ್ನೇ ನಿಲ್ಲಿಸಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಉದ್ಯಾನದ ನಿರ್ವಹಣೆ ಸಮರ್ಪಕವಾಗಿಲ್ಲ.ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ. ಏನೂ ಪ್ರಯೋಜನವಾಗಿಲ್ಲಭಾನುಪ್ರಕಾಶ್ ಅಧ್ಯಕ್ಷರು ಆರ್‌ಟಿ.ನಗರ ಕ್ಷೇಮಾಭಿವೃದ್ಧಿ ಸಂಘ
ಪಾರ್ಕ್‌ಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ. ಉದ್ಯಾನದಲ್ಲಿರುವ ವಿದ್ಯುತ್ ಸಮಸ್ಯೆ ಸರಿಪಡಿಸಲು ಸಂಬಂಧಿಸಿದವರಿಗೆ ತಿಳಿಸಿದ್ದೇನೆ. ಸ್ವಚ್ಛತೆಗೂ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.ಸುಗುಣ ಮುಖ್ಯ ಎಂಜಿನಿಯರ್ ಬಿಬಿಎಂಪಿ ಪೂರ್ವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.