ಭಾನುವಾರ, ಏಪ್ರಿಲ್ 5, 2020
19 °C

ಟಿಡಿಆರ್‌–ಒಸಿ ವಿತರಣೆ ಹಗರಣ: ಏಕಸದಸ್ಯ ನ್ಯಾಯಪೀಠದ ಆದೇಶ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಮತ್ತು ಸ್ವಾಧೀನಾನುಭವ ಪತ್ರ (ಒಸಿ) ನೀಡಿಕೆ ಕುರಿತ ದೂರುಗಳಿಗೆ ಸಂಬಂಧಿಸಿದಂತೆ ಸೂಪರಿಂಟೆಂಡೆಂಟ್ ಆಫ್‌ ಪೊಲೀಸ್ (ಎಸ್.ಪಿ) ಅಬ್ದುಲ್ ಅಹದ್ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ‌ ಹೊರಡಿಸಿದ್ದ ಆದೇಶವನ್ನು ವಿಭಾಗೀಯ ನ್ಯಾಯಪೀಠ ರದ್ದುಪಡಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಭಾಗಶಃ ಪುರಸ್ಕರಿಸಿದೆ.

‘ಟಿಡಿಆರ್ ಹಾಗೂ ಒಸಿ ವಿತರಣೆ ಹಗರಣದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮುಂದುವರಿಸಬೇಕು. ಆದರೆ, ತನಿಖಾಧಿಕಾರಿ ಯಾರಾಗಬೇಕು ಎಂಬುದನ್ನು ಎಸಿಬಿಯ ಐಜಿಪಿ ನಿರ್ಧಾರ ಮಾಡಲಿ’ ಎಂದು ವಿಭಾಗೀಯ ನ್ಯಾಯಪೀಠ ತಿಳಿಸಿದೆ.

ಪ್ರಕರಣವೇನು?: ‘ಟಿಡಿಆರ್ ಹಾಗೂ ಒಸಿ ವಿತರಣೆ ಕುರಿತ ತನಿಖೆಯನ್ನು ಎಸ್.ಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ತನಿಖೆ ಮಾಡಬೇಕು.‌‌ ಆರು ತಿಂಗಳಲ್ಲಿ ವರದಿ ನೀಡಬೇಕು‌. ವರದಿಯನ್ನು ನನಗೇ ನೀಡಬೇಕು’ ಎಂದು ಏಕಸದಸ್ಯ ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿದ್ದ ರಾಜ್ಯ ಸರ್ಕಾರ, ‘ಈ ಪ್ರಕರಣದ ತನಿಖೆಯನ್ನು ಸದ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸುತ್ತಿದೆ.‌ ಹೀಗಿರುವಾಗ ತನಿಖೆಯ ವರದಿಯನ್ನು ಸಂಸ್ಥೆಯ ಉನ್ನತಾಧಿಕಾರಿ ಐಜಿಪಿ ಹೊರತುಪಡಿಸಿ ಬೇರೆಯವರಿಗೆ ನೀಡಲು ಅವಕಾಶಗಳಿಲ್ಲ’ ಎಂದು ಆಕ್ಷೇಪಿಸಿತ್ತು.

‘ಏಕಸದಸ್ಯ ನ್ಯಾಯಪೀಠ ಈ ರೀತಿ ನಿರ್ದೇಶನ ನೀಡುವ ಅಧಿಕಾರ ವ್ಯಾಪ್ತಿ ಹೊಂದಿಲ್ಲ‌. ಇದು ರಿಟ್‌ ಅರ್ಜಿ ವಿಚಾರಣೆ ಪರಿಧಿಗೆ ಹೊರತಾಗಿದೆ. ಆದ್ದರಿಂದ ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಪಡಿಸಬೇಕು’ ಎಂದು ವಿಭಾಗೀಯ‌ ನ್ಯಾಯಪೀಠಕ್ಕೆ ಮನವಿ ಮಾಡಿತ್ತು.

ಎಸ್ಐಟಿ ರಚನೆಗೆ ಆದೇಶ ಮಾಡಿದ ಸಂದರ್ಭದಲ್ಲಿ ಅಬ್ದುಲ್ ಅಹದ್ ವೈಟ್‌ಫೀಲ್ಡ್ ವಲಯದ ಡಿಸಿಪಿ ಆಗಿದ್ದರು. ಏಕಸದಸ್ಯ ನ್ಯಾಯಪೀಠದ ಆದೇಶದ ನಂತರ ಎಸಿಬಿಗೆ ವರ್ಗಾವಣೆಯಾಗಿದ್ದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ 2007 ಹಾಗೂ 2018ರಿಂದ ವಿತರಣೆ ಮಾಡಲಾದ ಟಿಡಿಆರ್‌ ಮತ್ತು ಒಸಿ ನೀಡಿಕೆ ದೂರುಗಳನ್ನು ಅಬ್ದುಲ್ ಅಹದ್ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಏಕಸದಸ್ಯ ನ್ಯಾಯಪೀಠ 2019ರ ಜುಲೈ 26ರಂದು ಆದೇಶಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು