ಬುಧವಾರ, ಜೂನ್ 3, 2020
27 °C
‘ಕೊರೊನಾ’ ಸಂಕಟಕ್ಕೆ ಮಿಡಿದ ಬೈಕ್‌ರೈಡರ್‌ ದಶ್ಮಿ ಮೋಹನ್‌

ಬೈಕ್‌ನಲ್ಲೇ ತಿಪಟೂರಿಗೆ ಔಷಧಿ ತಲುಪಿಸಿದ ‘ವಾರಿಯರ್‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ತಿಪಟೂರಿನ ಪುಟ್ಟಯ್ಯ ಪ್ರತಿದಿನ ಮಾತ್ರೆ ತೆಗೆದುಕೊಳ್ಳಲೇಬೇಕು. ಆದರೆ ಈಗ ಲಾಕ್‌ಡೌನ್‌ ಆಗಿರುವುದರಿಂದ ತಿಪಟೂರು, ತುಮಕೂರು ಸೇರಿದಂತೆ ಸುತ್ತಲಿನ ಯಾವ ಪಟ್ಟಣದ ಸರ್ಕಾರಿ ಆಸ್ಪತ್ರೆ, ಮೆಡಿಕಲ್‌ ಅಂಗಡಿಗಳಲ್ಲೂ ಮಾತ್ರೆ ಸಿಗಲಿಲ್ಲ. ಕೊನೆಗೆ, ನಗರದ ಮಲ್ಲೇಶ್ವರದಲ್ಲಿ ಅವರ ಮಕ್ಕಳಿಗೆ ಮಾತ್ರೆಗಳು ಸಿಕ್ಕವು. ಆದರೆ, ತಿಪಟೂರಿಗೆ ತಲುಪಿಸುವುದು ಹೇಗೆ ಎಂದು ಚಿಂತೆಯಾಯಿತು?

ಈ ಸಂಗತಿ ಕೋವಿಡ್‌ 19 ಸಹಾಯವಾಣಿ ಮೂಲಕ ದಶ್ಮಿ ಮೋಹನ್‌ ಅವರಿಗೆ ತಿಳಿಯಿತು. ಬೈಕ್ ಏರಿದ ಅವರು, ಮಲ್ಲೇಶ್ವರದ ಪುಟ್ಟಯ್ಯನವರ ಮಕ್ಕಳ ಮನೆಗೆ ಹೋಗಿ, ಅವರಿಂದ ಮಾತ್ರೆಗಳನ್ನು ಸಂಗ್ರಹಿಸಿಕೊಂಡು, ಬೈಕ್ ರೈಡ್ ಮಾಡಿಕೊಂಡು ತಿಪಟೂರಿಗೆ ಹೋಗಿ, ಪುಟ್ಟಯ್ಯ ಅವರಿಗೆ ಸಕಾಲದಲ್ಲಿ ಮುಟ್ಟಿಸಿದರು!

ನಗರದ ಚಂದ್ರಾ ಲೇಔಟ್‌ ನಿವಾಸಿ, ವಿಜಯನಗರದ ಬಂಟರ ಸಂಘ ಆರ್‌ಎನ್‌ಎಸ್‌ ವಿದ್ಯಾನಿಕೇತನ ಶಾಲೆಯಲ್ಲಿ ಶಿಕ್ಷಕಿಯಾಗಿರುವ ದಶ್ಮಿ ಒಬ್ಬ ಹವ್ಯಾಸಿ ಬೈಕ್‌ ರೈಡರ್. ಅವರು ತಮ್ಮ ಹವ್ಯಾಸವನ್ನು ಈಗ ಕೊರೊನಾ ಸಂಕಷ್ಟದಲ್ಲಿ ಸಿಲುಕಿದವರಿಗೆ ನೆರವಾಗಲು ಬಳಸಿಕೊಳ್ಳುತ್ತಿದ್ದಾರೆ. ‘ಕೊರೊನಾ ವಾರಿಯರ್‌‘ ಆಗಿ  ಕಾರ್ಯ ನಿರ್ವಹಿಸುತ್ತಿರುವ ಅವರು, ಇಂಥ ಹಲವು ತುರ್ತು ಸಂದರ್ಭಗಳಲ್ಲಿ ದೂರದ ಊರುಗಳಿಗೆ ಬೈಕ್‌ನಲ್ಲಿಯೇ ಏಕಾಂಗಿಯಾಗಿ ತೆರಳಿ ಅಗತ್ಯ ವಸ್ತು, ಔಷಧಿ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಕೋವಿಡ್‌–19 ಹೆಲ್ಪ್‌ಲೈನ್‌ನಿಂದ ಮಾಹಿತಿ ಪಡೆದು, ರೋಗಿಗಳ  ಮನೆ ಬಾಗಿಲಿಗೆ  ಔಷಧಿಯಂತಹ ಅಗತ್ಯ ವಸ್ತುಗಳನ್ನು ತಲುಪಿಸುತ್ತಾರೆ. ದೇಶದಾದ್ಯಂತ ಲಾಕ್‌ಡೌನ್‌ ಆದ ಮೊದಲ ದಿನದಿಂದಲೇ ಅವರು ‘ಕೊರೊನಾ ವಾರಿಯರ್‌‘ ಆಗಿದ್ದಾರೆ.

‘ನಾನು ಬೆಂಗಳೂರಿನಿಂದ ತಿಪಟೂರಿಗೆ 2 ಗಂಟೆ 15 ನಿಮಿಷದಲ್ಲಿ ತಲುಪಿದೆ. ಪುಟ್ಟಯ್ಯ ಅವರ ಊರು ತಿಪಟೂರು ಸಮೀಪದ ಹಳ್ಳಿ ಚಿಗ್ಗಾವಿ. ಹೋಗಿ – ಬರುವಾಗ 215 ಕಿ.ಮೀ ಆಯಿತು‘ ಎನ್ನುತ್ತಾ ಮೊದಲ ದಿನದ ತಮ್ಮ ’ಬೈಕ್‌ ರೈಡ್ ಸೇವೆ‘ಯನ್ನು ‘ಪ್ರಜಾವಾಣಿ‘ಯೊಂದಿಗೆ ಹಂಚಿಕೊಂಡರು ದಶ್ಮಿ. 

ಇನ್ನಷ್ಟು ಘಟನೆಗಳು..

ನಗರದಿಂದ 75 ಕಿ.ಮೀ ದೂರದ ಹೊಸೂರು ಸಮೀಪದ ಬಾಗಲೂರಿನಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರಿಗೆ ತುರ್ತಾಗಿ ಔಷಧ ಬೇಕಾಗಿತ್ತು. ಸಹಾಯವಾಣಿಯಿಂದ ಮಾಹಿತಿ ಪಡೆದ ಅವರು ತುರ್ತಾಗಿ ಅಲ್ಲಿಗೆ ತೆರಳಿ ಔಷಧ ತಲುಪಿಸಿದರು. 

‘ಅಲ್ಲಿಗೆ ಹೋದಾಗ ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿ ನೆಲ ಕ್ಲೀನ್‌ ಮಾಡುವ ದ್ರಾವಣವನ್ನೇ ಸ್ಯಾನಿಟೈಸರ್‌ ತರಹ ಬಳಸುತ್ತಿದ್ದರು.ಇದನ್ನು ಗಮನಿಸಿದ ನಾನು, ಅವರಿಗೆ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳುವ ಕುರಿತು ಮಾಹಿತಿ ನೀಡುವ ಜತೆಗೆ ಸ್ಯಾನಿಟೈಸರ್‌ ಕೊಟ್ಟು ಬಂದೆ’ ಎಂದು ಅವರು ಅನುಭವ ಹೇಳಿಕೊಂಡರು . 

ಇದೇ ರೀತಿ ಅತ್ತಿಬೆಲೆಯಲ್ಲೆಯಲ್ಲಿರುವ ಕ್ಯಾನ್ಸರ್‌ ರೋಗಿಯೊಬ್ಬರಿಗೆ ಮಾತ್ರೆ ಬೇಕಾಗಿತ್ತು. ಸ್ಥಳೀಯವಾಗಿ ಆ ಮಾತ್ರೆ ಸಿಗಲಿಲ್ಲ. ತಾವಿದ್ದ ಜಾಗದಲ್ಲಿನ ಮೆಡಿಕಲ್‌ ಸ್ಟೋರ್‌ನಲ್ಲಿ ಆ ಮಾತ್ರೆ ಸಿಕ್ಕಿತು. ಅದನ್ನು ಖದೀರಿಸಿ, ಆ ರೋಗಿಗೆ ತಲುಪಿಸಿ ಬಂದಿದ್ದಾರೆ. ಇದೇ ರೀತಿ ದಾವಣಗೆರೆಯ ಕ್ಯಾನ್ಸರ್‌ ರೋಗಿಗೂ ಮಾತ್ರೆಗಳನ್ನು ಕೊಟ್ಟುಬಂದಿದ್ದಾರಂತೆ.

‘ಕೆಲವು ಸ್ಥಳಗಳಲ್ಲಿ ಔಷಧಿ ದೊರೆಯುತ್ತಿಲ್ಲ. ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ಬಳಲುತ್ತಿರುವವಿಗೆ ತುಂಬಾ ಕಷ್ಟವಾಗಿದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂದುಕೊಂಡೆ. ಇದೊಂದು ನನ್ನ ಅಳಿಲು ಸೇವೆ’ ಎಂದು ದಶ್ಮಿ ಮೋಹನ್‌ ಹೇಳುತ್ತಾರೆ. 

ಈ ಕೆಲಸದ ಜೊತೆಗೆ ಅವರು ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಪೊಟ್ಟಣ ವಿತರಣೆಯಂತಹ ಕೆಲಸಕ್ಕೂ ಕೈ ಜೋಡಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು