ಬೆಂಗಳೂರು: ಶಿಕ್ಷಕರ ಬಡ್ತಿ ಮತ್ತು ವರ್ಗಾವಣೆಗಾಗಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
1ರಿಂದ 5ನೇ ತರಗತಿವರೆಗೆ ಪಾಠ ಮಾಡುವ ಶಿಕ್ಷಕರು ಪದವೀಧರರಾಗಿದ್ದಲ್ಲಿ ಅವರನ್ನು 6ರಿಂದ 8ನೇ ತರಗತಿವರೆಗೆ ಪಾಠ ಮಾಡುವ ‘ಜಿಪಿಟಿ ಶಿಕ್ಷಕರು’ ಹುದ್ದೆಗಳಿಗೆ ಬಡ್ತಿ ನೀಡಬೇಕು. ಈ ಬಡ್ತಿಗೆ ಅಡ್ಡಿಯಾಗಿರುವ ವೃಂದ ಮತ್ತು ನೇಮಕಾತಿ ನಿಯಮ-2017ಕ್ಕೆ ತಿದ್ದುಪಡಿ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಸೇವಾ ಜ್ಯೇಷ್ಠತೆ, ಬಡ್ತಿ, ವರ್ಗಾವಣೆ ಪ್ರಕ್ರಿಯೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು. ಮುಖ್ಯ ಶಿಕ್ಷಕರ ಹುದ್ದೆಗೆ ಸೇವಾ ಹಿರಿತನ ಪರಿಗಣಿಸಿ, ಪದವಿ ಮತ್ತು ಬಿ.ಎಡ್ ಪೂರ್ಣಗೊಳಿಸಿದವರಿಗೆ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಸಾಹಿತಿ ಬರಗೂರು ರಾಮಚಂದ್ರಪ್ಪ, ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ಸಂಘದ ಅಧ್ಯಕ್ಷ ಕೆ. ನಾಗೇಶ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.