ಮಂಗಳವಾರ, ಜನವರಿ 19, 2021
26 °C
ಬಿಬಿಎಂಪಿ, ಏಜೆನ್ಸಿ ತಿಕ್ಕಾಟ– ಗುತ್ತಿಗೆ ಶಿಕ್ಷಕರಿಗೆ ಪೀಕಲಾಟ

‘ಕೋವಿಡ್ ಕರ್ತವ್ಯ ಮಾಡಿದರೆ ಮಾತ್ರ ವೇತನ!’

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕು ಪರೀಕ್ಷೆ–ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಬಿಎಂಪಿ ಶಾಲೆಗಳ ಗುತ್ತಿಗೆ ಶಿಕ್ಷಕರು ಅಧಿಕಾರಿಗಳು ಹಾಗೂ ಶಿಕ್ಷಕರ ನೇಮಕಾತಿಯ ಹೊರಗುತ್ತಿಗೆ ಪಡೆದಿರುವ ಏಜೆನ್ಸಿ ನಡುವಿನ ತಿಕ್ಕಾಟದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಕೋವಿಡ್‌ ಕರ್ತವ್ಯ ನಿರ್ವಹಿಸಿದವರಿಗೆ ಮಾತ್ರ ವೇತನ ಎಂಬ ‘ಮೌಖಿಕ’ ಆದೇಶ ಶಿಕ್ಷಕರ ನಿದ್ದೆಗೆಡಿಸಿದೆ.

‘ಕೋವಿಡ್‌ ಬಿಕ್ಕಟ್ಟು ಇದ್ದುದರಿಂದ ಜೂ.8ರಿಂದ ಈ ಬಾರಿ ಶಾಲೆಗಳು ಆರಂಭವಾದವು. ಅಂದರೆ, ಶಿಕ್ಷಕರಿಗೆ ಮಾತ್ರ ಶಾಲೆಗೆ ಬರಲು ಹೇಳಿ ಮುಂದಿನ ಪಠ್ಯಯೋಜನೆಗಳನ್ನು ತಯಾರಿಸಲು ಸೂಚನೆ ನೀಡಲಾಗಿತ್ತು. ಅದರಂತೆ ಶಾಲೆಗೆ ಹೋಗಿ ಕೆಲಸ ಮಾಡಿದ್ದೇವೆ. ಈ ಸಂದರ್ಭದಲ್ಲಿ ಕೆಲವು ಶಿಕ್ಷಕರನ್ನು ಮಾತ್ರ ಕೋವಿಡ್‌ ಕರ್ತವ್ಯಕ್ಕೆ ನಿಯೋಜಿಸಲಾಯಿತು. ಈಗ, ಕೋವಿಡ್‌ ಕರ್ತವ್ಯ ಮಾಡಿದವರಿಗೆ ಮಾತ್ರ ವೇತನ ಕೊಡಲಾಗುತ್ತದೆ ಎಂದು ಏಜೆನ್ಸಿಯವರು ಹೇಳುತ್ತಿದ್ದಾರೆ’ ಎಂದು ಅತಿಥಿ ಶಿಕ್ಷಕರೊಬ್ಬರು ದೂರಿದರು. 

‘ಆಗಸ್ಟ್‌, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳ ವೇತನ ನೀಡಿದ್ದಾರೆ. ಜೂನ್‌–ಜುಲೈ ವೇತನವನ್ನು ಈವರೆಗೆ ನೀಡಿಲ್ಲ. ನಮ್ಮನ್ನು ಕೋವಿಡ್‌ ಕರ್ತವ್ಯಕ್ಕೆ ನಿಯೋಜಿಸಿದರೆ ತಾನೆ ಕೆಲಸ ಮಾಡುವುದು’ ಎಂದು ಅವರು ಪ್ರಶ್ನಿಸಿದರು.

‘ಜೂನ್‌–ಜುಲೈನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮತ್ತು ಮೌಲ್ಯಮಾಪನ ಕರ್ತವ್ಯವನ್ನೂ ಮಾಡಿದ್ದೇವೆ. ಲಾಕ್‌ಡೌನ್‌ ಇದ್ದ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ತೊಡಕುಗಳಿದ್ದರೂ ಕರ್ತವ್ಯ ನಿರ್ವಹಿಸಿದ್ದೇವೆ. ಆದರೆ, ಕೋವಿಡ್ ಕರ್ತವ್ಯ ಮಾಡಿಲ್ಲ ಎಂಬ ನೆಪವೊಡ್ಡಿ ಈ ಎರಡು ತಿಂಗಳ ವೇತನ ನೀಡುತ್ತಿಲ್ಲ’ ಎಂದು ಅವರು ಅಳಲು ತೋಡಿಕೊಂಡರು.

‘ಕಾಯಂ ಶಿಕ್ಷಕರಿಗಿಂತ ಹೆಚ್ಚು ಕೆಲಸವನ್ನು ನಾವು ಮಾಡುತ್ತೇವೆ. ಅವರಿಗೆ ಸರಿಯಾಗಿ ವೇತನ ಪಾವತಿಸಲಾಗುತ್ತದೆ. ಆದರೆ, ನಮಗೆ ನಿಗದಿ ಮಾಡಿರುವ ಕಡಿಮೆ ವೇತನವನ್ನೂ ಸರಿಯಾಗಿ ಪಾವತಿಸುವುದಿಲ್ಲ. ಮೌಖಿಕ ಆದೇಶಗಳ ಮೂಲಕ ತಾರತಮ್ಯ ಮಾಡಲಾಗುತ್ತಿದೆ’ ಎಂದೂ ಶಿಕ್ಷಕಿಯೊಬ್ಬರು ಆರೋಪಿಸಿದರು.

ಮೌಖಿಕ ಆದೇಶ:

‘ಜೂನ್‌ 8ರಿಂದ ಶಾಲೆಗೆ ಹಾಜರಾಗುವಂತೆ ಶಿಕ್ಷಣ ಇಲಾಖೆಯ ವಾಟ್ಸ್‌ಆ್ಯಪ್‌ನಲ್ಲಿ ಗುತ್ತಿಗೆ ಶಿಕ್ಷಕರಿಗೆ ಸೂಚನೆ ನೀಡಲಾಗಿತ್ತು. ಆದರೆ, ನಮಗೆ ಇಲಾಖೆಯಿಂದ ಅಧಿಕೃತ ಆದೇಶ ಬಂದಿರಲಿಲ್ಲ. ವಿದ್ಯಾರ್ಥಿಗಳು ಶಾಲೆಗೆ ಬರಲು ಅವಕಾಶವಿಲ್ಲದ ಕಾರಣ, ಶಾಲೆಗೆ ಹೋಗುವಂತೆ ಶಿಕ್ಷಕರಿಗೆ ನಾವೂ ಯಾವುದೇ ಆದೇಶ ನೀಡಿರಲಿಲ್ಲ. ಆದರೆ, ಬಿಬಿಎಂಪಿಯವರು ಬೇರೆ ಇಲಾಖೆಯವರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸುತ್ತಿದ್ದರು. ಈ ಗುತ್ತಿಗೆ ಶಿಕ್ಷಕರನ್ನು ಕೋವಿಡ್ ಕರ್ತವ್ಯಕ್ಕೆ ಬಳಸಿಕೊಳ್ಳಬಹುದು ಎಂದು ಬಿಬಿಎಂಪಿಗೆ ನಾವು ಕೋರಿದ್ದೆವು. ಆಗ ಕೆಲವರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಯಿತು’ ಎಂದು ಶಿಕ್ಷಕರ ನೇಮಕಾತಿಯನ್ನು ಹೊರಗುತ್ತಿಗೆ ಪಡೆದ ‘ಕ್ರಿಸ್ಟಲ್‌’ ಏಜೆನ್ಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಕರ್ತವ್ಯ ಮಾಡಿದವರ ಪಟ್ಟಿ ಮಾತ್ರ ಕಳುಹಿಸಿ. ಅವರಿಗೆ ಮಾತ್ರ ವೇತನ ಪಾವತಿಸಲಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಶಿಕ್ಷಣ) ಜೆ. ಮಂಜುನಾಥ್ ಮೌಖಿಕವಾಗಿ ಹೇಳಿದರು. ಅದರಂತೆ ಈ ಶಿಕ್ಷಕರಿಗೆ ಮಾತ್ರ ಜೂನ್‌–ಜುಲೈ ವೇತನ ಪಾವತಿಸಲಾಗಿದೆ’ ಎಂದರು. 

‘ಹಾಜರಾತಿ ವಿವರ ನೀಡಿದರೆ ಪಾವತಿ’

‘ಜೂನ್‌–ಜುಲೈ ವೇತನ ಆಗದಿರುವ ಬಗ್ಗೆ ಯಾವುದೇ ಶಿಕ್ಷಕರು ನೇರವಾಗಿ ನನ್ನ ಗಮನಕ್ಕೆ ತಂದಿಲ್ಲ. ಈ ಎರಡು ತಿಂಗಳಲ್ಲಿ ಶಾಲೆಗೆ ಹಾಜರಾಗಿರುವ ಶಿಕ್ಷಕರ ಹಾಜರಾತಿ ವಿವರವನ್ನು ಮುಖ್ಯಶಿಕ್ಷಕರು ಏಜೆನ್ಸಿಗೆ ನೀಡಬೇಕು. ಏಜೆನ್ಸಿಯಿಂದ ಈ ಬಂದ ನಂತರ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಜೆ. ಮಂಜುನಾಥ್ ಹೇಳಿದರು.

‘ಕೋವಿಡ್ ಕರ್ತವ್ಯ ಮಾಡದವರಿಗೆ ವೇತನ ನೀಡಬೇಡಿ ಎಂದು ಏಜೆನ್ಸಿಯವರಿಗೆ ನಾನು ಹೇಳಿಲ್ಲ’  ಎಂದು ಅವರು ಸ್ಪಷ್ಟಪಡಿಸಿದರು.

‘ಅಧಿಕಾರಿಗಳಿಂದಲೇ ಸಮಸ್ಯೆ’

‘ಎಲ್ಲರಿಗೂ ವೇತನ ಪಾವತಿಸಬೇಕು ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಕೋವಿಡ್ ಕರ್ತವ್ಯ ಮಾಡಿದವರಿಗೆ ಮಾತ್ರ ವೇತನ ಪಾವತಿಸಿ ಎಂದು ಯಾರಿಗೂ ಹೇಳಿಲ್ಲ. ಬಿಬಿಎಂಪಿ ಅಧಿಕಾರಿಗಳು  ಸುಮ್ಮನೆ ಈ ರೀತಿಯ ಸಮಸ್ಯೆ ಸೃಷ್ಟಿಸುತ್ತಿರುತ್ತಾರೆ’ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಅಸಮಾಧಾನ ವ್ಯಕ್ತಪಡಿಸಿದರು.

‘ಮೌಖಿಕವಾಗಿ ಇಂತಹ ಆದೇಶಗಳನ್ನು ನೀಡುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ. ಈ ವಿಚಾರವನ್ನು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಮತ್ತು ಆಡಳಿತಾಧಿಕಾರಿ ಗೌರವ್ ಗುಪ್ತ ಅವರ ಗಮನಕ್ಕೂ ತಂದಿದ್ದೇನೆ’ ಎಂದರು.

‘ಎಲ್ಲ ಶಿಕ್ಷಕರಿಗೆ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

226- ಬಿಬಿಎಂಪಿ ಶಾಲಾ–ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಂ ಶಿಕ್ಷಕರು/ಉಪನ್ಯಾಸಕರು

621-ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು/ ಉಪನ್ಯಾಸಕರು

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು