ಬೆಂಗಳೂರು: ವೈಟ್‌ಫೀಲ್ಡ್ ಮೆಟ್ರೊ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದಾಗಿ ನೇರಳೆ ಮಾರ್ಗದ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಐಟಿಪಿಎಲ್ ನಡುವೆ ಭಾನುವಾರ ಬೆಳಿಗ್ಗೆ ಅರ್ಧ ಗಂಟೆ ಮೆಟ್ರೊ ಸಂಚಾರ ಸ್ಥಗಿತಗೊಂಡಿತು.
ವೈಟ್ ಫೀಲ್ಡ್ ನಿಲ್ದಾಣದಲ್ಲಿ ಬೆಳಿಗ್ಗೆ 8.25ಕ್ಕೆ ಸಿಗ್ನಲಿಂಗ್ ಸಮಸ್ಯೆ ಉಂಟಾಯಿತು. ಬಿಎಂಆರ್ ಸಿ ಎಲ್ ತಾಂತ್ರಿಕ ಸಿಬ್ಬಂದಿ ಅರ್ಧ ಗಂಟೆಯಲ್ಲಿ ಸಮಸ್ಯೆ ಸರಿಪಡಿಸಿದರು.
ಈ ಸಮಯದಲ್ಲಿ ನೇರಳೆ ಮಾರ್ಗದಲ್ಲಿ ಚಲ್ಲಘಟ್ಟದಿಂದ ಐಟಿಪಿಎಲ್ ಮೆಟ್ರೊ ನಿಲ್ದಾಣಗಳ ನಡುವೆ ಶಾರ್ಟ್ ಲೂಪ್ ರೈಲು ಸೇವೆಗಳು ನಡೆಸಲಾಯಿತು. 8.55ರಿಂದ ಮತ್ತೆ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭವಾಯಿತು. ಪ್ರಯಾಣಿಕರಿಗೆ
ಉಂಟಾದ ಅನನುಕೂಲತೆಗೆ ವಿಷಾದಿಸುತ್ತೇವೆ ಎಂದು ಬಿಎಂ ಆರ್ ಸಿ ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಹಸಿರು ಮಾರ್ಗದ ಮೆಟ್ರೊ ಸಂಚಾರದಲ್ಲಿ ಯಾವುದೇ ವ್ಯತ್ಯಾಯವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.