ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ತೇಜಸ್ವಿ ಸೂರ್ಯ ಕಾರ್‌ಪೂಲಿಂಗ್‌ ಹೇಳಿಕೆ ವಾಪಸ್‌ ಪಡೆಯಲಿ: ಸಾರಿಗೆ ಒಕ್ಕೂಟ

ಸಂಸದ ತೇಜಸ್ವಿ ಸೂರ್ಯಗೆ ಎಚ್ಚರಿಕೆ ನೀಡಿದ ಸಾರಿಗೆ ಒಕ್ಕೂಟ
Published 8 ಅಕ್ಟೋಬರ್ 2023, 16:05 IST
Last Updated 8 ಅಕ್ಟೋಬರ್ 2023, 16:05 IST
ಅಕ್ಷರ ಗಾತ್ರ

ಬೆಂಗಳೂರು: ಕಾನೂನು ಮೀರಿ ನಡೆಸುವ ಕಾರ್‌ಪೂಲಿಂಗ್‌ ವ್ಯವಸ್ಥೆಗೆ ಬೆಂಬಲವಾಗಿ ಹೇಳಿಕೆ ನೀಡಿರುವ ಸಂಸದ ತೇಜಸ್ವಿ ಸೂರ್ಯ ತಮ್ಮ ಹೇಳಿಕೆಯನ್ನು ಹಿಂಪಡೆಯದೇ ಇದ್ದರೆ ಅವರ (ಸಂಸದರ) ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಎಚ್ಚರಿಸಿದೆ.

‘ಆಟೊ, ಟ್ಯಾಕ್ಸಿ ಚಾಲನೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ಸುಮಾರು 11 ಲಕ್ಷ ಜನರ ಹೊಟ್ಟೆ ಮೇಲೆ ಹೊಡೆಯುವ ಕೆಲಸಕ್ಕೆ ಸಂಸದರು ಬೆಂಬಲ ನೀಡಿದ್ದಾರೆ. ಅವರು ಹೇಳಿಕೆ ನೀಡಿದ್ದು ಮಾತ್ರವಲ್ಲ, ಕಾರ್‌ಪೂಲಿಂಗ್‌ ಪರ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ’ ಎಂದು ಒಕ್ಕೂಟದ ಅಧ್ಯಕ್ಷ ಎಸ್.ನಟರಾಜ ಶರ್ಮಾ ಭಾನುವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ನಾಲ್ಕು ಜನ ಗೆಳೆಯರು ಒಂದೇ ಕಾರಲ್ಲಿ ಹೋಗುವುದು ಕಾರ್‌ ಪೂಲಿಂಗ್‌ ಆಗುವುದಿಲ್ಲ. ಕಾರ್‌ಪೂಲಿಂಗ್‌ನಲ್ಲಿ ಹೋಗುವರು ‘ಫ್ಲಾಟ್‌ ಫಾರ್ಮ್‌ ರಿವಾರ್ಡ್‌’ ಎಂದು ಶುಲ್ಕ ಕಟ್ಟಬೇಕು. ಈ ಸೇವೆ ನೀಡುವವರು ಸಂಬಂಧಿಸಿದ ಕಂಪನಿಗೆ ಪ್ರತಿ ಟ್ರಿಪ್‌ಗೆ ಶೇ 7ರಷ್ಟು ಕಮಿಷನ್‌ ಪಾವತಿಸಬೇಕು ಎಂದು ವಿವರಿಸಿದರು.

‘ಬಿಳಿ ನಂಬರ್‌ಪ್ಲೇಟ್‌ ಇರುವ ವಾಹನಗಳನ್ನು ಬಾಡಿಗೆಗೆ ಬಳಸುವಂತಿಲ್ಲ. ವಾಣಿಜ್ಯ ಬಳಕೆಗಾಗಿ ಹೆಚ್ಚು ತೆರಿಗೆ ಕಟ್ಟಿರುವ ಹಳದಿ ನಂಬರ್‌ಪ್ಲೇಟ್ ಇರುವ ವಾಹನಗಳಷ್ಟೇ ಬಾಡಿಗೆ ನಡೆಸಬೇಕು. ಮೋಟಾರು ವಾಹನ ಕಾಯ್ದೆಯಲ್ಲಿ ಹೀಗೆಂದು ಸ್ಪಷ್ಟವಾಗಿದೆ. ಹಾಗಾಗಿ ಸರ್ಕಾರ ಬಿಳಿ ನಂಬರ್‌ಪ್ಲೇಟ್‌ ವಾಹನಗಳಲ್ಲಿ ಕಾರ್‌ಪೂಲಿಂಗ್‌ ಮಾಡಲು ಅನುಮತಿ ನೀಡಬಾರದು. ಅವರಿಗೆ ಅನುಮತಿ ನೀಡುವುದಿದ್ದರೆ, ನಮಗೂ ಬಿಳಿ ನಂಬರ್‌ಪ್ಲೇಟ್‌ನಲ್ಲಿ ಬಾಡಿಗೆ ಓಡಿಸಲು ಅನುಮತಿ ನೀಡಬೇಕು’ ಎಂದು ಆಗ್ರಹಿಸಿದರು.

‘ತೇಜಸ್ವಿ ಸೂರ್ಯ ಅವರ ಹೇಳಿಕೆಯನ್ನು ಮೋಹನದಾಸ್‌ ಪೈ ಬೆಂಬಲಿಸಿದ್ದಾರೆ. ಪೈ ಅವರು ಝೂಮ್ ಕಾರ್ಸ್‌, ಟ್ರಿಪ್‌ ಫ್ಯಾಕ್ಟ್ರಿ ಎಂಬ ಸಾರಿಗೆ ಕಂಪನಿಗಳಲ್ಲಿ ಪಾಲುದಾರರಾಗಿದ್ದಾರೆ. ವೈಯಕ್ತಿಕ ಬಳಕೆಯ ವಾಹನಗಳಲ್ಲಿ ಬಾಡಿಗೆ ಮಾಡುವುದನ್ನು ನಿಯಂತ್ರಿಸಬೇಕು ಎಂದು ಸಾರಿಗೆ ಒಕ್ಕೂಟ ಪ್ರತಿಭಟನೆ ನಡೆಸಿದ ಬಳಿಕ ಸರ್ಕಾರ ಕ್ರಮ ಕೈಗೊಂಡಿರುವುದರಿಂದ ಈ ಕಂಪನಿಗಳಿಗೆ ನಷ್ಟವಾಗಿದೆ. ಅದಕ್ಕಾಗಿ ಮೋಹನದಾಸ್ ಪೈ ಈ ರೀತಿ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿದರು.

‘ತೇಜಸ್ವಿ ಸೂರ್ಯ ಕ್ಷಮೆ ಕೇಳಿ ತಮ್ಮ ಹೇಳಿಕೆ, ಪತ್ರ ವಾಪಸ್ ಪಡೆಯಬೇಕು. ಇಲ್ಲದೇ ಇದ್ದರೆ ಅ.13ರಂದು ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ಆಗಲೂ ಅವರಿಗೆ ತಮ್ಮ ತಪ್ಪು ಅರಿವಾಗದಿದ್ದರೆ ತೇಜಸ್ವಿ ಸೂರ್ಯ ಅವರು ನಗರದಲ್ಲಿ ಎಲ್ಲಿ ಕಂಡರೂ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಲಾಗುವುದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಲಾಗುವುದು’ ಎಂದು ಎಚ್ಚರಿಸಿದರು.

ವಿವಿಧ ಸಾರಿಗೆ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT