ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮೃತ’ದ ಕೆಲಸ ತಿಂಗಳಲ್ಲಿ ಶುರು

ರಸ್ತೆ ಕಾಮಗಾರಿಗಳಿಗೆ ಟೆಂಡರ್‌ ಫೈನಲ್‌; ಕೆರೆ, ಶಿಕ್ಷಣ, ಆರೋಗ್ಯ ಸಂಬಂಧಿ ಕೆಲಸಗಳು ವಿಳಂಬ
Last Updated 22 ಜುಲೈ 2022, 20:05 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ₹6 ಸಾವಿರ ಕೋಟಿ ವೆಚ್ಚದ ಕಾಮಗಾರಿಗಳು ಇನ್ನೆರಡು ವಾರಗಳಲ್ಲಿ ಪ್ರಾರಂಭವಾಗಲಿವೆ. ಅದರಲ್ಲೂ ನಗರದ ರಸ್ತೆಗಳು ಇನ್ನು ಮೂರು ತಿಂಗಳಲ್ಲಿ ನಳನಳಿಸಲಿವೆ. ರಸ್ತೆ ಗುಂಡಿಗಳ ಸಮಸ್ಯೆಯೇ ಎದುರಾಗುವುದಿಲ್ಲ. ಏಕೆಂದರೆ, ಅಮೃತ ನಗರೋತ್ಥಾನ ಯೋಜನೆಯಲ್ಲಿ ಅನುಮೋದನೆಗೊಂಡಿರುವ ಅಷ್ಟೂ ಕಾಮಗಾರಿಗೆ ತುರ್ತು ಟೆಂಡರ್‌ ‍ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಬಿಬಿಎಂಪಿಯ ಏಳು ವಿಭಾಗಗಳಲ್ಲಿ ಅಮೃತ ನಗರೋತ್ಥಾನ ಯೋಜನೆ ಅನುಷ್ಠಾನಗೊಳ್ಳಲಿದೆ. ಅನುದಾನಕ್ಕೆ ಜೂನ್‌ 18ರಂದು ಅನುಮೋದನೆ ನೀಡಲಾಗಿದ್ದು, ಅದರಲ್ಲಿ ವಿಧಿಸಿರುವ ಷರತ್ತಿನಂತೆ ಒಂದು ತಿಂಗಳಲ್ಲಿ ಈ ಎಲ್ಲ ಕಾಮಗಾರಿಗಳಿಗೆ ಟೆಂಡರ್‌ ಕರೆಯಬೇಕಿತ್ತು. ಅಂದರೆ ಜುಲೈ 18ರೊಳಗೆ ಮುಗಿಯಬೇಕಿತ್ತು. ಈ ನಿಟ್ಟಿನಲ್ಲಿ ತುರ್ತು ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಕೆಲಸಗಳಿಗೆ ಮಾತ್ರ ಇನ್ನೂ ಚಾಲನೆ ಸಿಕ್ಕಿಲ್ಲ.

ರಸ್ತೆ ಮೂಲಸೌಕರ್ಯದಿಂದಲೇ ನಗರದ 200ಕ್ಕೂ ಹೆಚ್ಚು ರಸ್ತೆಗಳು ಅಭಿವೃದ್ಧಿಯಾಗಲಿವೆ. ಇನ್ನು ವಿಧಾನಸಭೆ ಕ್ಷೇತ್ರವಾರು ನೀಡುವ ಅನುದಾನದಲ್ಲಿ ಶಾಸಕರು ಬಹುತೇಕ ರಸ್ತೆ ಕಾಮಗಾರಿಗಳಿಗೇ ಸಮ್ಮತಿ ನೀಡಿದ್ದಾರೆ. ಹೀಗಾಗಿ, ಬೆಂಗಳೂರು ನಗರ ಇನ್ನು ಮೂರು ತಿಂಗಳಲ್ಲಿ ರಸ್ತೆಯ ಗುಂಡಿಗಳಿಂದ ಮುಕ್ತವಾಗಿ, ‘ಹೈಟೆಕ್‌ ರಸ್ತೆಗಳ ನಗರಿ’ಯಾಗಲಿದೆ ಎಂಬ ನಿರೀಕ್ಷೆ ತಜ್ಞರದ್ದಾಗಿದೆ.

ಕೆರೆ ಕಾಮಗಾರಿಗೆ 22 ಪ್ಯಾಕೇಜ್‌: ‘ಕೆರೆಗಳಿಗೆ ಸಂಬಂಧಿಸಿದಂತೆ 67 ಕಾಮಗಾರಿಗಳ 22 ಪ್ಯಾಕೇಜ್‌ ಮಾಡ ಲಾಗಿದೆ. ಇದರಲ್ಲಿ 12 ಪ್ಯಾಕೇಜ್‌ಗಳಿಗೆ ಟೆಂಡರ್‌ ಕರೆಯಲಾಗಿದೆ. ಉಳಿದ 10 ಪ್ಯಾಕೇಜ್‌ಗಳಲ್ಲಿ 11 ಕೆರೆ ವಿಸ್ತೃತ ಯೋಜನಾ ವರದಿಯನ್ನು ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ(ಕೆಎಲ್‌ಸಿಡಿಎ) ಸಲ್ಲಿಸಲಾಗಿದೆ. ಅಲ್ಲಿಂದ ಸಮ್ಮತಿ ದೊರೆತ ಕೂಡಲೇ ಟೆಂಡರ್‌ ಕರೆಯಲಾಗುತ್ತದೆ’ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್‌ ಮೋಹನ್‌ಕೃಷ್ಣ ತಿಳಿಸಿದರು.

ಯೋಜನೆ: ‘ಜೆ.ಸಿ. ರಸ್ತೆ ಮೇಲ್ಸೇತುವೆ ಸೇರಿದಂತೆ ಗ್ರೇಡ್‌ ಸೆಪರೇಟರ್‌, ಟೆಂಡರ್‌ಶ್ಯೂರ್‌ ಕಾಮಗಾರಿಗಳಿಗೆ ಡಿಪಿಆರ್‌ ಸಿದ್ಧಪಡಿಸಿ ಟೆಂಡರ್‌ ಆಹ್ವಾನಿಸಲಾಗಿದೆ. ಕೆಲವು ದಿನಗಳಲ್ಲಿ ಎಲ್ಲವೂ ಅಂತಿಮಗೊಳ್ಳಲಿವೆ’ ಎಂದು ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್‌ ಅವರು ತಿಳಿಸಿದರು.

ಷರತ್ತುಗಳು: ಅಮೃತ ನಗರೋತ್ಥಾನದಲ್ಲಿ ಕಾಮಗಾರಿಗಳಿಗೆ ಅನುಮೋದನೆ ನೀಡಿರುವ ನಗರಾಭಿವೃದ್ಧಿ ಇಲಾಖೆ, 10 ಷರತ್ತುಗಳನ್ನೂ ವಿಧಿಸಿದೆ. ಟೆಂಡರ್‌ಗೆ ಕಾಮಗಾರಿ ಪುನರಾವರ್ತನೆ ಆಗಿಲ್ಲ ಎಂಬುದನ್ನು ಮುಖ್ಯ ಆಯುಕ್ತರು ಖಚಿತ ಪಡಿಸಿಕೊಳ್ಳಬೇಕು.ಕಾಮಗಾರಿಗಳನ್ನು ₹10 ಕೋಟಿಗಳಿಗೆ ಕಡಿಮೆ ಇಲ್ಲದಂತೆ ಪ್ಯಾಕೇಜ್‌ಗಳಾಗಿ ಎಲ್ಲ ಕಾಯ್ದೆಗಳನ್ನು ಅನುಸರಿಸಿ, ತುರ್ತಾಗಿ ಅನುಷ್ಠಾನಗೊಳಿಸಬೇಕು.

₹10 ಕೋಟಿ ಮೀರಿದ ಕಾಮಗಾರಿಗಳನ್ನು ವಿಭಜಿಸಬಾರದು. ಕಾಯ್ದೆ ಪ್ರಕಾರ, ಒಂದು ತಿಂಗಳಲ್ಲಿ ಕ್ರಿಯಾಯೋಜನೆಗಳಿಗೆ ಟೆಂಡರ್‌ ಕರೆದು, ಮುಖ್ಯ ಆಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಕಾಮಗಾರಿಗಳ ಗುಣಮಟ್ಟ ನಿರ್ವಹಣೆ ಪ್ರಧಾನ ಹಾಗೂ ಮುಖ್ಯ ಎಂಜಿನಿಯರ್‌ ಜವಾಬ್ದಾರಿ. ಗುಣಮಟ್ಟದ ಬಗ್ಗೆ ಪ್ರತಿಷ್ಠಿತ ಸಂಸ್ಥೆಗಳಿಂದ ತಪಾಸಣೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಕಾಮಗಾರಿಗಳ ಅನುಷ್ಠಾನ ವೇಳಾಪಟ್ಟಿಯನ್ನು ಪ್ರತಿ ತಿಂಗಳು ಸಲ್ಲಿಸಬೇಕು. ಎಲ್ಲ ಕಾಯ್ದೆಗಳ ನಿಯಮಾನುಸಾರ ವೆಚ್ಚ ಕೈಪಿಡಿ ತಯಾರಿಸಬೇಕು. ಅನುಮೋದಿತ ಕಾಮಗಾರಿಗಳನ್ನು ಬದಲಾವಣೆ ಮಾಡುವಂತಿಲ್ಲ. ಬೇರೆ ಕಾಮಗಾರಿಗೆ ಉಪಯೋಗಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT