ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ ಮಾಲೀಕನ ಹತ್ಯೆ; ವಸತಿಗೃಹದಲ್ಲಿ ಸಿಕ್ಕಿಬಿದ್ದ ಆರೋಪಿಗಳು

Last Updated 17 ಅಕ್ಟೋಬರ್ 2020, 20:47 IST
ಅಕ್ಷರ ಗಾತ್ರ

ಬೆಂಗಳೂರು: ಬ್ರಿಗೇಡ್ ರಸ್ತೆ ಬಳಿಯ ‘ಡ್ಯುಯೆಟ್’ ಬಾರ್ ಮಾಲೀಕ ಮನೀಶ್ ಶೆಟ್ಟಿ (45) ಎಂಬಾತನನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳು, ಗಾಂಧಿನಗರದ ವಸತಿಗೃಹವೊಂದರಲ್ಲಿ ಶನಿವಾರ ಬೆಳಿಗ್ಗೆ ಕೇಂದ್ರ ವಿಭಾಗದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

‘ಇದೇ 15ರಂದು ರಾತ್ರಿ 9ರ ಸುಮಾರಿಗೆ ಬಾರ್ ಎದುರೇ ಮನೀಶ್ ಶೆಟ್ಟಿಯನ್ನು ಗುಂಡು ಹಾರಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸದ್ಯ ನಾಲ್ವರನ್ನು ಬಂಧಿಸಲಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗುವುದು’ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಹೇಳಿದರು.

‘ಮಡಿಕೇರಿ ಜಿಲ್ಲೆ ಸೋಮವಾರಪೇಟೆಯ ಶಶಿಕಿರಣ್ ಅಲಿಯಾಸ್ ಮುನ್ನಾ (45), ನಿತ್ಯ (29), ಮಂಗಳೂರಿನ ಗಣೇಶ್ (39) ಹಾಗೂ ಬಂಟ್ವಾಳದ ಅಕ್ಷಯ್ (26) ಬಂಧಿತರು’ ಎಂದೂ ತಿಳಿಸಿದರು.

‘ಹತ್ಯೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಗಳು, ಗಾಂಧಿನಗರದ ವಸತಿಗೃಹದಲ್ಲಿ ಉಳಿದುಕೊಂಡಿದ್ದರು. ಕಬ್ಬನ್‌ ಪಾರ್ಕ್‌ ಎಸಿಪಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.’

‘ಕೃತ್ಯಕ್ಕೆ ಬಳಸಿದ್ದ ಮಚ್ಚನ್ನು ಹೊಸೂರು ರಸ್ತೆಯಲ್ಲಿರುವ ಸ್ಮಶಾನದಲ್ಲಿ ಬಚ್ಚಿಟ್ಟಿದ್ದರು. ಅದನ್ನು ಜಪ್ತಿ ಮಾಡಲು ಆರೋಪಿಗಳಾದ ಶಶಿಕಿರಣ್ ಹಾಗೂ ಅಕ್ಷಯ್‌ನನ್ನು ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಜೊತೆಗಿದ್ದ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆ ಮಾಡಿದ್ದರು. ಆತ್ಮರಕ್ಷಣೆಗಾಗಿ ಪೊಲೀಸರು, ಇಬ್ಬರಿಗೂ ಗುಂಡು ಹೊಡೆದಿದ್ದಾರೆ. ಗಾಯಗೊಂಡಿರುವ ಅವರನ್ನು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದೂ ಅನುಚೇತ್‌ ತಿಳಿಸಿದರು.

ನಾಲ್ಕು ತಿಂಗಳಿನಿಂದ ಹಿಂಬಾಲಿಸಿ ಕೃತ್ಯ: ‘ಅಪರಾಧ ಹಿನ್ನೆಲೆಯುಳ್ಳ ಮನೀಶ್‌ ಶೆಟ್ಟಿ, ಹಲವು ಪ್ರಕರಣದ ಆರೋಪಿ. ಭೂಗತ ಪಾತಕಿ ರವಿ ಪೂಜಾರಿ, ಕಲಿ ಯೋಗೀಶ್ ಸೇರಿದಂತೆ ಹಲವರ ಜೊತೆ ಒಡನಾಟ ಹೊಂದಿದ್ದ. ಹಳೇ ವೈಷಮ್ಯದಿಂದಾಗಿ ಆತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಶಶಿಕಿರಣ್ ಹಾಗೂ ಸಹಚರರು, ನಾಲ್ಕು ತಿಂಗಳಿನಿಂದ ಮನೀಶ್ ಶೆಟ್ಟಿಯನ್ನು ಹಿಂಬಾಲಿಸಿ ಕೃತ್ಯ ಎಸಗಿದ್ದಾರೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ನಾಲ್ಕು ತಿಂಗಳಿನಿಂದಲೇ ಗಾಂಧಿನಗರದ ವಸತಿಗೃಹದಲ್ಲಿ ಉಳಿದುಕೊಂಡಿದ್ದ ಆರೋಪಿಗಳು, ನಿತ್ಯವೂ ಬ್ರಿಗೇಡ್‌ ರಸ್ತೆಗೆ ಬಂದು ಮನೀಶ್‌ ಶೆಟ್ಟಿ ಚಲನವಲನ ಬಗ್ಗೆ ಗಮನಿಸುತ್ತಿದ್ದರು. ಅ. 15ರಂದು ರಾತ್ರಿ ಗನ್‌ನಿಂದ ಗುಂಡು ಹಾರಿಸಿ ಮಚ್ಚಿನಿಂದ ಕೊಚ್ಚಿ ಮನೀಶ್‌ನನ್ನು ಹತ್ಯೆ ಮಾಡಿದ್ದರು’ ಎಂದು ಅವರು ತಿಳಿಸಿದರು.

ಜೋಡಿ ಕೊಲೆ ಆರೋಪಿ:‘ಆರೋಪಿ ಶಶಿಕಿರಣ್, ಮಂಗಳೂರಿನ ಉಲ್ಲಾಳ ಠಾಣೆ ವ್ಯಾಪ್ತಿಯಲ್ಲಿ 2000ರಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿ. 2002ರಲ್ಲಿ ಕಾರ್ಕಳದಲ್ಲಿ ನಡೆದಿದ್ದ ಹಲ್ಲೆ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ. ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1998ರಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣದಲ್ಲೂ ಆರೋಪಿಯಾಗಿದ್ದ’ ಎಂದು ಡಿಸಿಪಿ ಅನುಚೇತ್ ಹೇಳಿದರು.

ಹತ್ಯೆ ಹಿಂದೆ ವಿಕ್ಕಿ ಶೆಟ್ಟಿ?

‘ಮಂಗಳೂರಿನಲ್ಲಿ ಇತ್ತೀಚೆಗೆ ಕಿಶೋರ್ ಎಂಬಾತನ ಕೊಲೆ ಆಗಿತ್ತು. ಅದರಲ್ಲಿ ಮನೀಶ್ ಹೆಸರು ಕೇಳಿಬಂದಿತ್ತು. ಅದಕ್ಕೆ ಪ್ರತೀಕಾರವಾಗಿ ಇದೀಗ ಮನೀಶ್‌ ಹತ್ಯೆಯಾಗಿರುವ ಅನುಮಾನವಿದ್ದು, ಇದರ ಹಿಂದೆ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಹೆಸರು ಕೇಳಿಬಂದಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT